ಕೈ ಅಭ್ಯರ್ಥಿ ಕುಸುಮಾ ಇಂದೇ ಜ್ಯೋತಿಷಿ ಸಲಹೆಯಂತೆ ನಾಮಪತ್ರ ಸಲ್ಲಿಸಿದ್ಯಾಕೆ..?
1 min readಬೆಂಗಳೂರು: ರಾಜಕೀಯ ಹಾಗೂ ಜ್ಯೋತಿಷ್ಯಕ್ಕೆ ಅವಿನಾಭಾವ ಸಂಬಂಧ. ಜ್ಯೋತಿಷ್ಯವಿಲ್ಲದೆ ರಾಜಕೀಯ ಮಾಡುವುದು ಕಷ್ಟಸಾಧ್ಯ. ಜ್ಯೋತಿಷಿಗಳನ್ನು ಸಂಪರ್ಕಿಸಿದ ಬಳಿಕವೇ ರಾಜಕೀಯ ತೀರ್ಮಾನಗಳನ್ನು ಕೈಗೊಳ್ಳುವುದು ರಾಜಕಾರಣಿಗಳ ನಂಬಿಕೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾತ್ರ ಇದಕ್ಕೆ ಅಪವಾದ ಎಂಬಂತೆ ಇದ್ದಾರೆ. ಆದರೆ ಅವರ ಪಕ್ಷದಲ್ಲಿ ಜ್ಯೋತಿಷ್ಯಶಾಸ್ತ್ರ ನಂಬುವ ರಾಜಕಾರಣಿಗಳಿಗೆ ಕೊರೆತಯಿಲ್ಲ. ಇದೀಗ ಆರ್ ಆರ್ ನಗರ ಉಪಚುನಾವಣೆಯಲ್ಲಿಯೂ ಜ್ಯೋತಿಷ್ಯ ಶಾಸ್ತ್ರದ ಮೊರೆ ಹೋಗಿರುವುದು ಬಹಿರಂಗವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಳೆ ಕುಸುಮಾ ಹನುಮಂತಪ್ಪ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ನಿನ್ನೆಯೆ ಇದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೂ ಹೇಳಿದ್ದಾರೆ. ಜೊತೆಗೆ ಮೊನ್ನೆಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಕುಸುಮಾ ಅವರಿಗೆ ಬಿ ಫಾರಂ ಹಂಚಿಕೆ ಮಾಡಿದ್ದಾರೆ. ಆದರೂ ಕೂಡ ಕುಸುಮಾ ಹನುಮಂತಪ್ಪ ಅವರು ಇಂದೇ ನಾಮಪತ್ರ ಸಲ್ಲಿಸಿದ್ದಾರೆ. ಜ್ಯೋತಿಷಿ ಸಲಹೆಯಂತೆ ಕುಸುಮಾ ಅವರು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಇಂದೇ ನಾಮಪತ್ರ ಸಲ್ಲಿಸಿದ್ದು ಯಾಕೆ? ಯಾವ ಮುಹೂರ್ತದಲ್ಲಿ ಕುಸುಮಾ ನಾಮಪತ್ರ ಸಲ್ಲಿಸಿದ್ದಾರೆ..? ಮುಂದೆ ಓದಿ!
