ನಿಮಗೆ ಕ್ಷಮೆ ಕೇಳುತ್ತೇನೆ: ವಕೀಲರ ಮುಂದೆ ಬೇಡಿಕೊಂಡ ಇನ್ಸಪೆಕ್ಟರ್ ಪ್ರಭು ಸೂರಿನ್
1 min readಧಾರವಾಡ: ಸೋಮವಾರದೊಳಗೆ ಅಂತಿಮ ನಿರ್ಣಯ ತೆಗೆದುಕೊಳ್ಳಬೇಕೆಂದು ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಒತ್ತಾಯಿಸಿದ್ದ ವಕೀಲರನ್ನ ಇನ್ಸಪೆಕ್ಟರ್ ಪ್ರಭು ಸೂರಿನ್ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ಕೊನೆಗೂ ಅಂತ್ಯ ಹಾಡಿದ್ದಾರೆ.
ಕಳೆದ ಕೆಲವು ದಿನಗಳಿಂದಲೂ ಗೊಂದಲ ಸೃಷ್ಠಿಸಿದ್ದ ವಕೀಲ ವಿನೋದ ಪಾಟೀಲರ ಬಂಧನ ಪ್ರಕರಣಕ್ಕೆ ಇಂದು ಅಂತಿಮ ತೆರೆ ಎಳೆಯುವಲ್ಲಿ ವಕೀಲರ ಸಂಘ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ನವನಗರದ ಎಪಿಎಂಸಿ ಠಾಣೆಯ ವ್ಯಾಪ್ತಿಯಲ್ಲಿ ಯಾವುದೇ ದೂರು ಬರದೇ ಇದ್ದರೂ ಸ್ವಮೋಟೋ ಕೇಸ್ ನ್ನ ದಾಖಲಿಸಿಕೊಂಡು ವಕೀಲ ವಿನೋದ ಪಾಟೀಲ ಸೇರಿದಂತೆ ಮೂವರನ್ನ ಬಂಧನ ಮಾಡಿ, ವಕೀಲ ವಿನೋದ ಪಾಟೀಲರಿಗೆ ಕೈಕೊಳ ಹಾಕಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.
ಇದೇ ಪ್ರಕರಣ ವಕೀಲರು ಹೋರಾಟಕ್ಕೆ ಇಳಿಯುವಂತೆ ಮಾಡಿತ್ತು. ಅಷ್ಟೇ ಅಲ್ಲ, ಎಪಿಎಂಸಿ ಠಾಣೆಯ ಇನ್ಸಪೆಕ್ಟರ್ ಪ್ರಭು ಸೂರಿನ್ ಅವರನ್ನ ಕಮೀಷನರ್ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಇದರ ಜೊತೆಗೆ ಓರ್ವ ಪೊಲೀಸರನ್ನ ಅಮಾನತ್ತು ಮಾಡಲಾಗಿತ್ತು. ಆದರೂ, ವಕೀಲರು ಹೋರಾಟ ಮುಂದುವರೆಸಿ, ಇನ್ಸಪೆಕ್ಟರ್ ಪ್ರಭು ಸೂರಿನ್ ಅವರನ್ನ ಅಮಾನತ್ತು ಮಾಡಬೇಕೆಂದು ಆಗ್ರಹಿಸಿದ್ದರು. ಇದೀಗ ಇನ್ಸಪೆಕ್ಟರ್ ಪ್ರಭು ಸೂರಿನ್ ಕ್ಷಮೆ ಕೇಳುವ ಮೂಲಕ ಎಲ್ಲ ವಿವಾದಕ್ಕೂ ತೆರೆ ಎಳೆದಿದ್ದಾರೆ.