ಕಾದು ಕುಳಿತಿದ್ದ ಬಸ್ ಬಂದು ಬಿಟ್ಟಿದ್ದರೆ ಇಂದು ದಿಟ್ಟ ಪತ್ರಕರ್ತೆಯನ್ನ ಹುಬ್ಬಳ್ಳಿ ಮಿಸ್ ಮಾಡಿಕೊಳ್ಳುತ್ತಿತ್ತು…
ಹುಬ್ಬಳ್ಳಿ: ಅಂದು 11 ಜನ ಆಕಾಂಕ್ಷಿಗಳ ನಡುವೆ ಪ್ರಜಾವಾಣಿಗೆ ಅರೆಕಾಲಿಕ ವರದಿಗಾರ್ತಿಯಾಗಿ ಆಯ್ಕೆಯಾದವರು ಇಂದು ಪ್ರಶಸ್ತಿಗೆ ಆಯ್ಕೆಯಾದ 11 ಶ್ರೇಷ್ಠ ವರದಿಗಾರರಲ್ಲೊಬ್ಬರು.
ಪ್ರತಿ ಬಾರಿ ಲೇಟಾಗಿ ಬಸ್ ಸ್ಟ್ಯಾಂಡ್ ತಲುಪುವ ನಮಗೆ ಬಸ್ ಮಿಸ್ ಆಯ್ತಲ್ಲ ಎಂಬುದು ಮಾಮೂಲಿ ಗೋಳಾಟ. ಆದರೆ ಇಲ್ಲೊಬ್ಬ ವ್ಯಕ್ತಿ ಸಮಯಕ್ಕೂ ಮುಂಚೆಯೆ ಬಂದು ಬಸ್ ನಿಲ್ದಾಣದಲ್ಲಿ ನಿಂತಿದ್ದರೂ ಅದ್ಯಾಕೋ ಅವತ್ತು ಕಾಯುತ್ತಿದ್ದ ಬಸ್ ಬರಲೇ ಇಲ್ಲ.!
ಹೀಗೆ, ಅಂದು ಬಸ್ ಮಿಸ್ ಮಾಡಿಕೊಂಡೋರು ಇಂದು ಪ್ರತಿಷ್ಟಿತ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 2019-20ನೇ ಸಾಲಿನ ಪ್ರಶಸ್ತಿ ವಿಜೇತೆ- ಕೃಷ್ಣಿ ಶಿರೂರ.
ಬಿ. ಕಾಂ ಮುಗಿಸಿ ಚಾರ್ಟೆಡ್ ಅಕೌಂಟ್ ಅಸಿಸ್ಟಂಟ್ ಪೋಸ್ಟಗೆ ಅರ್ಜಿ ಹಾಕಿ ಸಂದರ್ಶನಕ್ಕೆ ತೆರಳಲು ಸರ್ವ ಸನ್ನದ್ದರಾಗಿ ಬಸ್ ಸ್ಟ್ಯಾಂಡಗೆ ಹೋದರೆ. ಕಾದು ಕುಳಿತಿದ್ದ ಬಸ್ ಬರಲೇ ಇಲ್ಲ, ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾಗ ಇವರ ನಿರಾಸೆಯನ್ನು ಕಂಡು, ಮಾತಿಗಿಳಿದ ವ್ಯಕ್ತಿಯೊಬ್ಬರು ನೀಡಿದ ಕೆಲಸ, ಇಂದು ಅವರನ್ನು ಆ ಕ್ಷೇತ್ರದ ದಿಗ್ಗಜರನ್ನಾಗಿ ರೂಪಿಸಿದೆ.
ಅದು 1999 ರ ಡಿಸೆಂಬರ್ ಸಚ್ಚಿದಾನಂದ ಹೆಗಡೆ ಎಂಬುವವರ ಮೂಲಕ ಸ್ಥಳೀಯ ಪತ್ರಿಕೆಯೊಂದರಲ್ಲಿ 400 ರೂಪಾಯಿಗೆ ಕೆಲಸ ಪ್ರಾರಂಭಿಸಿದ ಇವರು. 6 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿ. ತದ ನಂತರದಲ್ಲಿ ಶಿರಸಿಯಿಂದಲೇ ಪ್ರಜಾವಾಣಿಯಲ್ಲಿ ಅರೆಕಾಲಿಕ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ.
ಪರಿಸರ ಪತ್ರಿಕೋಧ್ಯಮದಲ್ಲಿ ವಿಶೇಷ ಆಸಕ್ತಿಯುಳ್ಳ ಇವರು ಶಿರಸಿ ಹಾಗೂ ಉ.ಕನ್ನಡ ಜಿಲ್ಲೆಯ ಪರಿಸರ ಸಂಪತ್ತಿನ ಸೂಕ್ಷ್ಮ ಲೇಖನಗಳನ್ನೂ ಬರೆದು ಬೇಷ್ ಎನಿಸಿಕೊಂಡಿದ್ದಾರೆ.
