ಪಿಎಸ್ಐ ಸುಖಾನಂದ ಶಿಂಧೆ- ಕವಿ ಗೋಗೇರಿ ಮೊಮ್ಮಗನನ್ನ ಎರಡೇ ದಿನದ ಹಿಂದೆ ಥಳಿಸಿದ್ದಾ…!?
1 min readಹುಬ್ಬಳ್ಳಿ: ನಗರದ ಗುಡಿಹಾಳ ರಸ್ತೆಯಲ್ಲಿ ಕಾರ್ಮಿಕನೋರ್ವನ ಮೇಲೆ ಹಲ್ಲೆ ಮಾಡಿರುವ ಹಳೇಹುಬ್ಬಳ್ಳಿ ಠಾಣೆಯ ಪಿಎಸ್ಐ ಸುಖಾನಂದ ಶಿಂಧೆ ಎರಡು ದಿನದ ಹಿಂದೆ ಇತ್ತೀಚೆಗೆ ನಿಧನರಾದ ಎಂ.ಡಿ.ಗೋಗೇರಿ ಅವರ ಮೊಮ್ಮಗನನ್ನೂ ಥಳಿಸಿರುವ ಬಗ್ಗೆ ನಿಖರವಾದ ಮಾಹಿತಿ ಲಭಿಸಿದೆ.
ಬಂದೋಬಸ್ತ್ ವೇಳೆಯಲ್ಲಿ ಕಂಡ ಕಂಡವರ ವಿರುದ್ಧ “ಸಿಂಗಂ” ಆಗುವ ಪಿಎಸ್ಐ ಸುಖಾನಂದ ಶಿಂಧೆ, ಎರಡು ದಿನಗಳ ಹಿಂದೆ ಆನಂದನಗರದ ರಸ್ತೆಯಲ್ಲಿ ಯುವಕನನ್ನ ಮನ ಬಂದಂತೆ ಥಳಿಸಿದ್ದರೆಂದು ಗೊತ್ತಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆಯೂ ರಾಜಿ ಪಂಚಾಯತಿ ಮಾಡುವ ಪ್ರಯತ್ನಗಳೂ ನಡೆದಿದ್ದವೆಂದು ಗೊತ್ತಾಗಿದೆ.
ಹಳೇಹುಬ್ಬಳ್ಳಿ ಠಾಣೆಯಲ್ಲಿಯೇ ಹಿಂದಿನ ಇನ್ಸಪೆಕ್ಟರ್ ಮಾರುತಿ ಗುಳ್ಳಾರಿಯವರು ಕೂಡಾ, ಈತನನ್ನ ಪದೇ ಪದೇ ಉಳಿಸುವ ಪ್ರಯತ್ನ ಮಾಡಿದ್ದರೆಂದು ಗೊತ್ತಾಗಿದೆ. ಆದರೆ, ಠಾಣೆಗೆ ಶಿವಾನಂದ ಕಮತಗಿಯವರು ಬಂದ ಮೇಲೆ, ಈತನ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಗಿತ್ತೆಂದು ಹೇಳಲಾಗಿದೆ.
ಸೋಜಿಗವೆಂದರೇ, ಠಾಣೆಯ ಹೊರಗಡೆ ಹೋದ ತಕ್ಷಣವೇ, ತಾನಿನ್ನೂ ಒಂದೇ ಒಂದು ಠಾಣೆಯನ್ನ ನಿಭಾಯಿಸುವ ಶಕ್ತಿ ಹೊಂದಿಲ್ಲವೆಂದು ಗೊತ್ತಿದ್ದರೂ, ಜನರೊಂದಿಗೆ ಮಾತ್ರ ‘ಸಿಂಗಂ’ ಶೈಲಿಯನ್ನೂ ಬಿಟ್ಟಿರಲಿಲ್ಲವೆಂದು ಹೇಳಲಾಗಿದೆ.
ಪೊಲೀಸ್ ಠಾಣೆಯ ಗೌರವ ಕಾಪಾಡುವ ಉದ್ದೇಶದಿಂದ ಠಾಣೆಯಲ್ಲಿನ ಹಲವರು ಪಿಎಸ್ಐ ಸುಖಾನಂದ ಶಿಂಧೆ ಅವರ, ಆಟಾಟೋಪವನ್ನ ನೋಡಿಯೂ ನೋಡಿಲ್ಲದಂತೆ ನಡೆದುಕೊಂಡು ಬರುತ್ತಿದ್ದರೆಂದು ಗೊತ್ತಾಗಿದ್ದು, ಇದೀಗ ಬಹಿರಂಗಗೊಂಡ ಪ್ರಕರಣದಿಂದ ಪೊಲೀಸ್ ಕಮೀಷನರ್ ತಕ್ಕ ಪಾಠವನ್ನ ಇವರಿಗೆ ಕಲಿಸಲಿದ್ದಾರೆಂದು ಹೇಳಲಾಗಿದೆ.