Posts Slider

Karnataka Voice

Latest Kannada News

ಕಿತ್ತೂರು ಚೆನ್ನಮ್ಮನ ನಾಟಕದಲ್ಲಿ “ಟಿಪ್ಪು ಸುಲ್ತಾನ” ಪೈಟ್: ಯಾರ ಓಲೈಕೆಗಾಗಿ…!!!!

1 min read
Spread the love

ಧಾರವಾಡ: ಮೈಸೂರು ಹುಲಿ ಎಂದೇ ಖ್ಯಾತಿ ಪಡೆದಿರುವ ಟಿಪ್ಪು ಸುಲ್ತಾನ, ಉತ್ತರ ಕರ್ನಾಟಕದ ನವಲಗುಂದ-ನರಗುಂದದಲ್ಲಿಯೂ ರಾಜ್ಯಭಾರ ಮಾಡುತ್ತ, ಕಿತ್ತೂರಿನ ರಾಜನ ಜೊತೆ ಒಂಟಿ ಹೋರಾಟ ಮಾಡಿ ಸೋತನೆಂಬ “ಅನಾಹುತಕಾರಿ ಇತಿಹಾಸ”ವನ್ನ ಸೃಷ್ಟಿಸಲು ವೀರರಾಣಿ ಕಿತ್ತೂರು ಚೆನ್ನಮ್ಮ ಎಂಬ ಮೆಗಾ ನಾಟಕವನ್ನ ಬಳಕೆ ಮಾಡಿಕೊಳ್ಳಲಾಗಿದೆ ಎಂಬ ವದಂತಿ ನಾಟಕದಲ್ಲಿ ಸ್ಪಷ್ಟವಾಗಿ ಬಳಕೆ ಮಾಡಲಾಗಿದೆ.

ಹೌದು… ಇಲ್ಲಿಯವರೆಗೆ ಕಿತ್ತೂರಿನ ಇತಿಹಾಸ ಗೊತ್ತಿದ್ದವರಿಗೆ ಎಲ್ಲೂ ಟಿಪ್ಪು ಸುಲ್ತಾನನ ಛಾಯೆ ಹೇಗಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಆದರೆ, ರಂಗಾಯಣದ ಮೂಲಕ ಪ್ರದರ್ಶನಗೊಳ್ಳುತ್ತಿರುವ ನಾಟಕದಲ್ಲಿ ಕಿತ್ತೂರಿನ ರಾಜ ಮಲ್ಲಸಜ್ಜನ ದೇಸಾಯಿ, ಟಿಪ್ಪು ಸುಲ್ತಾನನ ಬಳಿ ಹೋದಾಗಲೇ ಹೋರಾಡಿ ಬಂದಿರುವುದನ್ನ ಪ್ರದರ್ಶನ ಮಾಡಲಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಒಕ್ಕಣೆ ಇಲ್ಲಿದೆ ನೋಡಿ…

*ರಂಗಾಯಣ ಕಿತಾಪತಿ: ಕಿತ್ತೂರು ರಾಜ ಸಂಸ್ಥಾನ ನಾಶ ಮಾಡಿದವರು ಪುಣೆಯ ಚಿತ್ಪಾವನ ಪೆಶ್ವೆಗಳೇ ಹೊರತು ಟಿಪ್ಪು ಅಲ್ಲ*

~ಡಾ. ಜೆ ಎಸ್ ಪಾಟೀಲ.