ಇವರ ಆಸಕ್ತಿ ಮತ್ತು ಶ್ರಧ್ಯೇಯನ್ನು ಗುರುತಿಸಿ ಇವರನ್ನು ಹುಬ್ಬಳ್ಳಿಯ ಪ್ರಜಾವಾಣಿ ಕಚೇರಿಗೆ ಉಪ ಸಂಪಾದಕರಾಗಿ ಬಡ್ತಿ ನೀಡಲಾಯಿತು. ಅಲ್ಲಿ ಸತತ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮುಂದೆ ಸಿನಿಯರ್ ಸಬ್ ಎಡಿಟರ್ ಆದ ಇವರು ತಮ್ಮ ಲೇಖನಗಳ ಮೂಲಕ ಹುಬ್ಬಳ್ಳಿ ಧಾರವಾಡ ಸೇರಿದಂತೆ ರಾಜ್ಯದ ಜನರ ಗಮನವನ್ನು ಸೆಳೆದವರು.
500ಕ್ಕೂ ಹೆಚ್ಚಿನ ಇವರ ವಿಶೇಷ ಲೇಖನಗಳು ಇದುವರೆಗೆ ರಾಜ್ಯದೆಲ್ಲೆಡೆ ವಿವಿಧ ಪತ್ರಿಕೆ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ.
ಕ್ಯಾನ್ಸರ್ ವಿರುದ್ದದ ಹೋರಾಟದಲ್ಲಿ ಜಯಗಳಿಸಿದವರು:
ಕ್ಯಾನ್ಸರ್ ಜೊತೆಗೆ ಹೋರಾಡಿ ಇಂದು ಅದನ್ನು ತಮ್ಮ ಸ್ವಂತ ಜೀವನ ಶೈಲಿಯಿಂದ ಗೆದ್ದು ಸಾವಿರಾರು ಮಹಿಳೆಯರಿಗೆ ಇಂದು ಮಾರ್ಗದರ್ಶಿಯಾಗಿ ರೂಪಗೊಂಡಿದ್ದಾರೆ. ಕ್ಯಾನ್ಸರ್ ವಿಷಯಕ್ಕೆ ಬಂದರೆ ಡಾಕ್ಟರ್ ಗಳಿಗಿಂತಲೂ ಕೃಷ್ಣಿಯವರು ನೀಡುವ ಸಲಹೆಗಳಿಂದಲೇ ದೈರ್ಯ ತಂದು ಕೊಂಡು ಜೀವನ ನಡೆಸುತ್ತಿರುವ ಹಲವಾರು ಜನರಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.
ಕೆಮ್ಮು ನೆಗಡಿಯಂತಹ ರೋಗಗಳು ಬಂದರೆ ಸಾಕು ಎದೆ ಒಡೆದುಕೊಳ್ಳುವವರ ನಡುವೆ, ಜೀವನವನ್ನೆ ನುಂಗಿ ಬಿಡುವ ಕ್ಯಾನ್ಸರ್ ತಮಗಿದೆ ಎಂದು ತಿಳಿದರೂ ಎದೆ ಗುಂದದೆ ಏಕಾಂಗಿಯಾಗಿ ಹೋರಾಡಿ ಅದರ ವಿರುದ್ದ ಜಯಶಾಲಿಯಾದ ಪತ್ರಕರ್ತೆ ಕೃಷ್ಣಿ ಶಿರೂರ.
ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿನ ಪತ್ರಕರ್ತರಿಗೆ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೀಡುವ 2019-20ನೇ ಸಾಲಿನ ಪ್ರಶಸ್ತಿಗಳಿಗೆ ಈ ಬಾರಿ 11 ಜನರನ್ನು ಆಯ್ಕೆ ಮಾಡ ಲಾಗಿದೆ. ಆದರೆ ವಿಶೇಷವೆಂದರೆ ಹನ್ನೊಂದು ಜನರಲ್ಲಿ ಈ ಪ್ರಶಸ್ತಿಗಳಿಗೆ ಭಾಜನರಾದ ಏಕೈಕ ಮಹಿಳಾ ಪತ್ರಕರ್ತೆಯಾಗಿ ಪ್ರಜಾವಾಣಿಯ ಸಿನಿಯರ್ ಎಡಿಟರ್ ಆಗಿರುವ ಕೃಷ್ಣಿ ಶಿರೂರ ಅವರು ಪಾತ್ರರಾಗಿದ್ದಾರೆ. ಇದು ಅವರ 20 ವರ್ಷಗಳ ಸೇವೆಗೆ ಸಂದ ಗೌರವ.