ಮೊದಲೇ ನಿಗದಿಯಾದಂತೆ ನಾಳೆ ಅ. 14 ರಂದು ಬುಧವಾರ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಕುಸುಮಾ ಹನುಮಂತಪ್ಪ ಅವರು ನಾಮಪತ್ರ ಸಲ್ಲಿಬೇಕಾಗಿತ್ತು. ಆದರೆ ಜ್ಯೋತಿಷಿ ಸಲಹೆಯಂತೆ ಇಂದೇ ನಾಮಪತ್ರವನ್ನು ಕುಸುಮಾ ಅವರು ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆಪ್ತ ಜ್ಯೋತಿಷಿ ಡಾ. ಬಿ.ಪಿ ಆರಾಧ್ಯ ಅವರ ಸಲಹೆಯಂತೆ ಇಂದೇ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಳೆ ಬುಧವಾರ (ಅ.14) ತಾರಾಬಲ ಇಲ್ಲದ ಕಾರಣ ಜ್ಯೋತಿಷಿ ಡಾ. ಬಿ.ಪಿ ಆರಾಧ್ಯ ಸಲಹೆಯಂತೆ ಕುಸುಮಾ ಅವರು ಇಂದೇ ನಾಮಪತ್ರ ಸಲ್ಲಿಸಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಯಿಂದ 12.15ರ ಒಳಗೆ ನಾಮಪತ್ರ ಸಲ್ಲಿಸಲು ಡಾ. ಆರಾಧ್ಯ ಅವರು ಸಲಹೆ ನೀಡಿದ್ದರಂತೆ. ಹೀಗಾಗಿ ಇಂದು ಜ್ಯೋತಿಷಿ ಡಾ. ಆರಾಧ್ಯ ಅವರ ಸಮ್ಮುಖದಲ್ಲೇ ಎಚ್. ಕುಸುಮಾ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳವಾರ ಎಚ್. ಕುಸುಮಾ ಅವರ ಹುಟ್ಟಿದ ದಿನ. ಹೀಗಾಗಿ ತಾರಾಬಲದ ಮೇಲೆ ಇಂದು ಮಂಗಳವಾರವೇ ಒಂದು ನಾಮಪತ್ರ ಸಲ್ಲಿಸಲು ಡಾ. ಆರಾಧ್ಯ ಅವರು ಸೂಚಿಸಿದ್ದರಂತೆ. ಹೀಗಾಗಿ ಇಂದು ಒಂದು ಸೆಟ್ ನಾಮಪತ್ರವನ್ನು ಎಚ್. ಕುಸುಮಾ ಅವರು ಸಲ್ಲಿಸಿದ್ದಾರೆ. ನಾಳೆ (ಅ.14)ಯೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಎರಡನೇ ಬಾರಿ ಕುಸುಮಾ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ದಿ. ಐಎಎಸ್ ಅಧಿಕಾರಿ ಡಿ.ಕೆ. ರವಿ ಪತ್ನಿ ಹಾಗೂ ಹನುಮಂತರಾಯಪ್ಪ ಅವರ ಪುತ್ರಿ ಕುಸುಮಾ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ವೇಳೆಯಲ್ಲೂ ಜ್ಯೋತಿಷಿ ಡಾ. ಬಿ.ಪಿ ಆರಾಧ್ಯ ಅವರ ಸಲಹೆಯನ್ನು ಡಿ.ಕೆ. ಶಿವಕುಮಾರ್ ಪಡೆದಿದ್ದರು. ಮಾಜಿ ಶಾಸಕ ಹಾಗೂ ಸಧ್ಯ ಬಿಜೆಪಿ ಅಭ್ಯರ್ಥಿಯಾಗಿರುವ ಮುನಿರತ್ನ ಅವರ ವಿರುದ್ಧ ಕುಸುಮಾ ಅವರನ್ನು ಕಣಕ್ಕಿಳಿಸಿದರೆ ಅವರನ್ನು ಸೋಲಿಸಬಹುದು ಎಂದು ಡಿಕೆಶಿಗೆ ಡಾ. ಆರಾಧ್ಯ ಅವರು ಸಲಹೆ ನೀಡಿದ್ದರಂತೆ. ಹೀಗಾಗಿ ಈಗ ಮತ್ತೊಮ್ಮೆ ಜ್ಯೋತಿಷಿ ಡಾ. ಆರಾಧ್ಯ ಅವರ ಸಲಹೆಯಂತೆ ಮಂಗಳವಾರವೇ ಕುಸುಮಾ ನಾಮಪತ್ರ ಸಲ್ಲಿಸಿದ್ದಾರೆ.