ರಂಗಾಯಣಕ್ಕೆ ಧರ್ಮಾಂಧನೊಬ್ಬ ಒಕ್ಕರಿಸಿದ ಮೇಲೆ ಸಾಂಸ್ಕೃತಿಕ ಸಂಸ್ಥೆಯೊಂದು ಧಾರ್ಮಿಕ ಮೂಲಭೂತವಾದಿಗಳ ಗಾಳಕ್ಕೆ ಬಲಿಯಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ. ಧಾರವಾಡದಲ್ಲಿ ನಾಳೆ ರಂಗಾಯಣ ತಂಡ ವೀರರಾಣಿ ಕಿತ್ತೂರು ಚೆನ್ನಮ್ಮನವರ ಕುರಿತು ನಾಟಕ ಪ್ರದರ್ಶ ಏರ್ಪಡಿಸುತ್ತಿದೆ. ಕೇವಲ ಸಂಘ-ಪರಿವಾರಕ್ಕೆ ಬೇಕಾದವರ ಬಗ್ಗೆ ಮಾತ್ರ ಮಾತನಾಡುವ ರಂಗಾಯಣ ಶೂದ್ರ ಚೆನ್ನಮ್ಮನವರ ಕುರಿತು ನಾಟಕ ಪ್ರದರ್ಶಿಸುತ್ತಿರುವುದು ಸ್ವಾಗತಾರ್ಹ ನಡೆಯಾದರೂ ಅದರ ಹಿಂದಿನ ಉದ್ದೇಶ ಮತ್ತು ಮುಂದೆ ಉದ್ಭವಿಸಬಹುದಾದ ವಿವಾದದ ಕುರಿತು ಇತಿಹಾಸಕಾರರು ಮತ್ತು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಕಾರಣˌ ನಾಟಕ ಪ್ರದರ್ಶನಕ್ಕೆ ಮೊದಲೆ ವೈದಿಕವ್ಯಾಧಿ ವಿದ್ಯುನ್ಮಾನ ಮಾಧ್ಯಮಗಳು ಕಿತ್ತೂರು ಸಂಸ್ಥಾನದ ನಾಶಕ್ಕೆ ಟಿಪ್ಪು ಕಾರಣ ಎನ್ನುವಂತೆ ಬಿಂಬಿಸುತ್ತಿರುವುದು ಮತ್ತು ರಂಗಾಯಣದ ನಿರ್ದೇಶಕ ವಾಹಿನಿಗ ಚರ್ಚೆಯಲ್ಲಿ ತಿರುಚಿದ ಇತಿಹಾಸ ಕುರಿತು ಮಾತನಾಡುತ್ತಿರುವುದು.

ನಾಟಕ ಪ್ರದರ್ಶನಕ್ಕೆ ಮುಂಚೆ ನಾಟಕದಲ್ಲಿ ತಿರುಚಿದ ಸಂಗತಿಯ ಕುರಿತು ದೃಶ್ಯ ವಾಹಿನಿಗಳಲ್ಲಿ ಚರ್ಚೆಯ ನೆಪದಲ್ಲಿ ಪ್ರಚಾರ ಮಾಡುತ್ತಿರುವುದರ ಹಿಂದಿನ ಉದ್ದೇಶವೇನು ಎನ್ನುವುದರ ಕುರಿತು ನಾವು ಚಿಂತಿಸಬೇಕಿದೆ. ಇಲ್ಲಿ ರಾಣಿ ಚೆನ್ನಮ್ಮನವರ ಶೌರ್ಯದ ಕುರಿತು ಸಂದೇಶ ಸಾರುವುದಕ್ಕಿಂತ ಕಿತ್ತೂರಿನ ವೈರಿ ಟಿಪ್ಪು ಎನ್ನುವ ಸುಳ್ಳನ್ನು ಹರಡುವುದೇ ರಂಗಾಯಣದ ಉದ್ದೇಶವಾಗಿದೆಯೆ ಎನ್ನುವ ಸಂಶಯ ಬಲವಾಗುತ್ತಿದೆ. ಚುನಾವಣೆಯ ದಿನಗಳಲ್ಲಿ ಇದನ್ನು ಉದ್ದೇಶಪೂರ್ವಕವಾಗಿಯೇ ವಿವಾದ ಮಾಡಲು ರಂಗಾಯಣ ಹೊಂಚು ಹಾಕಿದೆಯೆ ಎನ್ನುವ ಪ್ರಶ್ನೆ ಕಾಡೂತ್ತಿದೆ. ಪ್ರತಿ ವಿಷಯವನ್ನು ವಿವಾದಗೊಳಿಸಿ ರಾಜಕೀಯ ಲಾಭ ಪಡೆಯುವುದು ಬಿಜೆಪಿ ಮತ್ತು ಅದನ್ನು ನಿಯಂತ್ರಿಸುವ ಧರ್ಮಾಂಧ ಸಂಘಟನೆಗಳ ನಡೆ ಹೊಸದೇನಲ್ಲ. ಕಿತ್ತೂರು ಸಂಸ್ಥಾನವನ್ನು ಟಿಪ್ಪು ನಾಶ ಮಾಡಿದ ಎನ್ನುವ ಟೇಲರ್ ಮೇಡ್ ವಿವಾದಕ್ಕೆ ರಂಗಾಯಣ ಬಳಕೆಯಾಗುತ್ತಿರುವ ಸಂಶಯವಂತೂ ಖಂಡಿತ ಇದೆ. ಹಾಗಾದರೆˌ ನಿಜವಾಗಿಯೂ ಕಿತ್ತೂರು ಸಂಸ್ಥಾನ ನಾಶಮಾಡಿದವರು ಯಾರುˌ ಈ ಸಂಸ್ಥಾನದ ಪ್ರಮುಖ ಘಟ್ಟಗಳು ಯಾವುವು ಎನ್ನುವ ಸತ್ಯಾಂಶಗಳನ್ನು ಸಾರ್ವಜನಿಕರಿಗೆ ಮನದಟ್ಚು ಮಾಡುವ ಒಂದು ಕಿರು ಪ್ರಯತ್ನ ಈ ಲೇಖನದಲ್ಲಿದೆ.

