Posts Slider

Karnataka Voice

Latest Kannada News

ಇನ್ಸಪೆಕ್ಟರ್‌ಗೆ “ಲವ್ ಯೂ ಚಿನ್ನಿ” ಎಂದು ರಕ್ತದಲ್ಲಿ ಪತ್ರ ಬರೆದವಳೀಗ ‘ಜೈಲು ಪಾಲು’…

Spread the love

ರಕ್ತದಲ್ಲಿ ಇನ್‌ಸ್ಪೆಕ್ಟರ್‌ಗೆ ಪತ್ರ, ಪ್ರೀತಿಸುವಂತೆ ಕಾಡಿದ ಮಹಿಳೆ ಜೈಲಿಗೆ

ಬೆಂಗಳೂರು: ‘ಯಾರೋ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದಾರೆ. ನನಗೆ ರಕ್ಷಣೆ ಬೇಕು’ ಎಂದು ಸಾಮಾನ್ಯವಾಗಿ ಪೊಲೀಸ್ ಠಾಣೆಗೆ ಬರುತ್ತಾರೆ. ಆದರೆ, ಮಹಿಳೆಯೊಬ್ಬರು ಇನ್‌ಸ್ಪೆಕ್ಟರ್‌ಗೇ ರಕ್ತದಲ್ಲಿಯೇ ಪ್ರೇಮಪತ್ರ ಬರೆದು ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ಮಹಿಳೆ ಕೊನೆಗೂ ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

‘ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ನೀವೂ ಪ್ರೀತಿಸಬೇಕು’ – ಹೀಗೆ ರಾಮಮೂರ್ತಿನಗರ ಠಾಣೆಯ ಇನ್‌ಸ್ಪೆಕ್ಟರ್‌ ಜಿ.ಜೆ.ಸತೀಶ್ ಅವರಿಗೆ ಅಯ್ಯಪ್ಪನಗರದ ನಿವಾಸಿ ಸಂಜನಾ ಅಲಿಯಾಸ್ ವನಜಾ ಅವರು ಕಳೆದ ಕೆಲವು ದಿನಗಳಿಂದ ಕಾಟ ನೀಡುತ್ತಿದ್ದರು.

 

ಮಹಿಳೆಯಿಂದ ತೊಂದರೆಗೆ ಸಿಲುಕಿದ್ದ ಇನ್‌ಸ್ಪೆಕ್ಟರ್ ಸತೀಶ್ ಅವರು, ಕರ್ತವ್ಯ ನಿರ್ವಹಿಸುತ್ತಿರುವ ಠಾಣೆಗೇ ದೂರು ನೀಡಿದ್ದರು. ದೂರಿನ ಬೆನ್ನಲ್ಲೇ ಮಹಿಳೆ ವಾಸವಿದ್ದ ಸ್ಥಳವನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ‘ಪ್ರೀತ್ಸೆ ಪ್ರೀತ್ಸೆ’ ಎಂದು ಕರೆ ಮಾಡುತ್ತಿದ್ದ ಮಹಿಳೆ ಕಾರಾಗೃಹ ಸೇರಿದ್ದಾರೆ.

‘ಮೂರು ತಿಂಗಳಿಂದ ರಾಮಮೂರ್ತಿನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದೇನೆ. ಅಕ್ಟೋಬರ್ 30ರಂದು ಠಾಣೆಯಲ್ಲಿದ್ದಾಗ ಕರೆ ಬಂದಿತ್ತು. ಯಾರೊ ದೂರುದಾರರು ಇರಬಹುದೆಂದು ಭಾವಿಸಿ, ಕರೆ ಸ್ವೀಕರಿಸಿದ್ದೆ. ರಾಮಮೂರ್ತಿನಗರ ನಿವಾಸಿ ಸಂಜನಾ ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಅಸಂಬದ್ಧವಾಗಿ ಮಾತನಾಡಲು ಆರಂಭಿಸಿದ್ದರು. ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ. ನೀವೂ ಪ್ರೀತಿಸಬೇಕು’ ಎಂದು ಹೇಳಿದ್ದರು. ತಮಾಷೆ ಮಾಡಿರಬೇಕು ಎಂಬುದಾಗಿ ಭಾವಿಸಿದ್ದೆ. ಅದಾದ ಮೇಲೆ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿದ್ದರು. ಎಲ್ಲ ಸಂಖ್ಯೆಗಳನ್ನೂ ಬ್ಲಾಕ್‌ ಲೀಸ್ಟ್‌ಗೆ ಹಾಕಿದ್ದೇನೆ’ ಎಂದು ಸತೀಶ್ ಅವರು ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಶಿಫಾರಸು ಮಾಡಿಸುತ್ತೇನೆ…:

