Posts Slider

Karnataka Voice

Latest Kannada News

ಈಜು ಪಟು ಜಗತ್ ಪ್ರಕಾಶ ನಡ್ಡಾ ಈಗ ಬಿಜೆಪಿ ರಾಷ್ಟ್ರಾಧ್ಯಕ್ಷ

Spread the love

ತಳಮಟ್ಟದ ರಾಜಕಾರಣದಿಂದ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಪ್ರಾಮುಖ್ಯತೆ ಪಡೆಯುವಲ್ಲಿ ಯಶಸ್ವಿಯಾಗಿರುವ ನಡ್ಡಾ, ಕೊನೆಗೂ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
ಜೆ.ಪಿ.ನಡ್ಡಾ ಅಷ್ಟು ಸುಲಭಕ್ಕೆ ಇದನ್ನ ದಕ್ಕಿಸಿಕೊಂಡದ್ದಲ್ಲ. ಉತ್ತರ ಪ್ರದೇಶದಲ್ಲಿ ರಚನೆಯಾಗಿದ್ದ ಮಹಾಘಟಬಂಧನವನ್ನೇ ಧೂಳಿಪಟ ಮಾಡಿದ ಅವರ ಚಾತುರ್ಯ ಬಿಜೆಪಿಯ ಅತ್ಯುನ್ನತ ಸ್ಥಾನಕ್ಕೇರಿಸಿದೆ.
ನಡ್ಡಾ ಅವರು ಮೋದಿ ಮತ್ತು ಅಮಿತ್‌ ಶಾ ಅವರಿಗೆ ಆಪ್ತರಾದರೂ, ರಾಷ್ಟ್ರ ರಾಜಕಾರಣಕ್ಕೆ ಬಂದಿದ್ದು ಮಾತ್ರ ನಿತಿನ್‌ ಗಡ್ಕರಿ ಅವರ ಮೂಲಕ. 2010ರಲ್ಲಿ ಗಡ್ಕರಿ ಪಕ್ಷದ ರಾಷ್ಟ್ರ ಘಟಕದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡ್ಡಾರನ್ನು ತಮ್ಮ ತಂಡದಲ್ಲಿ ಸೇರಿಸಿಕೊಂಡು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ್ದರು.
ಜೆ.ಪಿ ನಡ್ಡಾ ಜನಿಸಿದ್ದು ಡಿ.2 1960ರಲ್ಲಿ. ನಾರಾಯಣ್‌ಲಾಲ್‌ ನಡ್ಡಾ ಮತ್ತು ಕೃಷ್ಣಾ ನಡ್ಡಾ ಅವರ ಪುತ್ರ. ಪಾಟ್ನಾ ‘ಸೆಂಟ್‌ ಕ್ಸೇವಿಯರ್‌’ ಶಾಲೆಯಲ್ಲಿ  ಪ್ರಾಥಮಿಕ ಶಿಕ್ಷಣ ಪಡೆದಿದ್ದಾರೆ. ಪಾಟ್ನಾ ವಿಶ್ವವಿದ್ಯಾಲಯದಿಂದಲೇ ಬಿ.ಎ ಪದವಿ ಪಡೆದುಕೊಂಡಿದ್ದಾರೆ. ಹಿಮಾಚಲ ಪ್ರದೇಶದ ಶಿಮ್ಲಾ ವಿವಿಯಿಂದ ಕಾನೂನು ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ನಡ್ಡಾ ಈಜು ಪಟುವೂ ಹೌದು. ಚಿಕ್ಕಂದಿನಲ್ಲಿ ಅವರು ರಾಷ್ಟ್ರೀಯ ಕಿರಿಯರ ಈಜು ಸ್ಪರ್ಧೆಯಲ್ಲಿ ಬಿಹಾರ ತಂಡವನ್ನು ಪ್ರತಿನಿಧಿಸಿದ್ದರು. ಡಿ. 11, 1991ರಲ್ಲಿ ಮಲ್ಲಿಕಾ ಅವರನ್ನು ವಿವಾಹವಾಗಿರುವ ಇವರಿಗೆ ಎರಡು ಗಂಡು ಮಕ್ಕಳಿದ್ದಾರೆ.