ಕಿತ್ತೂರು ಸಂಸ್ಥಾನವು ೧೫೮೫ ರಲ್ಲಿ ಹಿರೇಮಲ್ಲಶೆಟ್ಟಿ ಮತ್ತು ಚಿಕ್ಕಮಲ್ಲಶೆಟ್ಟಿ ಸಹೋದರರಿಂದ ಸ್ಥಾಪಿತವಾಗಿದ್ದುˌ ಆನಂತರ ಸಂಸ್ಥಾನದ ಐದನೇ ದೊರೆಯಾಗಿ ಅಲ್ಲಪ್ಪಗೌಡ ದೇಸಾಯಿ ತನ್ನ ರಾಜಧಾನಿಯನ್ನು ಬೆಳಗಾವಿ ಜಿಲ್ಲೆಯ ಸಂಪಗಾವಿಯಿಂದ ಕಿತ್ತೂರಿಗೆ ಬದಲಾಯಿಸುತ್ತಾನೆ. ಕಿತ್ತೂರು ಸಂಸ್ಥಾನದ ಇತಿಹಾಸದಲ್ಲಿ ಮಾಳ್ವ ರುದ್ರಸರ್ಜ ಮತ್ತು ನಿರಂಜನೆಯ ಪ್ರೇಮ ವಿವಾಹ ಅತ್ಯಂತ ಕುತೂಹಕಾರಿ ಹಾಗು ಅಷ್ಟೇ ವಿವಾದಾತ್ಮಕವೂ ಆಗಿದೆ. ಕಿತ್ತೂರಿನ ದೊರೆಯಾದ ಮಲ್ಲಸರ್ಜ ದೇಸಾಯಿಯವರ ತಂದೆ ವೀರಪ್ಪ ದೇಸಾಯಿ ಪುಣೆಯ ಪೇಶ್ವೆಗಳನ್ನು ಸೋಲಿಸಿದ ಧೀರ ರಾಜ. ಆದರೆ ಆನಂತರ ನಡೆದ ಗೋಕಾಕ ಕಾಳಗದಲ್ಲಿ ಪೇಶ್ವೆಗಳು ವೀರಪ್ಪ ದೇಸಾಯಿಯನ್ನು ಸೋಲಿಸಿ ಆತನನ್ನು ಮೂರು ವರ್ಷಗಳ ಕಾಲ ಮಿರಜ್ ನಲ್ಲಿ ಅಕ್ರಮ ಬಂಧನದಲ್ಲಿರಿಸಿ (1779-1782) ವಿಷಪ್ರಾಶನ ಮಾಡಿ ಹತ್ಯೆ ಮಾಡುತ್ತಾರೆ. ಈತ ಕಿತ್ತೂರು ಸಂಸ್ಥಾನದ ಹೊರಗಡೆ ನಿಧನವಾದ ಕಿತ್ತೂರಿನ ಪ್ರಥಮ ದೊರೆ. ಹಾಗಾಗಿ ಕಿತ್ತೂರು ಸಂಸ್ಥಾನಕ್ಕೆ ಆರಂಭದಿಂದ ಕಂಟಕರಾದವರು ಪುಣೆಯ ಚಿತ್ಪಾವನ ಬ್ರಾಹ್ಮಣ ಪೇಶ್ವೆಗಳು ಎನ್ನುವುದರಲ್ಲಿ ಯಾವುದೆ ಅನುಮಾನಗಳಿಲ್ಲ.

