ಅಕ್ರಮ ಅಕ್ಕಿ “420” ಕ್ವಿಂಟಾಲ್ ಪ್ರಕರಣ: ಸಚಿನ ಕಬ್ಬೂರು ಕಸಬಾಪೇಟೆ ಪೊಲೀಸರ ವಶಕ್ಕೆ..!


ಹುಬ್ಬಳ್ಳಿ: ಗಬ್ಬೂರು ಬೈಪಾಸ್ ಬಳಿಯಲ್ಲಿ ಜನೇವರಿ 10 ರಂದು ಸಿಕ್ಕು ಬಿದ್ದಿದ್ದ 420 ಕ್ವಿಂಟ್ವಾಲ್ ಅಕ್ರಮ ಪಡಿತರ ಅಕ್ಕಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯ ಶಿವಾ ಟ್ರೇಡರ್ಸನ ಪ್ರಮುಖನನ್ನ ವಶಕ್ಕೆ ಪಡೆಯುವಲ್ಲಿ ಹುಬ್ಬಳ್ಳಿ ಕಸಬಾಪೇಟೆ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನೇವರಿ 10ರಂದು ಆಹಾರ ನಾಗರಿಕ ಸರಬರಾಜು ಇಲಾಖೆ ಹಾಗೂ ಪೊಲೀಸರು ಕೂಡಿಕೊಂಡು ಜಂಟಿ ಕಾರ್ಯಾಚರಣೆ ನಡೆಸಿದಾಗ, ಲಾರಿಯಲ್ಲಿದ್ದ 29ಲಕ್ಷ 24 ಸಾವಿರ ರೂಪಾಯಿ ಮೌಲ್ಯದ ಅಕ್ರಮ ಪಡಿತರ ಅಕ್ಕಿಯನ್ನ ಪತ್ತೆ ಮಾಡಲಾಗಿತ್ತು. ಅಷ್ಟೇ ಅಲ್ಲ, ರಾಜಸ್ಥಾನದ ಜೋರಾರಾಮ ಓಂಪ್ರಕಾಶ ಬಿಷ್ಣೋಯಿ ಎಂಬ ಲಾರಿ ಚಾಲಕನನ್ನ ವಶಕ್ಕೆ ಪಡೆಯಲಾಗಿತ್ತು.
ಇದರ ಮೂಲವನ್ನ ಬೆನ್ನು ಹತ್ತಿದ್ದ ಪೊಲೀಸರು, ಈ ಪಡಿತರ ಅಕ್ಕಿಯು ಹಾವೇರಿಯ ಎಪಿಎಂಸಿಯಲ್ಲಿರುವ ಶಿವಾ ಟ್ರೇಡರ್ಸನಿಂದ ಬಂದಿರುವುದೆಂದು ಗೊತ್ತಾಗಿತ್ತು. ಅದೇ ಕಾರಣಕ್ಕೆ ಮೂಲ ಮಾಲೀಕನ ಬೆನ್ನು ಬಿದ್ದಿದ್ದರು.
ಇದೀಗ ಮೂಲ ಮಾಲೀಕ ಸಚಿನ ಕಬ್ಬೂರು ಎಂಬಾತನೆಂದು ಗೊತ್ತಾಗಿದ್ದು, ಕಸಬಾಪೇಟೆ ಪೊಲೀಸರು ಆತನನ್ನ ವಶಕ್ಕೆ ಪಡೆದು ಮುಂದಿನ ವಿಚಾರಣೆಯನ್ನ ನಡೆಸಿದ್ದು, ನಗರದಲ್ಲಿ ಬೃಹತ್ ಜಾಲವೊಂದು ಹೊರಬಿದ್ದಂತಾಗಿದೆ.