ಹೊರಗೆ ಹಲಗೆ ಬಡಿಯುತ್ತಲೇ ಒಳಗಡೆ ದರೋಡೆ ಮಾಡಿದ ಕಿರಾತಕರು…!

ಹಾವೇರಿ: ಹೋಳಿಹುಣ್ಣಿಮೆಯನ್ನ ಖುಷಿಯಿಂದ ಆಚರಿಸುತ್ತಿದ್ದ ಕುಟುಂಬವೊಂದು ರಾತ್ರಿ ನಡೆದ ಕಳ್ಳತನದಿಂದ ಹೌಹಾರಿದ್ದು, ಪಕ್ಕದ ಮನೆಯವರಿದ್ದರೂ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಾಣ್ಯವನ್ನ ದೋಚಿಕೊಂಡು ಪರಾರಿಯಾದರಲ್ಲಾ ಎಂದು ತಲೆಮೇಲೆ ಕೈಹೊತ್ತು ಕೂಡುವ ಸ್ಥಿತಿ ನಿರ್ಮಾಣವಾಗಿದೆ.

ಹಾವೇರಿಯ ಏಲಕ್ಕಿ ಓಣಿಯಲ್ಲಿರುವ ಬಟ್ಟೆ ವ್ಯಾಪಾರಿ ರವಿ ಜೈನ್ ಎಂಬುವರ ಮನೆಯಲ್ಲಿಯೇ ಕಳ್ಳತನ ನಡೆದಿದೆ. ಹಲಗೆ ಶಬ್ಧವನ್ನ ನಿರ್ಲಕ್ಷ್ಯ ಮಾಡುತ್ತಾರೆಂದುಕೊಂಡ ಕಿರಾತಕ ತಂಡ ಮನೆಯಲ್ಲಿದ್ದ 400 ಗ್ರಾಂ ಬಂಗಾರ, 8 ಕೆ.ಜಿ.ಬೆಳ್ಳಿ ದೋಚಿಕೊಂಡು ಪರಾರಿಯಾಗಿದ್ದಾರೆ.
ಮನೆಯ ಬೀಗ ಮುರಿದು ಟ್ರೇಜರಿಯನ್ನೂ ಒಡೆದು ಅದರಲ್ಲಿದ್ದ ಚಿನ್ನ-ಬೆಳ್ಳಿಯನ್ನ ದೋಚಲಾಗಿದೆ. ಬಟ್ಟೆ ವ್ಯಾಪಾರಿ ರವಿ ಜೈನ್ ತಮ್ಮ ಪತ್ನಿ ಅನಾರೋಗ್ಯದ ಕಾರಣ ಮನೆಗೆ ಬೀಗ ಹಾಕಿ ದಾವಣಗೆರೆಗೆ ತೆರಳಿದ್ದರು. ಇದೇ ಸಮಯದಲ್ಲಿ ಕಳ್ಳತನ ನಡೆದಿದೆ.
ಪ್ರಕರಣದ ಬಗ್ಗೆ ದೂರು ದಾಖಲು ಮಾಡಿಕೊಂಡಿರುವ ಹಾವೇರಿ ಶಹರ ಠಾಣೆಯ ಪೊಲೀಸರು, ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.