Posts Slider

Karnataka Voice

Latest Kannada News

ಮಂಗಳೂರಲ್ಲಿ ಬಾಂಬ್ ಇಟ್ಟಿದ್ದು ಆದಿತ್ಯರಾವ್….?

Spread the love

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿಯಲ್ಲಿ ಕಂಡುಬಂದಿದ್ದ ಶಂಕಿತ ವ್ಯಕ್ತಿಯ ಸುಳಿವು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಉಡುಪಿಯ ಮಣಿಪಾಲ ನಿವಾಸಿ ಆದಿತ್ಯ ರಾವ್ (40) ಎಂಬಾತನೇ ‘ಶಂಕಿತ ವ್ಯಕ್ತಿ’ ಎನ್ನುವುದು ಬಹುತೇಕ ಖಚಿತವಾಗಿದ್ದು, ಈತನನ್ನು ಪತ್ತೆ ಹಚ್ಚಲು ಎರಡು ತಂಡಗಳು ಬಲೆ ಬೀಸಿವೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಬಗ್ಗೆ ಪೊಲೀಸರು ಈವರೆಗೆ ಅಧಿಕೃತ ಪ್ರಕಟನೆ ನೀಡಿಲ್ಲ.

ಶಂಕಿತ ಆದಿತ್ಯ ರಾವ್ 2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮೆಜಿಸ್ಟಿಕ್‌ ನಲ್ಲಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣವನ್ನು ಸ್ಪೋಟ ನಡೆಸುವುದಾಗಿ ಹುಸಿ ಬೆದರಿಕೆ ಕರೆ ಮಾಡಿ, ಬಂಧನಕ್ಕೆ ಒಳಗಾಗಿದ್ದನು. ಈತ ಒಟ್ಟು ಮೂರು ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಮಾಡಿದ್ದ ಆರೋಪದಲ್ಲಿ 2018ರ ಆಗಸ್ಟ್ ನಲ್ಲಿ ಬಂಧಿಸಲಾಗಿತ್ತು. ಬಳಿಕ ಜೈಲುವಾಸ ಅನುಭವಿಸಿದ್ದ.

ಈತ ಇಂಜಿನಿಯರಿಂಗ್ ಮತ್ತು ಎಂಬಿಎ ಸ್ನಾತಕೋತ್ತರ ಪದವೀಧರನಾಗಿದ್ದ. ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿಯ ಹುದ್ದೆಗೆ ತನ್ನನ್ನು ನೇಮಕ ಮಾಡಿಕೊಳ್ಳಲಿಲ್ಲ ಎಂದು ಕೋಪಗೊಂಡು ಕೃತ್ಯ ಎಸಗಿದ್ದ ಎಂದು ಹೇಳಲಾಗಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ವೊಂದರಲ್ಲಿ ಸ್ಪೋಟಕ ಇಟ್ಟಿದ್ದ ಶಂಕಿತನ ಮುಖ ಚಹರೆ ಮತ್ತು ಆದಿತ್ಯ ರಾವ್ ನಡುವಿನ ಹೋಲಿಕೆಯನ್ನು ಪೊಲೀಸರು ಗುರುತಿಸಿದ್ದಾರೆ. ಜತೆಗೆ, ಬೆಂಗಳೂರಿನಲ್ಲಿ ಆದಿತ್ಯ ರಾವ್ ಮಾಡಿದ್ದ ಬೆದರಿಕೆ ಕರೆ ಹಾಗೂ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಬೆದರಿಕೆ ಕರೆಯ ಧ್ವನಿ ಹೋಲಿಕೆಯಾಗುತ್ತಿದೆ ಎಂದು ಹೇಳಲಾಗಿದೆ.

ದುಷ್ಕೃತ್ಯದಲ್ಲಿ ಇಬ್ಬರು ಭಾಗಿ ?

