ಎರಡು ತಿಂಗಳಿಂದ ಚಹಾ ಕುಡಿಯೋದನ್ನೇ ಬಿಟ್ಟ ಸಚಿವೆ: ಭಾರತೀಯರಿಗೆ ಕೊರೋನಾದಿಂದ ಸಮಸ್ಯೆಯಿಲ್ಲವೆಂದ ಸಚಿವೆ

ವಿಜಯಪುರ: ಕೊರೋನಾಗೆ ಯಾರೂ ಭಯ ಬೀಳಬೇಡಿ. ನಾನೇ ಚಹಾ ಕುಡಿಯೋದೆ ಬಿಟ್ಟಿದ್ದೇನೆ. ನಿತ್ಯ ಬಿಸಿನೀರು, ನಿಂಬೆಹಣ್ಣು, ಅರಿಶಿಣ ಮಿಶ್ರಿತ ಕಾಡೆ (ಆಯುರ್ವೇದ ಬಿಸಿ ದ್ರವ) ಸೇವನೆ ಮಾಡುತ್ತಿದ್ದೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ವಿಜಯಪುರದಲ್ಲಿ ಮಾತನಾಡಿದ ಸಚಿವೆ, ನಾವು ಕೊರೋನಾದೊಂದಿಗೆ ಬದುಕೋದು ಕಲಿಬೇಕು. ಇದು ಕೂಡ ನಾಳೆ ದಿನ ನೆಗಡಿ (ಶೀತ), ಜ್ವರದಂತೆ ಬಂದು ಹೋಗುತ್ತೆ ಅಷ್ಟೆ. ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಂಡು ಅದರೊಂದಿಗೆ ಬದುಕೋದು ಕಲಿತರೆ ಏನೂ ಸಮಸ್ಯೆ ಇಲ್ಲ. ಭಾರತೀಯ ಜನರಿಗೆ ಯಾವುದೇ ರೀತಿಯಿಂದ ಕೊರೋನಾದಿಂದ ಸಮಸ್ಯೆ ಆಗೋದಿಲ್ಲ. ವಿದೇಶಿಗರಿಗೆ ರೋಗ ನಿರೋಧಕ ಶಕ್ತಿ ಇಲ್ಲದ್ದರಿಂದ ಅಲ್ಲಿ ಸಾವು, ನೋವುಗಳು ಸಂಭವಿಸುತ್ತಿವೆ ಎಂದು ಹೇಳಿದರು.
ಆಯುರ್ವೇದಕ್ಕೆ ವೈಧ್ಯರಂತೆ ಮಾತನಾಡಿದ ಸಚಿವೆ ಜೊಲ್ಲೆ, ಮೊದಲು ಹಿರಿಯರು ಹೇಳ್ತಿದ್ದಂತೆ ನೆಗಡಿ, ಜ್ವರ ಬಂದ್ರೆ ಕಾಡೆ(ವನಸ್ಪತಿ ಔಷಧಿ) ಕುಡಿರಿ ಅಂತ ಅದನ್ನ ಕುಡಿಯುವ ಪದ್ಧತಿ ಮತ್ತೆ ಮರುಕಳಿಸಿದೆ. ರೋಗ ನಿರೋಧಕ ಶಕ್ತಿ ಹೆಚ್ಚು ಮಾಡಿಕೊಳ್ಳಲು ತುಳಸಿ, ಅರಿಶಿಣ, ಶುಂಟಿ, ದಾಲ್ಚಿನ್ನಿ ಮುಂತಾದ ಪದಾರ್ಥಗಳನ್ನು ಸೇವಿಸಬೇಕು ಎಂದರು.