ಪುಣೆಯ ಚಿತ್ಪಾವನ ಪೇಶ್ವೆಗಳು ದೊರೆ ಮಲ್ಲಸರ್ಜ ದೇಸಾಯಿಯ ತಂದೆಯನ್ನು ಕೊಂದವರು. ಆನಂತರ ಪಟ್ಟಕ್ಕೇರಿದ ಮಲ್ಲಸರ್ಜ ದೇಸಾಯಿ 1782 ರಿಂದ 1816 ರವರೆಗೆ ಆಳ್ವಿಕೆ ನಡೆಸುತ್ತಾನೆ. 1785 ರಿಂದ 1788 ರ ಕಾಲಾವಧಿಯಲ್ಲಿ ಮಲ್ಲಸರ್ಜ ದೇಸಾಯಿಯನ್ನು ಟಿಪ್ಪು ಶ್ರೀರಂಗಪಟ್ಟಣದ ಕಬ್ಬಾಳದುರ್ಗದಲ್ಲಿ ಬಂಧಿಸಿಟ್ಟಿದ್ದು ನಿಜ. ಈ ಬಂಧನಕ್ಕೆ ಟಿಪ್ಪುವಿಗೆ ಕುಮ್ಮಕ್ಕು ಕೊಟ್ಟಿದ್ದು ಮತ್ತು ಸಹಾಯ ಮಾಡಿದ್ದು ಟಿಪ್ಪುನ ಸೇನಾಧಿಪತಿಯಾಗಿದ್ದ ವೆಂಕಟರಂಗಯ್ಯ. ಇದೇ ವಿಷಯವನ್ನಿಟ್ಟುಕೊಂಡು ಇಡೀ ನಾಟಕದಲ್ಲಿ ಟಿಪ್ಪುವನ್ನು ಖಳನಾಯಕನನ್ನಾಗಿಸುವ ಹುನ್ನಾರ ಅಡಗಿದೆಯೆ ಎನ್ನುವುದೆ ಸಂಶಯದ ಸಂಗತಿ. ಆದರೆ ಟಿಪ್ಪುಗೆ ಕುಮ್ಮಕ್ಕು ನೀಡಿ ಸಹಾಯ ಮಾಡಿದ ವೆಂಕಟರಂಗಯ್ಯ ಎಂಬ ಹಿಂದೂ ಬ್ರಾಹ್ಮಣ ಮಾತ್ರ ಇಲ್ಲಿ ಅಸಲಿಗೆ ಖಳನಾಯಕನಾಗಬೇಕು ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ರಂಗಾಯಣದ ನಿರ್ದೇಶಕರು ಈ ಕುರಿತು ಚಿಂತಿಸಲಿ.