ಜಗತ ಪ್ರಕಾಶ ನಡ್ಡಾ ಅವರ ತಂದೆ ನಾರಾಯಣ್‌ಲಾಲ್‌ ಪಟ್ನಾ ವಿಶ್ವವಿದ್ಯಾಲಯದ ಕುಲಪತಿಯೂ ಆಗಿದ್ದರು. 1978ರಲ್ಲಿ ಎಬಿವಿಪಿ ಸೇರುವುದರೊಂದಿಗೆ ನಡ್ಡಾ ಅವರ ರಾಜಕೀಯ ಪ್ರಯಾಣ ಆರಂಭವಾಗಿತ್ತು. 1991–94ರಲ್ಲಿ ನಿತಿನ್‌ ಗಡ್ಕರಿ, ಅಮಿತ್‌ ಶಾ ಅವರೊಂದಿಗೆ ನಡ್ಡಾ ಬಿಜೆಪಿಯ ಯುವ ಮೋರ್ಚಾದಲ್ಲಿ ಕೆಲಸ ಮಾಡಿದ್ದರು. ನಡ್ಡಾ ಅವರ ಪತ್ನಿ ಮಲ್ಲಿಕಾ ಅವರು ಹಿಮಾಚಲ ಪ್ರದೇಶದಲ್ಲಿ ಇತಿಹಾಸ ಪ್ರಾದ್ಯಾಪಕಿಯಾಗಿದ್ದು, ಅವರು ಕೂಡಾ ಎಬಿವಿಪಿ ಹಿನ್ನೆಲೆಯುಳ್ಳವರು. 1988–1999ರ ದಶಕದ ಅವಧಿಗೆ ಮಲ್ಲಿಕಾ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದರು.
ನಡ್ಡಾ 1993ರಲ್ಲಿ  ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಹಿಮಾಚಲ ಪ್ರದೇಶದ ಬಿಲಾಸ್‌ಪುರ (ಸಾದರ್‌)ನಿಂದ ಅವರು ಮೊದಲ ಬಾರಿಗೆ ಆಯ್ಕೆಯಾಗಿದ್ದರು. 1998ರಲ್ಲಿ ಅವರು ಮರು ಆಯ್ಕೆಯಾಗಿದ್ದರು. ಅಲ್ಲದೆ, ಅಂದಿನ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 2003ರಲ್ಲಿ ವಿಧಾನಸಭೆ ಚುನಾವಣೆ ಸೋತರಾದರೂ, 2007ರಲ್ಲಿ ಮರು ಆಯ್ಕೆಯಾದರು. 2007–2012ರ ಬಿಜೆಪಿ ಸರ್ಕಾರದ ಮಂತ್ರಿ ಮಂಡಲದಲ್ಲಿ ಅರಣ್ಯ ಖಾತೆ ಸಚಿವರಾಗಿದ್ದ ನಡ್ಡಾ 2010ರಲ್ಲಿ ಅಂದಿನ ಮುಖ್ಯಮಂತ್ರಿ ಪ್ರೇಮ್‌ಕುಮಾರ್‌ ಧುಮಾಲ್‌ ಅವರೊಂದಿಗಿನ ಭಿನ್ನಾಭಿಪ್ರಾಯದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರದಿಂದ ಹೊರ ಬಂದಿದ್ದರು.
ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿಯ ರಾಷ್ಟ್ರ ಘಟಕದ ಅಧ್ಯಕ್ಷರಾದ ನಂತರ ಜೆ.ಪಿ ನಡ್ಡಾ ಅವರನ್ನು ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿಕೊಂಡರು. 2012ದಿಂದಲೂ ರಾಜ್ಯಸಭೆ ಸದಸ್ಯರಾಗಿರುವ ಅವರು ಮೋದಿ ನೇತೃತ್ವದ ಸರ್ಕಾರದಲ್ಲಿ ಕುಟುಂಬ ಕಲ್ಯಾಣ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದರು.
2017ರಲ್ಲಿ ನಡೆದ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿತ್ತಾದರೂ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮ್‌ಕುಮಾರ್‌ ಧುಮಾಲ್‌ ಸೋಲುವ ಮೂಲಕ ಹೊಸ ಮುಖ್ಯಮಂತ್ರಿಯ ಹುಡುಕಾಟ ಆರಂಭವಾಗಿತ್ತು. ಆಗ ಮುಖ್ಯಮಂತ್ರಿ ಸ್ಥಾನಕ್ಕೆ ನಡ್ಡಾ ಅವರ ಹೆಸರು ಪ್ರಬಲವಾಗಿ ಕೇಳಿಬಂದಿತ್ತಾದರೂ, ಕೊನೆಗೆ ಜೈರಾಮ್‌ ಠಾಕೂರ್‌ ಅವರು ಮುಖ್ಯಮಂತ್ರಿಯಾಗಿದ್ದರು. ಅದಾದ ನಂತರ ಅವರು ರಾಷ್ಟ್ರ ರಾಜಕಾರಣದತ್ತ ಹೆಚ್ಚು ಕ್ರಿಯಾಶೀಲರಾದರು.
