Posts Slider

Karnataka Voice

Latest Kannada News

ಹೊಸ ಸಿನಿಮಾ ಘೋಷಿಸಿದ ಕೆವಿಎನ್… ಶಿವಣ್ಣನ ಜೊತೆ ಕೈ ಜೋಡಿಸಿದ ಪವನ್ ಒಡೆಯರ್

Spread the love

ಸ್ಟಾರ್ ನಟರ ಜೊತೆ ದೊಡ್ಡ ದೊಡ್ಡ ಸಿನಿಮಾಗಳ ನಿರ್ಮಾಣದಲ್ಲಿ ಕೆವಿಎನ್ ಸಂಸ್ಥೆ ಹೆಸರು ಮಾಡಿದೆ.‌ ‘ಟಾಕ್ಸಿಕ್’, ‘ಕೆಡಿ’, ‘ಜನ ನಾಯಗನ್’ ಮುಂತಾದ ಬಹುನಿರೀಕ್ಷಿತ ಸಿನಿಮಾಗಳು ಈ ಸಂಸ್ಥೆಯಿಂದ ಮೂಡಿಬರುತ್ತಿವೆ. ಆ ಮೂಲಕ ದಕ್ಷಿಣ ಭಾರತ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾಗಿ ‘ಕೆವಿಎನ್ ಪ್ರೊಡಕ್ಷನ್ಸ್’ ತೆಲುಗು ಚಿತ್ರರಂಗಕ್ಕೂ ಎಂಟ್ರಿ ಕೊಟ್ಟಿದೆ. ಇದೀಗ ಈ‌ ಸಂಸ್ಥೆಯ ಶಿವಣ್ಣ ಜೊತೆ ಕೈ ಜೋಡಿಸಿದೆ.

ದಕ್ಷಿಣ ಚಿತ್ರರಂಗದ ಖ್ಯಾತ ನಿರ್ಮಾಣ‌ ಸಂಸ್ಥೆ ಕೆವಿಎನ್ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ‌ಯಾಗಿದೆ. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಸಾರಥಿ. ಸ್ಯಾಂಡಲ್‌ವುಡ್‌ನಲ್ಲಿ ಅನೇಕ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪವನ್‌ ಒಡೆಯರ್‌ ಪುನೀತ್‌ ರಾಜ್‌ಕುಮಾರ್‌ಗೆ ಎರಡು ಸಿನಿಮಾಗಳನ್ನು ಮಾಡಿದ್ದಾರೆ. ಶಿವರಾಜ್‌ಕುಮಾರ್‌ ಅವರಿಗೆ ಇದೇ ಮೊದಲ ಬಾರಿಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಸೆಪ್ಟೆಂಬರ್ 3ರಿಂದ ಆರಂಭವಾಗಲಿದೆ.

ಶಿವಣ್ಣ ಅವರಿಗೆ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಪವನ್ ಒಡೆಯರ್ ಈ ಚಿತ್ರಕ್ಕೆ ಬಂಡವಾಳ ಕೂಡ ಹೂಡುತ್ತಿದ್ದಾರೆ. ಖ್ಯಾತ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಕೂಡ ಈ ಸಿನಿಮಾಗೆ ನಿರ್ಮಾಣ ಮಾಡುತ್ತಿದೆ. ವೆಂಕಟ್ ಕೊನಂಕಿ ಅವರ ಕೆವಿಎನ್ ಸಂಸ್ಥೆ ಹಾಗೂ ಪವನ್ ಒಡೆಯರ್ ಅವರ ಒಡೆಯರ್ ಮೂವೀಸ್ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡಲಿದೆ.

ಎಲ್ಲಿ ಎಲ್ಲಿ ಚಿತ್ರೀಕರಣ..?: ಶಿವಣ್ಣ ಪವನ್ ಕಾಂಬಿನೇಷನ್ ಸಿನಿಮಾದ ಚಿತ್ರೀಕರಣ ದೇಶದ ನಾನಾ ಭಾಗಗಳಲ್ಲಿ ನಡೆಯಲಿದೆ. ಸೆಪ್ಟೆಂಬರ್ ‌ಮೂರರಿಂದ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಆರಂಭವಾಗಲಿದೆ. ಆ ಬಳಿಕ ಮಂಡ್ಯ , ಹಿಮಾಚಲ ಪ್ರದೇಶ, ಮುಂಬೈ ಹಾಗೂ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ತಾರಾ ಬಳಗದಲ್ಲಿ ಯಾರೆಲ್ಲಾ ಇದ್ದಾರೆ..: ಶಿವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿರುವ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಚಿತ್ರತಂಡ ಸಜ್ಜಾಗಿದೆ. ಅದರಂತೆ ತಾರಾ ಬಳಗದಲ್ಲಿ ಜಯರಾಮ್, ಸಾಯಿ ಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಪ್ರಕಾಶ್ ಬೆಳವಾಡಿಯಂತಹ ದಿಗ್ಗಜರ ಜೊತೆ ಸಂಜನಾ ಆನಂದ್ ಹಾಗೂ ದೀಕ್ಷಿತ್ ಶೆಟ್ಟಿಯಂತ ಪ್ರತಿಭಾನ್ವಿತ ಕಲಾದಂಡು ಚಿತ್ರದಲ್ಲಿ ಇರಲಿದೆ.

ಒಂದೊಳ್ಳೆ ಕಮರ್ಷಿಯಲ್ ಎಂಟರ್‌ಟೇನ್‌ಮೆಂಟ್‌ ಕಥಾಹಂದರ ಹೊಂದಿರುವ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ, ಶಶಾಂಕ್ ನಾರಾಯಣ್ ಸಂಕಲನ ಒದಗಿಸಲಿದ್ದಾರೆ. ಶಿವಣ್ಣ , ಪವನ್ ಒಡೆಯರ್ ಹಾಗೂ ಕೆವಿಎನ್ ಮೊದಲ ಬಾರಿಗೆ ಒಂದಾಗುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಸಹಜವಾಗಿ ಹೆಚ್ಚು ಮಾಡಿದೆ.


Spread the love

Leave a Reply

Your email address will not be published. Required fields are marked *