1812 ರಲ್ಲಿ ಪುಣೆಯ ಪೇಶ್ವೆ ಬಾಜಿರಾಯನು ತನ್ನನ್ನು ಭೇಟಿಯಾಗಲು ಬಂದ ಮಲ್ಲಸರ್ಜ ದೇಸಾಯಿಯನ್ನು ಬಂಧಿಸಿ ಅಕ್ರಮವಾಗಿ ಇರಿಸುತ್ತಾನಲ್ಲದೆ ರಾಜನಿಗೆ ಸರಿಯಾಗಿ ಅನ್ನ-ನೀರು ಕೊಡದೆ ಕಾಡಿಸುತ್ತಾನೆ. ಸತತ ಮೂರು ವರ್ಷಗಳ ಅವಧಿ ಕಿತ್ತೂರು ದೊರೆಯನ್ನು ಸೂರ್ಯನ ಬೆಳಕು ಕಾಣದಂತೆ ಅಕ್ರಮ ಬಂಧನದಲ್ಲಿರಿಸಿ ಅನಾರೋಗ್ಯಕ್ಕೀಡಾಗುವಂತೆ ಮಾಡುತ್ತಾನೆ. ಈ ಪೇಶ್ವೆ ಎರಡನೆ ಬಾಜಿರಾಯ ಹಿಂದೂ ಚಿತ್ಪಾವಣ ಬ್ರಾಹ್ಮಣನೇ ಹೊರತು ಮುಸಲ್ಮಾನನಲ್ಲ ಎನ್ನುವ ಸಂಗತಿ ಇಲ್ಲಿ ಗಮನಾರ್ಹ. ರಂಗಾಯಣ ಪ್ರದರ್ಶಿಸಲಿರುವ ನಾಟಕದಲ್ಲಿ ಈ ದೃಶ್ಯ ಇರಲಿದೆಯೆ ಎಂದು ನಾವು ಅದರ ನಿರ್ದೇಶಕರಿಗೆ ಕೇಳುತ್ತಿದ್ದೇವೆ. ಕಾರಣˌ ಕಿತ್ತೂರು ಸಂಸ್ಥಾನಕ್ಕೆ ಮೊದಲಿನಿಂದ ಕಂಟಕವಾಗಿದ್ದು ಪುಣೆಯ ಪೇಶ್ವೆ ಏರಡನೆಯ ಬಾಜಿರಾಯ ಮತ್ತು ಮಿರಜ್ ಹಾಗು ಜಮಖಂಡಿಯ ಪಟವರ್ಧನ ಬ್ರಾಹ್ಮಣ ಸಂಸ್ಥಾನಗಳು. ಈ ಎರಡನೇ ಬಾಜಿರಾಯನ ಆಡಳಿತದಲ್ಲಿ ಭೀಮಾ ಕೋರೆಗಾವ್ ಕದನ ನಡೆದಿರುವುದು. ಇದನ್ನು ರಂಗಾಯಣದ ನಿರ್ದೇಶಕರು ತಮ್ಮ ಉದ್ದೇಶಿತ ನಾಟಕದಲ್ಲಿ ತೋರಿಸಬಹುದೆ?

ಇಲ್ಲಿ ಇನ್ನೊಂದು ವಿಶೇಷ ಸಂಗತಿ ನಾವು ಗಮನಿಸಬೇಕಿದೆ. ರಂಗಾಯಣದ ನಿರ್ದೇಶಕರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಿತ್ತೂರು ಮತಕ್ಷೇತ್ರದಿಂದ ಸ್ಪರ್ಧಿಸುತ್ತೇನೆಂದು ಖಾಸಗಿಯಾಗಿ ಹೇಳಿಕೊಂಡು ತಿರುಗುತ್ತಿದ್ದಾರಂತೆ. ಆದ್ದರಿಂದ ಈ ನಾಟಕ ಪ್ರದರ್ಶನದ ಮೂಲಕ ಟಿಪ್ಪುವಿನ ವಿರುದ್ಧ ಕಿತ್ತೂರಿನ ಸಂಸ್ಥಾನದ ಅಭಿಮಾನಿಗಳನ್ನು ಎತ್ತಿಕಟ್ಟಿ ಬಿಜೆಪಿ ಹೈಕಮಾಂಡನ್ನು ಓಲೈಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಿದ್ದಾರೆಯೆ ಎನ್ನುವ ಸಂಶಯ ಕೂಡ ಬಾರದಿರದು. ಒಟ್ಟಿನಲ್ಲಿ ಮಲ್ಲಸರ್ಜ ದೇಸಾಯಿ ಮತ್ತು ಅವರ ತಂದೆ ವೀರಪ್ಪ ದೇಸಾಯಿಯವರನ್ನು ಅಕ್ರಮ ಬಂಧನದಲ್ಲಿರಿಸಿ ಹತ್ಯೆ ಮಾಡಿದ್ದು ಮಾತ್ರ ಕುತಂತ್ರಿಗಳಾಗಿದ್ದ ಪುಣೆಯ ಪೇಶ್ವೇಗಳು ಎನ್ನುವ ಸತ್ಯ ಜನರು ತಿಳಿದುಕೊಳ್ಳಬೇಕು. ಈ ನಾಟಕದಲ್ಲಿ ಅದರ ನಿರ್ದೇಶಕರು ಈ ಕುತಂತ್ರಿ ಪೇಶ್ವೆಗಳನ್ನು ಯಾವ ರೀತಿ ಚಿತ್ರಿಸುತ್ತಿದ್ದಾರೆ ಎನ್ನುವ ಕುತೂಹಲವಂತೂ ನಮಗೆಲ್ಲರಿಗೆ ಇದೆ.

