ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬದಲಾವಣೆ: ಉರಿಯುವ ಬೆಂಕಿಗೆ ತುಪ್ಪ ಹಾಕಿಸಿದ್ಯಾರು…!?
1 min readಕಲಘಟಗಿ: ಮಾಜಿ ಸಚಿವ ಸಂತೋಷ ಲಾಡ ಅವರು ಕ್ಷೇತ್ರದಲ್ಲಿ ಅಕ್ಕಿಯನ್ನ ಹಂಚಲು ಆರಂಭಿಸುತ್ತಿದ್ದ ಹಾಗೇ, ಕೆಲವರು ಅದನ್ನ ವಿರೋಧ ಮಾಡಿ ಗದ್ದಲವೆಬ್ಬಿಸುವ ಪ್ರಯತ್ನ ಮಾಡಿದ ಬೆನ್ನಲ್ಲೇ, ಕಲಘಟಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ಬದಲಾವಣೆ ಮೂಲಕ ಕಲಘಟಗಿ ಕಾಂಗ್ರೆಸ್ ನಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಿದೆ.
ಕಳೆದ ನಾಲ್ಕೈದು ದಿನಗಳಿಂದ ಕ್ಷೇತ್ರದಲ್ಲಿ ಮಾಜಿ ಸಚಿವ ಸಂತೋಷ ಲಾಡ ಅವರು, ಅಕ್ಕಿಯನ್ನ ಹಂಚುತ್ತಿರುವ ಸಮಯದಲ್ಲಿ ರಾಜಕೀಯ ಬದಲಾವಣೆ ಮಾಡಲು ಹೊರಟಿರುವ ಹಿಂದೆ ಮತ್ತೊಂದು ಷಢ್ಯಂತ್ರ ಹೆಣೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಕಲಘಟಗಿ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಕಾಂಗ್ರೆಸ್ ಇಲ್ಲದೇ ಇರುವಾಗ, ಸಂತೋಷ ಲಾಡ ಕಾಂಗ್ರೆಸ್ ಮೂಲಕವೇ ಗೆಲ್ಲುವಂತಾಗಿದ್ದು ಇತಿಹಾಸ. ಇದೀಗ, ಕೆಲವರು ನಾಗರಾಜ ಛಬ್ಬಿ ಮತ್ತು ಸಂತೋಷ ಲಾಡ ನಡುವೆ ತಂದಿಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ.
ಆತ್ಮೀಯರಾಗಿದ್ದವರನ್ನ ದೂರ ಮಾಡಿ, ಸಂತೋಷ ಲಾಡ ವಿರುದ್ಧ ಮಾಡುವಂತೆ ಮಾಡಿದ ಕಾಣದ ಕೈಗಳೇ, ಈಗ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನ ಬದಲಾವಣೆ ಮಾಡುವಲ್ಲಿ ಕೆಲಸ ಮಾಡಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಸಚಿವ ಸಂತೋಷ ಲಾಡ ಅವರ ವಿರುದ್ಧ ಒಂದು ಕಾಲದಲ್ಲಿ ಜೊತೆಗಿದ್ದವರೇ, ಮುಂದಾಗಿರುವುದು ರಾಜಕೀಯ ದೊಂಬರಾಟಕ್ಕೆ ಸಾಕ್ಷಿ ನುಡಿಯುತ್ತಿದೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.