ಕಿರೇಸೂರು ಬಳಿಯ ನೀರು ಪಾಲು ದುರಂತ: ಕೊನೆಯ ಯುವಕ ಜೋಶಿಯೂ ಶವವಾಗಿ ಪತ್ತೆ..!

ಹುಬ್ಬಳ್ಳಿ: ತಾಲೂಕಿನ ಕಿರೇಸೂರ ಬಳಿಯಲ್ಲಿ ನಡೆದ ದುರಂತವೊಂದರಲ್ಲಿ ಕಾಣೆಯಾಗಿದ್ದ ಮೂರು ಯುವಕರ ಪೈಕಿ ಇಬ್ಬರ ಶವಗಳು ನಿನ್ನೆಯೇ ದೊರಕಿದ್ದು, ಇಂದು ಬೆಳಿಗ್ಗೆ ಮತ್ತೋರ್ವ ಯುವಕನೂ ಶವವಾಗಿ ಪತ್ತೆಯಾಗಿದ್ದಾನೆ.
ಹುಬ್ಬಳ್ಳಿಯ ರಾಮನಗರದಿಂದ ಕಿರೇಸೂರಿನ ಬಳಿ ಮಲಪ್ರಭಾ ಸೇತುವೆ ಬಳಿ ಐವರಲ್ಲಿ ಓರ್ವ ಯುವತಿ ಹಾಗೂ ಯುವಕನೋರ್ವ ಜೇನು ಹುಳಗಳಿಂದಲೂ ತಪ್ಪಿಸಿಕೊಂಡು ಬದುಕುಳಿದಿದ್ದರು. ಆದರೆ, ಜೇನು ನೊಣಗಳಿಂದ ತಪ್ಪಿಸಿಕೊಳ್ಳಲು ನೀರಿನಲ್ಲಿ ಜಿಗಿದಿದ್ದ ಮೂರು ಯುವಕರ ಪೈಕಿ ಓರ್ವನ ಪತ್ತೆಯಾಗದೇ ಇರುವುದು ಹಲವು ರೀತಿಯಲ್ಲಿ ಆತಂಕ ಮೂಡಿಸಿತ್ತು.
ಸುಮಾರು 20 ಗಂಟೆಗಳ ಕಾರ್ಯಾಚರಣೆಯಲ್ಲಿ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಅವರ ಪುತ್ರ ಸನ್ನಿ ಹಾಗೂ ಅವರ ಸಂಬಂಧಿಯಾದ ಪೂನಾ ಮೂಲದ ಗಜಾನನ ರಾಜಶೇಖರ ಶವಗಳು ಅಣ್ಣಿಗೇರಿ ತಾಲೂಕಿನ ಬಸಾಪೂರ ಗ್ರಾಮದ ಕೆನಾಲಿನಲ್ಲಿ ಸಿಕ್ಕಿವೆ. ಆದರೆ, ಜೋಶಿ ಕ್ಲೆಮೆಂಟ್ ಜಂಗಮ ಎಂಬ ಯುವಕನ ಪತ್ತೆ ನಿನ್ನೆವರೆಗೂ ಆಗಿರಲಿಲ್ಲ. ಇದೀಗ ಕಿರೇಸೂರ ಬಳಿಯೇ ಜೋಶಿಯ ಶವ ದೊರಕಿದೆ.
ನಿನ್ನೆ ಕತ್ತಲು ಕವಿದಿದ್ದರಿಂದ ಕಾರ್ಯಾಚರಣೆಯನ್ನ ನಿಲ್ಲಿಸಲಾಗಿತ್ತು. ಅಗ್ನಿಶಾಮಕ ದಳ ಹಾಗೂ ಅಣ್ಣಿಗೇರಿ ಪೊಲೀಸ್ ಠಾಣೆಯ ಸಬ್ ಇನ್ಸಪೆಕ್ಟರ್ ಲಾಲಸಾಬ ಜೂಲಕಟ್ಟಿ ಮಾಡಿದ ಪ್ರಯತ್ನ ಕೊನೆಗೆ ಸಫಲವಾಗಿದ್ದು, ಮೂರನೇಯ ಶವ ಪತ್ತೆಯಾಗಿದೆ.