ಮುಂದೆ ಶಿವಲಿಂಗರುದ್ರಸರ್ಜ ದೇಸಾಯಿಯವರು 1824ˌ ಸಪ್ಟೆಂಬರ್ 11 ರಂದು ಲಿಂಗೈಕ್ಯರಾಗುವ ಮುಂಚೆ ಮಾಸ್ತಮರಡಿಯ ಬಾಳನಗೌಡರ ಮಗ ಶಿವಲಿಂಗಪ್ಪ ಉರ್ಫ್ ಸವಾಯಿ ಮಲ್ಲಸರ್ಜರನ್ನು ರಾಣಿ ಚೆನ್ನಮ್ಮ ದತ್ತು ತೆಗೆದುಕೊಂಡಿರುವ ಸಂಗತಿ ನಮಗೆಲ್ಲ ತಿಳಿದಿದೆ. ದತ್ತುಪುತ್ರನನ್ನು ಸಂಸ್ಥಾನದಿಂದ ಓಡಿಸಿದ ನಂತರ ಅಂದಿನ ಧಾರವಾಡದ ಕಲೆಕ್ಟರ್ ಆಗಿದ್ದ ಥ್ಯಾಕರೆ ಕಿತ್ತೂರು ಸಂಸ್ಥಾನದ ಖಜಾನೆ ಉಸ್ತುವಾರಿಗೆ ಬ್ರಿಟಿಷರ ಪ್ರತಿನಿಧಿಯಾಗಿ ಹಾವೇರಿಯ ವೆಂಕಟರಾವ್ ಮತ್ತು ಸಂಸ್ಥಾನದ ಉಸ್ತುವಾರಿಯಾಗಿ ಕುನ್ನೂರು ಮಲ್ಲಪ್ಪನನ್ನು ನೇಮಕ ಮಾಡುತ್ತಾನೆ. ಈ ವೆಂಕಟರಾವ್ ಹಾವೇರಿ ಕುನ್ನೂರು ಮಲ್ಲಪ್ಪನ ಬಗ್ಗೆ ಥ್ಯಾಕರೆ ಹತ್ತಿರ ಚಾಡಿ ಹೇಳಿ ಆತನನ್ನು ಸಂಸ್ಥಾನದ ಉಸ್ತುವಾರಿಯಿಂದ ಕಿತ್ತುಹಾಕಿಸಿ ಕಿತ್ತೂರಿನ ಸಮಗ್ರ ಉಸ್ತುವಾರಿಯನ್ನು ತಾನೊಬ್ಬನೇ ವಹಿಸಿಕೊಳ್ಳುತ್ತಾನೆ. ಕಿತ್ತೂರು ಸಂಸ್ಥಾನದ ಎಲ್ಲಾ ಗುಟ್ಟುಗಳನ್ನು ಬ್ರಿಟೀಷರಿಗೆ ತಿಳಿಸಿದ ವೆಂಕಟರಾವ್ ಹಾವೇರಿಯ ಕುರಿತು ರಂಗಾಯಣದ ನಿರ್ದೇಶಕರು ತಮ್ಮ ನಾಟಕದಲ್ಲಿ ಯಾವುದಾದರೂ ದೃಶ್ಯ ಇಟ್ಟಿದ್ದಾರೆಯೆ ಕಾದು ನೋಡಬೇಕು.

