KHB ಅಧಿಕಾರಿಗಳ ಭಂಡತನ- 12ವರ್ಷ ಕಳೆದರೂ ಪಾಲಿಕೆಗೆ ಹಸ್ತಾಂತರವಾಗದ ಬಡಾವಣೆ… ಕೋಟಿ ಕೋಟಿ ನುಂಗಿದವರ ಅಸಲಿ ಕಹಾನಿ….01

ಕೆಎಚ್‌ಬಿ ಅಧಿಕಾರಿಗಳ ದಿವ್ಯ ನಿರ್ಲಕ್ಷ…. ಭ್ರಷ್ಟಾಚಾರದ ಕುಂಡದಲ್ಲಿ ಬೇಯುತ್ತಿರುವ ನಿವಾಸಿಗಳ ಬದುಕು..
ಹುಬ್ಬಳ್ಳಿ: ಇತ್ತೀಚಿಗೆ ಸರ್ಕಾರ ಇ-ಸ್ವತ್ತು ಕಡ್ಡಾಯ ಗೊಳಿಸಿರುವುದರಿಂದ ರಾಜ್ಯಾದ್ಯಂತ ಸಾಕಷ್ಟು ಸಮಸ್ಯೆಗಳು ಹುಟ್ಟಿಕೊಂಡಿದ್ದು, ಸಾರ್ವಜನಿಕರು ನಿವೇಶನ ಕೊಳ್ಳಲು ಅಥವಾ ಮಾರಾಟ ಮಾಡಲು ಸಹ ಸಮಸ್ಯೆ ಎದಿರುಸುತ್ತಿದ್ದಾರೆ. ಇದಕ್ಕೆ ಅಧಿಕೃತ ಬಡಾವಣೆಗಳಲ್ಲಿನ ನಿವೇಶನ ಮತ್ತು ಮನೆಗಳ ಮಾಲೀಕರೂ ಹೊರತಲ್ಲ.
ಆಸ್ತಿ ಮಾರಾಟದಲ್ಲಿ ಮೋಸ, ನಕಲಿ ಆಸ್ತಿ ನೋಂದಣಿಯನ್ನು ತಡೆಗಟ್ಟುವ ಒಳ್ಳೆಯ ಉದ್ದೇಶದಿಂದ ಸರಕಾರ ಈ ಆದೇಶವನ್ನು ಮಾಡಿದೆ. ಆದರೆ, ಕೆಲವು ಭ್ರಷ್ಟ ಅಧಿಕಾರಿಗಳ ಕುತಂತ್ರ ಹಾಗೂ ಬೇಜವಾಬ್ದಾರಿಗಳಿಂದಾಗಿ ಅಧಿಕೃತವಾಗಿ ನಿರ್ಮಾಣವಾದ ಬಡಾವಣೆಗಳ ನಿವಾಸಿಗಳು ಕೂಡ ಇ-ಸ್ವತ್ತು ಸಮಸ್ಯೆಗಳಿಂದ ಪರಿತಪ್ಪಿಸುವಂತಾಗಿದೆ ಎನ್ನುವುದು ಒಂದು ದುರಂತ.
ಇದಕ್ಕೊಂದು ತಾಜಾ ಉದಾಹರಣೆಎಂದರೆ ಹುಬ್ಬಳ್ಳಿಯ ಕರ್ನಾಟಕ ಗೃಹ ಮಂಡಳಿಯಿಂದ (ಕೆಎಚ್‌ಬಿ) ಅಧಿಕೃತವಾಗಿ ನಿರ್ಮಾಣವಾದ ಅಮರಗೋಳದ ಎರಡನೇಯ ಹಂತದ ಕೆಎಚ್‌ಬಿ ಕಾಲನಿಯ ಸಾವಿರಾರು ನಿವಾಸಿಗಳು. ಅವರ ಮನೆಗಳು ನಿರ್ಮಾಣವಾಗಿ 10-15 ವರ್ಷಗಳಾದರೂ ಅವರ ಬಡಾವಣೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಇನ್ನೂ ಹಸ್ತಾಂತರವಾಗಿಲ್ಲ.
ಇದರ ಪರಿಣಾಮವಾಗಿ ಅವರಿಗೆ ಇ-ಸ್ವತ್ತು ಸಿಕ್ಕಿಲ್ಲ. ಅಲ್ಲಿನ ಕೆಲ ನಿವಾಸಿಗಳು ತಮ್ಮ ವೈಯಕ್ತಿಕ ಹಣಕಾಸಿನ ಅಡಚನೆಯಿಂದ ತಮ್ಮ ನಿವೇಶನ ಅಥವಾ ಮನೆಗಳನ್ನು ಮಾರಾಟ ಮಾಡಬೇಕೆಂದರೂ ಸಾಧ್ಯವಾಗುತ್ತಿಲ್ಲ. ಅವರು ತೀವ್ರ ಹಣಕಾಸಿನ ಬಿಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಅಷ್ಟೇ ಅಲ್ಲ, ಈ ಬಡಾವಣೆ ಪಾಲಿಕೆಗೆ ಹಸ್ತಾಂತರವಾಗದೇ ಇರುವುದರಿಂದ ಇಲ್ಲಿನ ನಿವಾಸಿಗಳಿಗೆ ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ. ಅವರದು ಹತಾಶೆಯ, ನರಕಯಾತನೆಯ ಬದುಕು.
