ಮೈಲಾರದಲ್ಲಿ “ಪಾದಗಟ್ಟಿ” ತ್ರಿಶೂಲ ಮುರಿದು ಬಿತ್ತು…!
1 min readಜನರೇ ಇಲ್ಲದೆ ಜಾತ್ರೆ ಮಾಡಿದ್ದರ ಪರಿಣಾಮವೇ ಪಾದಗಟ್ಟಿ (ಶಿಬಾರಗಟ್ಟಿ) ಮುರಿದು ಬೀಳಲು ಕಾರಣವೆನ್ನುವುದು ಭಕ್ತರ ಅಂಬೋಣ..
ಬಳ್ಳಾರಿ: ಉತ್ಸವ ಮೂರ್ತಿ ಹೊರಡುವಾಗ ಶಾರ್ಟ ಸರ್ಕ್ಯೂಟ್ ನಿಂದ ಮೈಲಾರಲಿಂಗೇಶ್ವರ ದೇವಾಲಯದ ಮುಂಭಾಗದಲ್ಲಿರುವ ಪಾದಗಟ್ಟಿಯ ತ್ರಿಶೂಲ ಮುರಿದು ಬಿದ್ದ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರದಲ್ಲಿ ನಡೆದಿದೆ.
ಇದರಿಂದ ಜಾತ್ರೆ ಸಂಪನ್ನವಾಗುವ ಮುನ್ನವೆ ಅಪಶಕುನವಾಯಿತಾ.. ? ಎನ್ನುವ ಪ್ರಶ್ನೆ ಮೂಡಿದ್ದು, ಭಕ್ತರ ಮನದಲ್ಲಿ ಆತಂಕದ ಛಾಯೆ ಮೂಡಿದೆ. ಡೆಂಕನಮರಡಿಗೆ ಮೌನ ಸವಾರಿ ನಡೆಯುವಾಗ ಅವಘಡ ಸಂಭವಿಸಿದೆ.
ಭಕ್ತರು ಕ್ಷೇತ್ರಕ್ಕೆ ಬರಲಿಲ್ಲ ಎಂಬ ಕಾರಣಕ್ಕೆ ಮೈಲಾರಲಿಂಗಸ್ವಾಮಿ ಮುನಿಸಿಕೊಂಡರಾ..? ನನ್ನಿಂದಾ ನನ್ನ ಭಕ್ತರನ್ನಾ ದೂರ ಮಾಡಿದ್ರಿ ಎಂದು ಸಿಟ್ಟು ತೋರಿಸಿದನಾ ಭಂಡಾರದ ಒಡೆಯ..? ಎನ್ನುವಂತಾಗಿದೆ.
ಭಕ್ತರಿಲ್ಲದೆ ಜಾತ್ರೆ ಮಾಡುತ್ತಿರುವುದು ಇತಿಹಾಸದಲ್ಲಿ ಮೊದಲಾಗಿದೆ. ದೊಡ್ಡ ದೊಡ್ಡ ಜಾತ್ರೆಗೆ ಅವಕಾಶವನ್ನ ಸರ್ಕಾರ ನೀಡಿತ್ತಾದರೂ, ಮೈಲಾರ ಜಾತ್ರೆಗೆ ಭಕ್ತರು ಬರದಂತೆ ಜಿಲ್ಲಾಡಳಿತ ಆದೇಶ ನೀಡಿತ್ತು. ಭಕ್ತರು ಪ್ರತಿಭಟನೆ ಮಾಡಿ ಜಾತ್ರೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರೂ ಕೂಡಾ ಯಾವುದೇ ಪ್ರಯೋಜನವಾಗಿರಲಿಲ್ಲ.
ಈ ಘಟನೆಯಿಂದ ಭಕ್ತರು ಹಲವರು ರೀತಿಯಲ್ಲಿ ವ್ಯಾಖ್ಯಾನ ಮಾಡುತ್ತಿದ್ದು, ಮುಂದಿನ ದಿನಗಳೇ ಇದಕ್ಕೆ ಉತ್ತರ ನೀಡಲಿವೆ.