ಕಾರಣˌ ಬ್ರಿಟೀಷರ ಜೊತೆಗೂಡಿ ಕಿತ್ತೂರು ಸಂಸ್ಥಾನ ನಾಶ ಮಾಡುವುದರಲ್ಲಿ ಈ ಹಾವೇರಿ ವೆಂಕಟರಾಯನ ಪಾತ್ರ ಬಹಳ ದೊಡ್ಡದಿದೆ ಎನ್ನುತ್ತವೆ ಐತಿಹಾಸಿಕ ದಾಖಲೆಗಳು. ಆದರೆ ಇದುವರೆಗೆ ಈತನ ಪಾತ್ರದ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಕಿತ್ತೂರಿನ ದತ್ತು ಪಡೆಯುವಿಕೆಯ ಸಂಗತಿ ಕುರಿತು ಥ್ಯಾಕರೆ ವೆಂಕಟರಾಯನಿಗೆ ಮಾಹಿತಿ ಕೇಳಿದಾಗ ದತ್ತು ವಿಷಯವು ಕಿತ್ತೂರು ಸಂಸ್ಥಾನದ ನೌಕರರು ಮಾಡಿಕೊಂಡಿರುವ ಒಂದು ಕಟ್ಟುಕಥೆˌ ಸಂಸ್ಥಾನದ ಆಸ್ತಿಯನ್ನು ಲಪಟಾಯಿಸಲು ಕಿತ್ತೂರಿನ ಸರದಾರರು ಮಾಡಿರುವ ಕುತಂತ್ರ ಎಂದು ಸುಳ್ಳು ವರದಿ ಕೊಟ್ಟವನೆ ಈ ವೆಂಕಟರಾಯ. ಅಷ್ಟೇ ಅಲ್ಲದೆ ರಾಣಿ ದತ್ತು ಪಡೆದ ಮಗ ಕಿತ್ತೂರಿನ ಹತ್ತಿರದ ಸಂಬಂಧಿಕ ಅಲ್ಲ ಎಂದು ವೆಂಕಟರಾವ್ ಥ್ಯಾಕರೆಗೆ ವರದಿ ನೀಡುತ್ತಾನೆ. ಥ್ಯಾಕರೆˌ ಈ ಕುರಿತು ಮುಂಬೈ ಪ್ರೆಸಿಡೆನ್ಸಿಯ ಪ್ರಧಾನ ಕಾರ್ಯದರ್ಶಿ ಆಗಿರುವ ಎಲ್ಫಿನ್ಸ್ಟನ್ ಗೆ ಯತಾವತ್ತ ವರದಿ ಕಳಿಸುತ್ತಾನೆ. ಹೀಗಾಗಿ ದತ್ತು ಪ್ರಕ್ರಿಯೆ ಅನುಷ್ಟಾನಕ್ಕೆ ಬರದಂತೆ ತಡೆ ಹಿಡಿಯುವಲ್ಲಿ ಹಾವೇರಿಯ ವೆಂಕಟರಾವ್ ಬರೆದ ಪತ್ರವೇ ಕಾರಣವಾಗಿತ್ತು ಎನ್ನುವ ಸಂಗತಿ ಗಮನಿಸಬೇಕು. ಆದ್ದರಿಂದ ರಂಗಾಯಣದ ನಾಟಕದಲ್ಲಿ ಹಾವೇರಿಯ ವೆಂಕಟರಾಯನ ಪಾತ್ರ ಏನಿರುತ್ತದೆ ಎನ್ನುವ ಕುತೂಹಲ ನಮಗಿದೆ.

ಮುಂದೆ ಕಿತ್ತೂರಿನ ಯುದ್ಧದಲ್ಲಿ ಪಿತೂರಿ ಮಾಡಿದ ಘಟನೆಗಳುˌ ಮದ್ದುಗಳಲ್ಲಿ ಲದ್ದಿ ಮತ್ತು ರಾಗಿ ಹಿಟ್ಟನ್ನು ಬೆರೆಸಿದ ಗೆಜ್ಜೆ ಮಾಂತಮ್ಮ ˌ ಗೋವಿಂದ ಭಟ್ಟˌ ಶ್ರೀನಿವಾಸˌ ಮುಂತಾದವರ ಕುರಿತು ರಂಗಾಯಣದ ನಾಟಕದಲ್ಲಿ ಪ್ರಸ್ತಾಪಿಸಿದರೆ ಉತ್ತಮ ಎನ್ನುವುದು ನಮ್ಮ ಅಭಿಪ್ರಾಯವಾಗಿದೆ. ಇದರ ಜೊತೆಗೆ ಕಿತ್ತೂರಿನ ಎರಡನೇ ಕದನದಲ್ಲಿ ಬ್ರಿಟಿಷರಿಗೆ ಬೆಂಬಲವಾಗಿ ನಿಂತು ಬ್ರಿಟಿಷರ ಜೊತೆಗೆ ಕಿತ್ತೂರಿನ ಸಂಪತ್ತನ್ನು ಹಂಚಿಕೊಂಡ ಜಮಖಂಡಿಯ ಪಟವರ್ಧನ ಒಂಬತ್ತನೇಯ ಗೋಪಾಲರಾವ್, ತಾಸಗಾಂವ್ನದ ಪಟವರ್ಧನರ ಪಾತ್ರಗವನ್ನು ಕೂಡ ನಾಟಕದಲ್ಲಿ ಅಳವಡಿಸಿದರೆ ಕಿತ್ತೂರು ಸಂಸ್ಥಾನದ ನಾಶಕ್ಕೆ ಬ್ರಾಹ್ಮಣರ ಕೊಡುಗೆ ಜನರಿಗೆ ತಿಳಿಯಲಿದೆ. ಈ ನಾಟಕ ಪ್ರದರ್ಶನದಿಂದ ವಿವಾದ ಹುಟ್ಟುಹಾಕಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳುವ ಇರಾದೆ ಇದ್ದರೆ ಖಂಡಿತ ಈ ನಾಟಕವನ್ನು ನಾವು ಬಹಿಷ್ಕರಿಸುತ್ತೇವೆ.

ಈಗಾಗಲೇ ಲಿಂಗಾಯತ ಪಂಚಮಸಾಲಿ ಸಮಾಜ ಚೆನ್ನಮ್ಮನನ್ನು ಐಕಾನ್ ಮಾಡಿಕೊಂಡು 2ಎ ಮೀಸಲಾತಿಗಾಗಿ ಹೋರಾಡುತ್ತಿದೆ. ಈಗ ಇಂತಹ ಭಾವನಾತ್ಮಕ ವಿಷಯದ ಮೇಲೆ ನಾಟಕ ಪ್ರದರ್ಶಿಸುವುದು ಸಮಂಜಸವಾದದ್ದಲ್ಲ. ಅದರ ಜೊತೆಗೆ ಧಾರವಾಡ ಜಿಲ್ಲೆಯಲ್ಲಿ ಪಂಚಮಸಾಲಿ ಲಿಂಗಾಯತರು ಈಗಾಗಲೆ ಬಿಜೆಪಿಯಿಂದ ದೂರವಾಗಿದ್ದಾರೆ. ಈಗ ಟಿಪ್ಪು ವಿಷಯವಿಟ್ಟುಕೊಂಡು ಮುಸ್ಲಿಮರ ವಿರುದ್ಧ ಲಿಂಗಾಯತರನ್ನು ಎತ್ತಿ ಕಟ್ಟಿ ಬಿಜೆಪಿ ರಾಜಕೀಯ ಲಾಭ ಪಡೆಯಲು ಹವಣಿಸುತ್ತಿದೆ ಎನ್ನುವ ಗುಸುಗುಸು ಮಾತುಗಳು ಕೇಳಿಬರುತ್ತಿವೆ. 2024 ಸಂಸತ್ ಚುನಾವಣೆ ಈ ಸಲ ಪ್ರಲ್ಹಾದ ಜೋಶಿಯವರಿಗೆ ಅಷ್ಟು ಸುಲಭವಲ್ಲ ಎನ್ನುವ ಸುದ್ದಿ ಕೂಡ ಇದೆ. ಹಾಗಾಗಿ ಧಾರವಾಡ ಜಿಲ್ಲೆಯಲ್ಲಿ ಕೂಡ ಟಿಪ್ಪು ವಿಷಯ ಮುಂದೆ ಮಾಡಿ ಧಾರ್ಮಿಕ ದೃವೀಕರಣಕ್ಕೆ ರಂಗಾಯಣ ಕೈಹಾಕಿತೆ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿದೆ. ಈ ನಾಟಕದ ವಿವಾದ ಯಾವ ತಿರುವು ಪಡೆಯುತ್ತದೆ ಕಾದು ನೋಡಬೇಕಿದೆ.

~ಡಾ. ಜೆ ಎಸ್ ಪಾಟೀಲ.


Spread the love

Leave a Reply

Your email address will not be published. Required fields are marked *