ಕಳೆದ 2014ರ ಲೋಕಸಭೆ ಚುನಾವಣೆಯಲ್ಲಿ ಖುದ್ದು ಅಮಿತ್‌ ಶಾ ಅವರೇ ಮುಂದೆ ನಿಂತು ಉತ್ತರ ಪ್ರದೇಶದ ಚುನಾವಣೆ ಕೆಲಸಗಳನ್ನು ನಿಭಾಯಿಸಿದ್ದರಿಂದ ಆ ಚುನಾವಣೆಯಲ್ಲಿ ಬಿಜೆಪಿ 71 ಸ್ಥಾನಗಳನ್ನು ಗೆದ್ದು ಬೀಗಿತ್ತು. ಆದರೆ, 2019ರ ಚುನಾವಣೆ ಹೊತ್ತಿಗೆ ಉತ್ತರ ಪ್ರದೇಶದ ರಾಜಕೀಯ ಚಿತ್ರಣ ಬದಲಾಗಿ ಬದ್ಧ ವೈರಿಗಳಾಗಿದ್ದ ಎಸ್‌ಪಿ–ಬಿಎಸ್‌ಪಿಗಳು ಒಂದಾಗಿ ಬಿಜೆಪಿಯನ್ನು ಎದುರಿಸಲು ಸಿದ್ಧವಾಗಿದ್ದವು. ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಅಸಂಭವ ಎನ್ನುವಂಥ ವಿಶ್ಲೇಷಣೆಗಳು ವ್ಯಾಪಕವಾಗಿತ್ತಾದರೂ, ಅದನ್ನೆಲ್ಲ ಮೆಟ್ಟಿದ ಬಿಜೆಪಿ 62 ಸ್ಥಾನಗಳಲ್ಲಿ ಗೆದ್ದಿತ್ತು. ಹಿಂದಿನ ಬಾರಿಗಿಂತಲೂ ಕೇವಲ 9 ಸ್ಥಾನಗಳನ್ನಷ್ಟೇ ಅದು ಕಳೆದುಕೊಂಡಿತ್ತು. ಈ ದೊಡ್ಡ ಗೆಲುವಿನ ಹಿಂದೆ ಕೆಲಸ ಮಾಡಿದ್ದು ಇದೇ ಜೆ.ಪಿ ನಡ್ಡಾ.
ನಡ್ಡಾ ಹಿಮಾಚಲ ಪ್ರದೇಶದವಾದ ಮೇಲೆ ಉತ್ತರ ಪ್ರದೇಶದಂಥ ದೊಡ್ಡ ರಾಜ್ಯದ ರಾಜಕಾರಣದ ಅಖಾಡಕ್ಕಿಳಿದು, ರಾಜಕೀಯ ಲೆಕ್ಕಾಚಾರಗಳನ್ನೆಲ್ಲ ತಲೆಕೆಳಗು ಮಾಡಿದ್ದು ಅವರ ಸಂಘಟನಾ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ.
2014ರಲ್ಲಿ ಉತ್ತರ ಪ್ರದೇಶವನ್ನು ಒಲಿಸಿಕೊಂಡ ಕಾರಣಕ್ಕೇ ಸುದ್ದಿಯಾಗಿ, ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷರಾದವರು ಅಮಿತ್‌ ಶಾ. ಅದೇ ರೀತಿ 2019ರಲ್ಲಿ ಉತ್ತರ ಪ್ರದೇಶವನ್ನು ಒಲಿಸಿಕೊಂಡವರು ಜೆ.ಪಿ ನಡ್ಡಾ. ಸಂಘಟನೆಯಲ್ಲಿ ಅಮಿತ್‌ ಶಾ ಅವರಷ್ಟೆ ನಡ್ಡಾ ಕೂಡ ಕಠಿಣ ಪರಿಶ್ರಮಿ.
ಇವೇಲ್ಲ ಕಾರಣಕ್ಕೆ ಜಗತ್ ಪ್ರಕಾಶ ನಡ್ಡಾ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ….

Spread the love

Leave a Reply

Your email address will not be published. Required fields are marked *