ಹೃದಯಾಘಾತದಿಂದ ಕುರುಬರ ಸಂಘದ ರಾಜ್ಯಾಧ್ಯಕ್ಷ ಸಾವು: ಮಾಜಿ ಸಿಎಂ ಸಂತಾಪ
1 min readಬೆಂಗಳೂರು: ಕರ್ನಾಟಕ ಪ್ರದೇಶ ಕುರುಬರ ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಳ್ಳಾರಿ ಕೃಷ್ಣ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ಕೃಷ್ಣ ಬಳ್ಳಾರಿ ಭಾಗದ ಪ್ರಭಾವಿ ಮುಖಂಡರಾಗಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ಸಿದ್ದರಾಮಯ್ಯ ಅವಧಿಯಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿದ್ದರು.
ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಹಾಲುಮತ ಕುರುಬ ಸಮುದಾಯ ದೇವರಲ್ಲಿ ಪ್ರಾರ್ಥಿಸಿದೆ. ಇವರ ಅಂತ್ಯ ಸಂಸ್ಕಾರ ಬಳ್ಳಾರಿ ಜಿಲ್ಲೆಯ ಸ್ವಗ್ರಾಮ ಕರಿಚೇಡು ಗ್ರಾಮದಲ್ಲಿ ನಡೆಯಲಿದೆ.
ಕೃಷ್ಣ ಅವರ ನಿಧನಕ್ಕೆ ಮಠಾಧೀಶರು, ಅನೇಕ ಗಣ್ಯರು, ಗೆಳೆಯರು, ಬಂಧುಗಳು, ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಹಾಲುಮತ ಮಹಾಸಭಾ, ಮಹಿಳಾ ಕುರುಬರ ಸಂಘ, ಯುವಕ ಸಂಘಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.
ಸಿದ್ದರಾಮಯ್ಯ ಸಂತಾಪ
ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಕೃಷ್ಣ ಅವರ ಅಕಾಲಿಕ ನಿಧನಕ್ಕೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಕೃಷ್ಣ ಅವರ ನಿಧನ ಆಘಾತ ಉಂಟು ಮಾಡಿದೆ. ಸರಳ, ಸಜ್ಜನಿಕೆ ಹಾಗೂ ಸೌಮ್ಯ ಸ್ವಭಾವದ ಕೃಷ್ಣ ಅವರು ಕುರುಬರ ಸಂಘದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಿದ್ದ ಅವರು ಸಂಘದ ಕಾರ್ಯ ಚಟುವಟಿಕೆಗಳ ಯೋಜನೆ ಹಾಕಿಕೊಂಡಿದ್ದರು.
ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ಕುಟುಂಬದವರಿಗೆ ಕೊಡಲಿ ಎಂದು ಸಿದ್ದರಾಮಯ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.