Posts Slider

Karnataka Voice

Latest Kannada News

‘ಕಾಂತಾರ ಚಾಪ್ಟರ್‌ 1’ ಚಿತ್ರೀಕರಣ ಮುಕ್ತಾಯ… ಇದೇ ಅಕ್ಟೋಬರ್‌ 2ಕ್ಕೆ ಸಿನಿಮಾ ತೆರೆಗೆ…

Spread the love

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಮೇಕಿಂಗ್‌ ವೀಡಿಯೋವೊಂದನ್ನು ರಿಲೀಸ್‌ ಮಾಡಿದೆ.

ರಾಜಕುಮಾರ, ಕೆಜಿಎಫ್, ಸಲಾರ್, ಕಾಂತಾರಾದಂತಹ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿದ ಹೊಂಬಾಳೆ ಫಿಲ್ಮ್ಸ್, ಇಂದು ‘ಕಾಂತಾರ ಚಾಪ್ಟರ್ 1’ ಸಿನಿಮಾದ ಮೇಕಿಂಗ್ ವಿಡಿಯೋ ರಿಲೀಸ್ ಮಾಡಿದೆ. ಈ ವಿಡಿಯೋ, ಸಿನಿಮಾಕ್ಕಾಗಿ ಹಾಕಿದ ಭಾರಿ ಶ್ರಮ ಮತ್ತು ಅದರ ಅದ್ದೂರಿತನವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಪ್ರೇಕ್ಷಕರಿಗೆ ನೀಡಿದೆ. ಚಿತ್ರೀಕರಣ ಮುಗಿದ ಸಂಭ್ರಮದಲ್ಲಿ ಬಿಡುಗಡೆಯಾಗಿರುವ ಈ ವಿಡಿಯೋ, 250 ದಿನಗಳಿಗೂ ಹೆಚ್ಚು ಕಾಲ ನಡೆದ ಶೂಟಿಂಗ್ ಪಯಣವನ್ನು ತೋರಿಸುತ್ತದೆ.

ಸಾವಿರಾರು ಸಿಬ್ಬಂದಿ ಪ್ರತಿ ಹಂತದಲ್ಲೂ ಹಗಲಿರುಳು ಕೆಲಸ ಮಾಡಿದ್ದಾರೆ. ಈ ಮೇಕಿಂಗ್ ವಿಡಿಯೋ ರಿಷಬ್ ಶೆಟ್ಟಿ ಅವರ ಕಥೆ ಹೇಳುವ ಶೈಲಿಯನ್ನು ಹಿಡಿದಿಟ್ಟಿದೆ. ‘ಕಾಂತಾರ ಚಾಪ್ಟರ್ 1’ ಹೊಂಬಾಳೆ ಫಿಲ್ಮ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದು. ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಮತ್ತು ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್ ಸೇರಿದಂತೆ ಇಡೀ ತಂಡದ ಶ್ರಮ ಈ ವೀಡಿಯೋದಲ್ಲಿ ಕಾಣಿಸುತ್ತದೆ.

ಅಕ್ಟೋಬರ್ 2 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿರುವ ಈ ಸಿನಿಮಾ, ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಇದರಿಂದ ಸಿನಿಮಾ ತನ್ನ ಸಾಂಸ್ಕೃತಿಕ ಬೇರುಗಳನ್ನು ಉಳಿಸಿಕೊಂಡೇ ವಿವಿಧ ಭಾಷೆ ಮತ್ತು ಪ್ರದೇಶಗಳ ಪ್ರೇಕ್ಷಕರನ್ನು ತಲುಪಲಿದೆ. ‘ಕಾಂತಾರ ಚಾಪ್ಟರ್ 1’ ಮೂಲಕ ಹೊಂಬಾಳೆ ಫಿಲ್ಮ್ಸ್ ಭಾರತೀಯ ಸಿನಿಮಾದ ಗಡಿಗಳನ್ನು ಮೀರಿ ಬೆಳೆಯುತ್ತಿದೆ. ‘ಜಾನಪದ, ನಂಬಿಕೆ ಮತ್ತು ಸಿನಿಮೀಯ ಶ್ರೇಷ್ಠತೆಯನ್ನು ಆಚರಿಸುವ ಒಂದು ಆಳವಾದ ಅನುಭವವನ್ನು ಈ ಸಿನಿಮಾ ಪ್ರೇಕ್ಷಕರಿಗೆ ನೀಡಲಿದೆ’ ಎನ್ನುವುದು ಹೊಂಬಾಳೆ ಫಿಲಂಸ್‌ನ ಆಶಯ.


Spread the love

Leave a Reply

Your email address will not be published. Required fields are marked *