ವಿಮಾನ ನಿಲ್ದಾಣದಲ್ಲಿ ನಡೆದ ದುಷ್ಕೃತ್ಯದಲ್ಲಿ ಇಬ್ಬರು ವ್ಯಕ್ತಿಗಳು ಭಾಗಿಯಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬ್ಯಾಗ್‌ನಲ್ಲಿ ಸ್ಪೋಟಕ ಇಟ್ಟು ಹೋದ ವ್ಯಕ್ತಿ ಆಟೊ ರಿಕ್ಷಾದಲ್ಲಿ ಬಂದು ವಿಮಾನ ನಿಲ್ದಾಣದ ಕಾರು ಪಾರ್ಕಿಂಗ್ ಸ್ಥಳಕ್ಕೆ ತಲುಪಿದ್ದಾನೆ. ಅಲ್ಲಿಂದ ಎಸ್ಕಲೇಟರ್ ಮೂಲಕ ಮೇಲೆ ಬಂದು ವಿಮಾನ ನಿಲ್ದಾಣದ ಪ್ರವೇಶ ದ್ವಾರ ಸಮೀಪದ ಸಾಲು ಕುರ್ಚಿಗಳ ಮೇಲೆ ಬ್ಯಾಗ್ ಇಟ್ಟು ತೆರಳಿದ್ದ. ಬಳಿಕ ಆರೋಪಿಯು ರಿಕ್ಷಾ ಇಳಿದು ಎಸ್ಕಲೇಟರ್ ನತ್ತ ನಡೆದುಕೊಂಡು ತೆರಳುತ್ತಿದ್ದ ದೃಶ್ಯವು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಸಿಸಿಟಿವಿ ಕ್ಯಾಮೆರಾದಲ್ಲಿ ಮುಖ ಸೆರೆಯಾಗಬಹುದಾದ ಸ್ಥಳಗಳಲ್ಲಿ ಆತ ಎಲ್ಲಿಯೂ ನಡೆದಾಡಿಲ್ಲ. ಇವುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ಪೊಲೀಸರು, ಈ ಮೊದಲೇ ಅನ್ಯ ವ್ಯಕ್ತಿಯೋರ್ವ ನಿಲ್ದಾಣಕ್ಕೆ ಆಗಮಿಸಿ ಆರೋಪಿಯು ಹೋಗಬೇಕಾದ ಮಾರ್ಗದ ಕುರಿತು ನಕ್ಷೆ ನೀಡಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮಂಗಳೂರು ಪೊಲೀಸರು ಹಲವು ಆಯಾಮಗಳಿಂದ ಶೋಧ ಕಾರ್ಯ ನಡೆಸುತ್ತಿದ್ದು, ಈಗಾಗಲೇ ಆಟೊರಿಕ್ಷಾ ಚಾಲಕ ಸಹಿತ ಶಂಕಿತ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ, ಸಾರ್ವಜನಿಕರು ನೀಡಿದ ಮಾಹಿತಿ ಅನುಗುಣವಾಗಿಯೂ ತನಿಖೆ ನಡೆಯುತ್ತಿದ್ದು, ತನಿಖೆಯು ತೀವ್ರಗತಿಯಲ್ಲಿ ಚುರುಕು ಪಡೆದಿದೆ ಎಂದು ತಿಳಿದುಬಂದಿದೆ.

ಉಡುಪಿ ವರದಿ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ್ದ ವ್ಯಕ್ತಿ ಮಣಿಪಾಲದ ನಿವಾಸಿ ಎಂಬ ಮಾಹಿತಿ ಮಂಗಳೂರು ಸಿಸಿಬಿ ಪೊಲೀಸರಿಗೆ ದೊರೆತಿದ್ದು, ಅದರಂತೆ ಇಂದು ಮಣಿಪಾಲಕ್ಕೆ ಆಗಮಿಸಿದ ಪೊಲೀಸರು ಆತನಿಗಾಗಿ ತೀವ್ರ ಶೋಧ ಕಾರ್ಯ ನಡೆಸಿದ್ದಾರೆ.

ಸ್ಪೋಟಕ ವಸ್ತು ಇರಿಸಿರುವ ವ್ಯಕ್ತಿ ಮಣಿಪಾಲ ಮಣ್ಣಪಳ್ಳದ ಆದಿತ್ಯ ರಾವ್ (40) ಎಂಬ ಮಾಹಿತಿಯಂತೆ ಇಂದು ಬೆಳಗ್ಗೆ ಮಣಿಪಾಲಕ್ಕೆ ಆಗಮಿಸಿದ ಮಂಗಳೂರು ಸಿಸಿಬಿ ಪೊಲೀಸರು, ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಮಣ್ಣಪಳ್ಳದಲ್ಲಿರುವ ಆತನ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆದರೆ ಆ ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ. ಆತನನ್ನು ಕೊನೆಯದಾಗಿ ಯಾರು ಕೂಡ ನೋಡಿಲ್ಲ ಎಂಬ ಮಾಹಿತಿ ಸ್ಥಳೀಯರಿಂದ ಪೊಲೀಸರಿಗೆ ತಿಳಿದುಬಂತು. ಈತನ ತಾಯಿ ತೀರಿ ಹೋಗಿದ್ದು, ತಂದೆ ಮಂಗಳೂರಿನಲ್ಲಿ ನೆಲೆಸಿದ್ದರೆನ್ನಲಾಗಿದೆ.

ನಂತರ ಪೊಲೀಸರು ಮಣಿಪಾಲದ ಬಸ್ ನಿಲ್ದಾಣ, ಲಾಡ್ಜ್‌ಗಳಲ್ಲಿಯೂ ಆತನಿಗೆ ತೀವ್ರ ಶೋಧ ಕಾರ್ಯ ನಡೆಸಿ, ಸಂಜೆ ವೇಳೆ ಮಂಗಳೂರಿಗೆ ಮರಳಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


Spread the love

Leave a Reply

Your email address will not be published. Required fields are marked *