ಶ್ರೀಮತಿ ಮುರಿಗೆಮ್ಮ ಬಸಪ್ಪ ಹೂಗಾರ ಅತ್ಯುತ್ತಮ ನಗರ ವರದಿಗಾರಿಕೆ ಪ್ರಶಸ್ತಿ.
ವರದಿ ವಿಷಯ: ಕಿಮ್ಸ್‌ಗೂ ಬೇಕ್ರಿ ಸ್ಕ್ಯಾನಿಂಗು, ಟ್ರೀಟ್‌ಮೆಂಟು…
ಕೃಷ್ಣಿ ಶಿರೂರ––ಪರಿಚಯ
ಉತ್ತರ ಕನ್ನಡದ ಶಿರಸಿ ಸಮೀಪದ ಕಾನಸೂರಿನಲ್ಲಿ ಹುಟ್ಟಿ, ಅಲ್ಲಿಯೇ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣ ಪೂರೈಸಿದ್ದಾರೆ. ಶಿರಸಿಯಲ್ಲಿ ಪದವಿ ಶಿಕ್ಷಣದ ನಂತರ ಅಲ್ಲಿನ ಸ್ಥಳೀಯ ಪತ್ರಿಕೆ ಧ್ಯೇಯನಿಷ್ಠ ಪತ್ರಕರ್ತದಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದರು. ನಂತರ ಶಿರಸಿಯಲ್ಲಿ ಪ್ರಜಾವಾಣಿ ಪತ್ರಿಕೆಯ ವರದಿಗಾರ್ತಿಯಾಗಿ ಏಳು ವರುಷ ಕೆಲಸ ನಿರ್ವಹಿಸಿದರು. ಅಲ್ಲಿ ಕೆಲಸ ಮಾಡಿದ ಅನುಭವ ಸಾಕಷ್ಟು ಹೆಸರನ್ನು ತಂದುಕೊಟ್ಟಿತು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ, ಜಿ.ಎಸ್.ಹೆಗಡೆ ದತ್ತಿನಿಧಿ ಪ್ರಶಸ್ತಿ, ರಾಜ್ಯ ಕಾರ್ಯನಿರತರಾದ ಪತ್ರಕರ್ತರ ಸಂಘ ನೀಡುವ ಅತ್ಯುತ್ತಮ ಗ್ರಾಮೀಣ ವರದಿಗೆ ಪ್ರಶಸ್ತಿಯನ್ನು ಪಡೆದಿದ್ದಾರೆ. ಕಳೆದ 11 ವರ್ಷಗಳಿಂದ ಹುಬ್ಬಳ್ಳಿ ಪ್ರಜಾವಾಣಿ ಕಚೇರಿಯಲ್ಲಿ ಹಿರಿಯ ಉಪ ಸಂಪಾದಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಧಾರವಾಡ ಜಿಲ್ಲಾ ಘಟಕದ ಕಾರ್ಯಕಾರಿ ಸದಸ್ಯೆಯಾಗಿ ಕಾರ್ಯನಿರ್ವಹಿಸಿದ್ದಾರೆ..
ಕಳೆದ ಮೂರು ವರುಷಗಳ ಹಿಂದೆ ಕ್ಯಾನ್ಸರ್ ಕಾಡಿದಾಗ ಎದೆಗುಂದದೆ ಹೋರಾಡಿ ಅದರಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಕ್ಯಾನ್ಸರ್ ರೋಗಕ್ಕೆ ಗಾಯತ್ರಿ ಮುದ್ರೆಗಳಿಂದ ಪರಿಣಾಮಕಾರಿ ಫಲಿತಾಂಶ ಕಂಡುಕೊಂಡಿರುವುದರ ಜೊತೆಗೆ ಕ್ಯಾನ್ಸರ್ ಕುರಿತು ಆಪ್ತ ಸಲಹೆಗಳನ್ನು ನೀಡುವಲ್ಲಿ ತೊಡಗಿಕೊಂಡಿದ್ದಾರೆ. ಕ್ಯಾನ್ಸರ್ ಕುರಿತು ಹಲವು ಲೇಖನಗಳನ್ನು ಬರೆದು ಪ್ರಕಟಿಸುವ ಮೂಲಕ ಕ್ಯಾನ್ಸರ್ ಬಗ್ಗೆ ಭಯ ಬೇಡ ಎಂಬ ನಿಟ್ಟಿನಲ್ಲಿ ಧೈರ್ಯ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ.