KSRTC ಬಸ್ ಪಲ್ಟಿ ಇಬ್ಬರ ದುರ್ಮರಣ: 6 ಜನರಿಗೆ ಗಂಭೀರ ಗಾಯ- ಬೆಳ್ಳಂಬೆಳಿಗ್ಗೆ ಭೀಕರ ರಸ್ತೆ ಅಪಘಾತ
ಚಿತ್ರದುರ್ಗ: ಐವತ್ತಕ್ಕೂ ಹೆಚ್ಚು ಪ್ರಯಾಣಿಕರನ್ನ ತೆಗೆದುಕೊಂಡು ಹೋಗುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ಅಜಾಗರೂಕತೆಯಿಂದ ಪಲ್ಟಿಯಾಗಿ, ಇಬ್ಬರು ಸ್ಥಳದಲ್ಲಿಯೇ ಸಾವಿಗೀಡಾಗಿ, ಆರು ಜನ ಗಂಭೀರವಾಗಿ ಗಾಯಗೊಂಡ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದ ಶಿವಮೂರ್ತಿ ನಗರದ ಸಮೀಪ ಸಂಭವಿಸಿದೆ.

ಶಹಾಪುರದಿಂದ ಬೆಂಗಳೂರಿಗೆ ಹೊರಟಿದ್ದ ಬಸ್, ಸಂಪೂರ್ಣವಾಗಿ ನೆಲಕಚ್ಚಿದ್ದು ಪ್ರಯಾಣಿಕರಾದ ಹನಮಂತ ಮಾವಿನಕಟ್ಟಿ, ಮಹಾಂತೇಶ ತುಂಬರಗುಂದಿ ಸಾವಿಗೀಡಾಗಿದ್ದಾರೆ. ಇಬ್ಬರು ಯಾದಗಿರಿ ಜಿಲ್ಲೆಯವರೆಂದು ಗೊತ್ತಾಗಿದೆ. ಗಾಯಗೊಂಡವರ ಸಂಪೂರ್ಣ ಮಾಹಿತಿ ಇನ್ನೂ ಲಭಿಸಿಲ್ಲ.

ನಿದ್ದೆ ಮಂಪರಿನಲ್ಲಿದ್ದ ಪ್ರಯಾಣಿಕರು ಬಸ್ ಪಲ್ಟಿಯಾದ ತಕ್ಷಣೇ ಚೀರಾಟ ಮಾಡುತ್ತಲೇ ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಕೆಲವು ಮಕ್ಕಳು ಬಸ್ಸಲ್ಲಿ ಇದ್ದಿದ್ದರಿಂದ ಪಾಲಕರು ಮತ್ತಷ್ಟು ಗಾಬರಿಯಾಗಿದ್ದರು. ಕೆಲವು ಪ್ರಯಾಣಿಕರು ಗಾಜು ಒಡೆದು ಹೊರಗೆ ಬಂದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಹಿರಿಯೂರು ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಗಾಯಾಳುಗಳನ್ನ ಆಸ್ಪತ್ರಗೆ ರವಾನೆ ಮಾಡಿದ್ದಾರೆ.