‘ನಾನು ಕಾಂಗ್ರೆಸ್ ಕಾರ್ಯಕರ್ತೆ ಎಂದು ವನಜಾ ಹೇಳಿಕೊಂಡಿದ್ದರು. ಮುಖ್ಯಮಂತ್ರಿ, ಡಿಸಿಎಂ, ಗೃಹ ಸಚಿವರು, ಮೋಟಮ್ಮ ಹಾಗೂ ಲಕ್ಷ್ಮಿ ಹೆಬ್ಬಾಳಕರ ಅವರ ಜತೆಯಲ್ಲಿರುವ ಫೋಟೊಗಳನ್ನು ವಾಟ್ಸ್‌ಆಯಪ್‌ಗೆ ಕಳುಹಿಸಿ, ಇವರಿಂದ ಶಿಫಾರಸು ಮಾಡಿಸುತ್ತೇನೆ. ನನ್ನನ್ನು ಪ್ರೀತಿಸಿ ಎಂದು ಪದೇ ಪದೇ ಹೇಳುತ್ತಿದ್ದರು. ಅದಾದ ಮೇಲೆ ಡಿಸಿಎಂ ಹಾಗೂ ಗೃಹ ಸಚಿವರಿಂದ ಕರೆ ಬಂದಿತ್ತು. ಮಹಿಳೆ ನೀಡಿದ ದೂರು ಏಕೆ ಸ್ವೀಕರಿಸುತ್ತಿಲ್ಲ ಎಂದು ವಿಚಾರಿಸಿದ್ದರು. ಅವರು ಠಾಣೆಗೆ ಬಂದು ದೂರು ನೀಡಿಲ್ಲ. ಅಲ್ಲದೇ ಕರೆ ಮಾಡಿ ಅಸಂಬದ್ಧವಾಗಿ ಮಾತನಾಡಿದ್ದಾರೆ. ಠಾಣೆಗೆ ಬಂದು ದೂರು ಕೊಟ್ಟರೆ ಸ್ವೀಕರಿಸುತ್ತೇನೆ ಎಂಬುದಾಗಿ ತಿಳಿಸಿದ್ದೆ’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನಾನು ಇಲ್ಲದಿರುವಾಗ ಆರೋಪಿ ಮಹಿಳೆ ಠಾಣೆಗೆ ಬಂದು ಇನ್‌ಸ್ಪೆಕ್ಟರ್ ಸಂಬಂಧಿಕರು ಎಂದು ಹೇಳಿಕೊಂಡಿದ್ದರು. ಅಲ್ಲದೇ ಹೂಗುಚ್ಛ ಹಾಗೂ ಡಬ್ಬಿಯನ್ನು ಇಟ್ಟು ಹೋಗಿದ್ದರು. ಈ ರೀತಿ ಯಾವುದೇ ವಸ್ತುಗಳನ್ನು ನೀಡಬಾರದೆಂದು ಕರೆ ಮಾಡಿ ಅವರಿಗೆ ತಿಳಿಸಿದ್ದೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಟ್ಟಡ ಕಬಳಿಸಲು ಯತ್ನ…

ಗುತ್ತಿಗೆದಾರ ಸತೀಶ್‌ ರೆಡ್ಡಿ ಅವರಿಗೆ ಸೇರಿದ ಮೂರು ಅಂತಸ್ತಿನ ಕಟ್ಟಡವನ್ನು ಕಬಳಿಸಲು ವನಜಾ ಅವರು ಯತ್ನಿಸಿದ್ದರು ಎಂದು ಕೆ.ಆರ್. ಪುರ ಠಾಣೆಯಲ್ಲಿ 2023ರ ಸೆಪ್ಟೆಂಬರ್‌ 27ರಂದು ಪ್ರಕರಣ ದಾಖಲಾಗಿತ್ತು. ‘ವನಜಾ ಅವರು ಕಟ್ಟಡವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವ ಉದ್ದೇಶದಿಂದ ಸತೀಶ್ ರೆಡ್ಡಿಯೊಂದಿಗೆ ಸಲುಗೆಯಿಂದ ಇದ್ದರು. ನಂತರ ಇಬ್ಬರ ಸ್ನೇಹ ಕಡಿತವಾಗಿತ್ತು. ಆದರೂ ರೌಡಿಗಳಿದ್ದಾರೆಂದು ಮಹಿಳೆ ಬೆದರಿಸುತ್ತಿದ್ದರು’ ಎಂದು ಎಂದು ಪೊಲೀಸರು ಹೇಳಿದರು. ‘ಪೊಲೀಸ್ ಕಾನ್‌ಸ್ಟೆಬಲ್‌ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿ ಇದೇ ರೀತಿ ಕೃತ್ಯ ಎಸಗುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

‘ಲವ್‌ ಯು ಚಿನ್ನಿ’ ಎಂದು ಬರೆದಿದ್ದ ಮಹಿಳೆ

‘ನ.7ರಂದು ದೂರುಗಳ ವಿಚಾರಣೆ ನಡೆಸುತ್ತಿರುವಾಗ ಕಚೇರಿಗೆ ಬಂದಿದ್ದ ವನಜಾ ಅವರು ಲಕೋಟೆಯೊಂದನ್ನು ನೀಡಿದ್ದರು. ಅದರಲ್ಲಿ ಮೂರು ಪತ್ರಗಳಿದ್ದವು. ಅಲ್ಲದೇ 20 ಮಾತ್ರೆಗಳೂ ಲಕೋಟೆಯಲ್ಲಿ ಇದ್ದವು. ಪತ್ರದಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಕಂಡುಬಂತು. ನಿಮಗೆ ತೊಂದರೆ ನೀಡಲು ಇಷ್ಟವಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂಬುದಾಗಿ ಬೆದರಿಕೆ ಹಾಕಿದ್ದರು. ತನ್ನ ಸಾವಿಗೆ ನೀವೇ ಕಾರಣ ಎಂದೂ ಬರೆದಿದ್ದರು. ಒಂದು ಹಾಳೆಯಲ್ಲಿ ‘ಲವ್‌ ಯು ಚಿನ್ನಿ…’ ಎಂದು ರಕ್ತದಲ್ಲಿ ಬರೆದಿರುತ್ತೇನೆ ಎಂಬುದಾಗಿಯೂ ಮಹಿಳೆ ಹೇಳಿದ್ದರು’ ಎಂದು ದೂರಿನಲ್ಲಿ ಇನ್‌ಸ್ಪೆಕ್ಟರ್‌ ತಿಳಿಸಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed