ಮೇಯರ್ ಚುನಾವಣೆ: ಧಾರವಾಡಕ್ಕೆ “ಕಮಲವೋ ಸೂರ್ಯಕಾಂತಿಯೋ”…!

ಹುಬ್ಬಳ್ಳಿ: ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಧಾರವಾಡಕ್ಕೆ ಕಮಲ ಪಡೆ ಮೇಯರ್ ಸ್ಥಾನವನ್ನ ಕೊಡುತ್ತೋ ಅಥವಾ ಇಲ್ಲವೋ ಎಂಬ ಜಿಜ್ಞಾಸೆ ಕೊನೆ ಕ್ಷಣದಲ್ಲೂ ಮುಂದುವರೆದಿದೆ.

ಈ ಬಾರಿ ಮೇಯರ್ ಸ್ಥಾನವನ್ನ ಧಾರವಾಡಕ್ಕೆ ಕೊಡಬೇಕೆಂಬ ಒತ್ತಾಯ ಹೆಚ್ಚಾಗಿದ್ದು, ಅದಕ್ಕೆ ಪಕ್ಷದ ಪ್ರಮುಖರು ಒಪ್ಪಿಕೊಂಡರೇ ವಿಜಯಾನಂದ ಶೆಟ್ಟಿ ಮೇಯರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲವೆಂದು ಹೇಳಲಾಗಿದೆ.

ಕೊನೆಗಳಿಗೆಯಲ್ಲಿ ಮತ್ತೆ ರಾಜಕೀಯ ಡ್ರಾಮಾ ನಡೆದರೆ ಹುಬ್ಬಳ್ಳಿಯ ವೀರಣ್ಣ ಸವಡಿ ಎರಡನೇಯ ಬಾರಿಗೆ ಅವಳಿನಗರದ ಪ್ರಥಮ ಪ್ರಜೆಯಾಗಲಿದ್ದಾರೆಂಬುದು ಸ್ಪಷ್ಟ. ಆಗ ಧಾರವಾಡಕ್ಕೆ ಉಳಿಯುವುದು ಕೇವಲ ಸೂರ್ಯಕಾಂತಿಯಷ್ಟೇ ಎಂದು ಹಲವರು ವ್ಯಂಗ್ಯವಾಡುತ್ತಿದ್ದಾರೆ.
ಕಳೆದ ರಾತ್ರಿ ಮೇಯರ್ ಬಗ್ಗೆ ಸ್ಪಷ್ಟತೆ ಬರದೇ ಇರುವುದು ಬಿಜೆಪಿಯಲ್ಲಿ ಈಗಲೂ ಮುಂದುವರೆದಿದೆ. ಧಾರವಾಡಕ್ಕೆ ಬೇರೆ ಮಹಾನಗರ ಪಾಲಿಕೆ ಆಗಬೇಕೆಂಬ ಕೂಗು ಇರುವಾಗಲೇ ಧಾರವಾಡಕ್ಕೆ ಮೇಯರ್ ಸ್ಥಾನ ಸಿಗದೇ ಇದ್ದರೇ, ಆ ಹೋರಾಟ ಮತ್ತಷ್ಟು ಬಲಗೊಳ್ಳುವ ಸಾಧ್ಯತೆಯಿದೆ.
ಮೇಯರ್ ಮತ್ತು ಉಪಮೇಯರ್ ಚುನಾವಣೆ ಸಮಯದಲ್ಲಿ ಮಾಧ್ಯಮದವರನ್ನ ಹೊರಗಿಟ್ಟು ಚುನಾವಣೆ ನಡೆಸಲು ಮುಂದಾಗಿದ್ದಾರೆಂದು ಹೇಳಲಾಗಿದ್ದು, ಇದರ ಒಳಮರ್ಮವೇನು ಎಂಬುದು ಕೂಡಾ ಯಕ್ಷಪ್ರಶ್ನೆಯಾಗಿ ಕಾಡುತ್ತಿದೆ.