2012-13ರಲ್ಲಿ ನವನಗರ ಸಮೀಪದ ಅಮರಗೋಳದಲ್ಲಿ ಸುಮಾರು 109 ಎಕರೆಯಲ್ಲಿ ಅಭಿವೃದ್ಧಿ ಪಡಿಸಿರುವ ಕೆಎಚ್‌ಬಿ ಎರಡನೇಯ ಹಂತದ ಜಡ್ಜ್ ಬಡಾವಣೆಯಲ್ಲಿ ಆರು ಗೌರವಾನ್ವಿತ ನ್ಯಾಯಾಧೀಶರಗಳ ಗೃಹ ವಸತಿಗಳು, 101ಎಂಐಜಿ, 55ಎಚ್‌ಐಜಿ ಸೇರಿದಂತೆ ಸುಮಾರು 250ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಸಿ ಹಂಚಿಕೆ ಮಾಡಲಾಗಿದೆ. ಸದ್ಯ ಇಲ್ಲಿ ನೂರಾರು ಕುಟುಂಬಗಳು ವಾಸಮಾಡುತ್ತಿವೆ. ವಿಪರ್ಯಾಸವೆಂದರೆ ಇಲ್ಲಿಯವರೆಗೆ ಈ ಬಡಾವಣೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡದೇ ಇರುವುದು. ಈ ಕುರಿತು ಕಾಲನಿಯ ಹಿತಾಭಿವೃದ್ಧಿ ಸಂಘದವರು ಸಾಕಷ್ಟು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ ಮಾಡಿದರೂ ಭ್ರಷ್ಟಾಚಾರದ ಬ್ರಹ್ಮಾಂಡದಲ್ಲಿ ಮುಳುಗಿದ ಕೆಎಚ್‌ಬಿ ಅಧಿಕಾರಗಳು ಎಚ್ಚೆತ್ತುಕೊಂಡಿಲ್ಲ. ಬದಲಾಗಿ ನಿವಾಸಿಗಳ ಮೂಗಿಗೆ ತುಪ್ಪಸವರುವ ಕೆಲಸ ಮಾಡುತ್ತಿದ್ದು, ಹಾರಿಕೆ ಉತ್ತರ ನೀಡುತ್ತಾ ಕಾಲಹರಣ ಮಾಡುತಿದ್ದಾರೆ ಎಂದು ನಿವಾಸಿಗಳು ಆರೋಪಿಸುತ್ತಾರೆ.
ಕಳೆದ 7 ವರ್ಷಗಳಿಂದ ಈ ಬಡಾವಣೆಯನ್ನು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹಸ್ತಾಂತರಿಸವಲ್ಲಿ ‘ಚೋರ ಗುರು ಚಾಂಡಾಳ ಶಿಷ್ಯ’ರಂತಿರುವ ಇಬ್ಬರು ಕೆಎಚ್‌ಬಿ ಹಿರಿಯ ಅಭಿಯಂತರರು ‘ನಾಟಕ’ ಮಾಡುತಿದ್ದಾರೆ ವಿನಃ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಕೆಎಚ್‌ಬಿ ಹಿತಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆರೋಪಿಸುತ್ತಾರೆ.
ಈ ಬಡಾವಣೆಯ ಅಭಿವೃದ್ಧಿಗಾಗಿ ಹಮ್ಮಿಕೊಳ್ಳಬೇಕಾಗಿದ್ದ ಕೆಲವು ಮಹತ್ವದ ಯೋಜನೆಗಳಿಗೆ ಸರಕಾರ ಕಳೆದ ಹತ್ತು ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಹಣ ಮಂಜೂರುಮಾಡಿದೆ. ಆದರೆ, ಆ ಹಣದಲ್ಲಿ ಕೆಎಚ್‌ಬಿ ಅಧಿಕಾರಿಗಳು ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ಮಾಡದೇ ಆ ಹಣವನ್ನು ‘ಬಡಾವಣೆ ನಿರ್ವಹಣೆಗೆ’ ಖರ್ಚಾಗಿದೆ ಎಂದು ಲೆಕ್ಕ ತೋರಿಸಿ ಸರಕಾರಕ್ಕೆ ಹಾಗೂ ನಿವಾಸಿಗಳಿಗೆ ಪಂಗನಾಮ ಹಾಕಿದ್ದಾರೆ.
ಬಡಾವಣೆಯ ನಿವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸಲು ಕರ್ನಾಟಕವಾಯ್ಸ್.ಕಾಂ ಕಂಕಣ ಬದ್ಧವಾಗಿದ್ದು, ಪಾಲಿಕೆಗೆ ಹಸ್ತಾಂತರಿಸುವರೆಗೂ ಮತ್ತು ಭ್ರಷ್ಟಾಚಾರದಲ್ಲಿ ಭಾಗಿಯಾದ ಮತ್ತು ಬಡಾವಣೆ ನಿರ್ವಹಣೆ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಲೂಟಿ ಮಾಡಿದ ಅಧಿಕಾರಿಗಳ ವಿರುದ್ಧ ಕರ್ನಾಟಕ ವಾಯ್ಸ್.ಕಾಮ್ ಎಳೆ ಎಳೆಯಾಗಿ ವರದಿಗಳ ಸರಣಿಯನ್ನು ಪ್ರಕಟಿಸಲು ನಿರ್ಧರಿಸಿದ್ದು, ಸಾರ್ವಜನಿಕರು ಕೆಎಚ್‌ಬಿ ಅಧಿಕಾರಗಳಿಂದ ಅನ್ಯಾಯ, ಮೋಸ, ಭ್ರಷ್ಟಾಚಾರಕೊಳ್ಳಗಾಗಿದ್ದರೆ ಸಂರ್ಪಕಿಸಿ.