ಕೊರೋನಾ ವಾರಿಯರ್ “ಸತ್ತರೂ” ಹೊರಳಿ ನೋಡದ ಧಾರವಾಡ ಜಿಲ್ಲಾಡಳಿತ…!
1 min readಹುಬ್ಬಳ್ಳಿ: ಕಳೆದ ಒಂದು ವರ್ಷದಿಂದ ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಿಸಿದ್ದ ಕಿಮ್ಸನ್ ಸ್ಟಾಫ್ ನರ್ಸ್ ವೊಬ್ಬರು ಕೊರೋನಾದಿಂದಲೇ ಸಾವಿಗೀಡಾದರು, ಅವರ ಕುಟುಂಬದವರನ್ನ ಜಿಲ್ಲಾಡಳಿತ ಭೇಟಿಯಾಗಿ ಸಾಂತ್ವನ ಹೇಳದೇ ಇರುವುದು ಸೋಜಿಗ ಮೂಡಿಸಿದೆ.
ಸೋಫಿಯಾ ಕನವಳ್ಳಿ ಎಂಬುವವರೇ ಕಳೆದ ಮೂರು ದಿನದ ಹಿಂದೆ ಕೊರೋನಾದಿಂದ ಸಾವಿಗೀಡಾಗಿದ್ದಾರೆ. ಎರಡು ಮಕ್ಕಳು ಹಾಗೂ ಪತಿಯನ್ನ ಅಗಲಿರುವ ಕೊರೋನಾ ವಾರಿಯರ್ ಕುಟುಂಬಕ್ಕೆ ಇಲ್ಲಿಯವರೆಗೆ ಯಾವುದೇ ಥರದ ಸಾಂತ್ವನವನ್ನೂ ಹೇಳದೇ ಜಿಲ್ಲಾಡಳಿತ, ದೂರವುಳಿದಿದೆ.
ಕಳೆದ ಹದಿನೈದು ವರ್ಷದಿಂದ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಕೇಂದ್ರದಲ್ಲಿ ಸ್ಟಾಫ್ ನರ್ಸ್ ಆಗಿದ್ದ ಸೋಫಿಯಾ ಅವರಿಗೆ ಏಪ್ರೀಲ್ 23ಕ್ಕೆ ಕೊರೋನಾ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಉಪಚಾರ ಮಾಡಿಕೊಳ್ಳುವಂತೆ ಹೇಳಿದ್ದರಿಂದ, ಉಪಚಾರ ಪಡೆದುಕೊಂಡಿದ್ದರು.
ಆದರೆ, ಕಳೆದ ಮೂರು ದಿನದ ಹಿಂದೆ ಸ್ಟಾಫ್ ನರ್ಸ್ ಕೊರೋನಾದಿಂದಲೇ ಸಾವಿಗೀಡಾಗಿದ್ದಾರೆ. ಕೊರೋನಾ ವಾರಿಯರ್ ಎಂದು ಕರೆಯಲ್ಪಡುವ ಸೋಫಿಯಾ ಅವರು ತೀರಿಕೊಂಡಾದ ಮೇಲೆಯೂ ಧಾರವಾಡದ ಜಿಲ್ಲಾಡಳಿತ ಕುಟುಂಬದತ್ತ ಹೊರಳಿ ನೋಡದೇ ಇರುವುದು, ಜಿಲ್ಲಾಡಳಿತ ಕಾರ್ಯ ವೈಖರಿಯನ್ನ ಬಿಂಬಿಸುತ್ತಿದೆ.
ಕಳೆದ ಬಾರಿ ಕೊರೋನಾ ವಾರಿಯರ್ ಎಂದು ಗುರುತಿಸಿ ಹಲವು ಸಂಘಟನೆಗಳು ಸ್ಟಾಫ್ ನರ್ಸ್ ಸೋಫಿಯಾ ಕನವಳ್ಳಿ ಅವರನ್ನ ಸತ್ಕಾರ ಮಾಡಿ, ಗೌರವಿಸಿದ್ದನ್ನ ಇಲ್ಲಿ ಸ್ಮರಿಸಬಹುದಾಗಿದೆ.