ಜನರಿಗಾಗಿ ಮಳೆಯಲ್ಲಿ ಹೆಜ್ಜೆ ಹಾಕಿದ ಕಿರಣ ಬಳಗ: ಮಸೀದಿ-ಚರ್ಚ್-ಮಂದಿರದಲ್ಲೂ ಪ್ರಾರ್ಥನೆ
1 min readಧಾರವಾಡ: ಕೊರೋನಾ ಮುಕ್ತ ಭಾರತಕ್ಕಾಗಿ ಪ್ರಾರ್ಥಿಸಿ ನಗರದ ಕಿರಣ ಗೆಳೆಯರ ಬಳಗದಿಂದ ಸುಮಾರು 25ಕ್ಕೂ ಹೆಚ್ಚು ಜನ ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ ನಡೆಸಿದರು.
ಕೊರೋನಾ ಬಂದಾಗಿನಿಂದ ಸರಿಯಾಗಿ ಉದ್ಯೋಗವಿಲ್ಲದೇ ಜನ ಬಸವಳಿದಿದ್ದಾರೆ. ಈ ರೋಗದಿಂದ ದೇಶವನ್ನು ನೀನೇ ಕಾಪಾಡು ಪ್ರಭುವೇ ಎಂದು ಅಜ್ಜನ ಮೊರೆ ಹೋಗಿರುವ ಬಳಗ, ಬೇಡಿಕೆ ಈಡೇರಲೆಂದು ಎನ್‌ಟಿಟಿಎಫ್ ಹತ್ತಿರದ ಪ್ರಥಮ ಪೂಜಿಪ ಸಿದ್ಧಿವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿದರು.
ಪಾದಯಾತ್ರೆ ಆರಂಭಿಸಿದ ಬಳಗಕ್ಕೆ ವಾಲ್ಮೀಕಿ ಸಮಾಜದ ಬಸವರಾಜ ಬಾಗೂರ, ಬಸವರಾಜ ನವಲಗುಂದ, ಭೀಮಣ್ಣ ನವಲಗುಂದ ಸನ್ಮಾನಿಸಿ ಪಾದಯಾತ್ರೆ ಯಶಸ್ವಿಯಾಗಲಿ ಎಂದು ಹಾರೈಸಿದರು.
ಪ್ರತಿವರ್ಷ ಶ್ರಾವಣ ಮಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆ ನಡೆಸುತ್ತಿದ್ದ ಈ ಬಳಗ ಈ ವರ್ಷ ಕೊರೋನಾ ಮಹಾಮಾರಿಯಿಂದ ನಲುಗಿರುವ ಭಾರತ ಕೊರೋನಾ ಮುಕ್ತವಾಗಲಿ, ಆರ್ಥಿಕವಾಗಿ ಮತ್ತೆ ಪುಟಿದೇಳಲಿ ಎಂದು ಬೈರಿದೇವರಕೊಪ್ಪ ಹಜರತ್ ಮೊಹಮ್ಮದ ಷಾ ಖಾದ್ರಿ ದರ್ಗಾ, ಇಂಡಿ ಪಂಪ್ ಬಳಿ ಇರುವ ಹಜರತ್ ಸೈಯದ್ ಫತೇ ಷಾವಲಿ ದರ್ಗಾಕ್ಕೆ ಬಳಗ ಭೇಟಿ ನೀಡಿ ಪ್ರಾರ್ಥಿಸಿದರು.
ಧಾರವಾಡ ಹುಬ್ಬಳ್ಳಿಯ ರಸ್ತೆ ಪಕ್ಕದಲ್ಲಿ ಬರುವ ಇಸ್ಕಾನ್, ಬಾಲ ಹನುಮಾನ, ಉಣಕಲ್ ಸಿದ್ದಪ್ಪಜನ ಮಠ, ಉಳವಿ ಚನ್ನಬಸವೇಶ್ವರ, ಈಶ್ವರ ಸೇರಿದಂತೆ ವಿವಿಧ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಪಾದಯಾತ್ರೆಯಲ್ಲಿ ಶರದ ಟಿಕಾರೆ, ವಿನಯ ಶಿಂಧೆ, ಸತೀಶ ವೀರಾಪುರ, ವೃಷಬ ಹಿರೇಮಠ, ವಿಶ್ವನಾಥ ನಡಕಟ್ಟಿ, ಸೈಯದ್‌ತುರಾಬುದ್ದೀನ ಎಸ್.ಮೈಸೂರ, ಶಾಕೀರ ಬಡೆಬಡೆ, ಆನಂದ ಉತ್ತರಕರ್, ಸಂತೋಷ ಸೂರ್ಯವಂಶಿ, ವಿನಯ ಮಹಿಂದ್ರಕರ್, ಚಂದ್ರಣ್ಣ ಗೌಡರ್, ಪ್ರಜ್ವಲ್ ಸೂರ್ಯವಂಶಿ, ಸುನೀಲ ಸೂರ್ಯವಂಶಿ, ಸಂದೇಶ ಸಾವಂತ, ಕಿರಣ ಹಾವಣಗಿ ಕುಟುಂಬದ ಕಿಶೋರ, ವಿಜಯ, ಆಶೀಷ್, ಅನೀಷ್, ಚೇತನ್, ಅಲೋಕ, ಚಿನ್ಮಯ ಹಾಗೂ ಪ್ರಸನ್ನಕುಮಾರ ಹಿರೇಮಠ ಸೇರಿದಂತೆ ಅನೇಕ ಸದಸ್ಯರು, ಯುವಕರು, ಮಕ್ಕಳು, ಮಹಿಳೆಯರು ಪಾಲ್ಗೊಂಡಿದ್ದರು.