“ರಾಜೀ-ವಕೀಲರು”: ವಾಸ್ಕೋ ಸ್ಕೂಟರ್ ಮತ್ತೂ ಜಗದೀಶ ಶೆಟ್ಟರ ಪಯಣ..!
ಹುಬ್ಬಳ್ಳಿ: ತಂದೆಯವರಾದ ದಿವಂಗತ ಎಸ್.ಎಸ್.ಶೆಟ್ಟರ್ ಅವರ ಆಶಯ ಹಾಗೂ ಆದರ್ಶಗಳನ್ನು ಅನುಸರಿಸಿ ರಾಜಕೀಯ ಜೀವನದಲ್ಲಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದ್ದೇನೆ. ಹುಬ್ಬಳ್ಳಿ ಧಾರವಾಡ ಸಂಪೂರ್ಣ ಅಭಿವೃದ್ಧಿಯಾದಾಗಲೇ ರಾಜಕೀಯ ಜೀವನ ಸಾರ್ಥಕವೆನಿಸಿ, ನೆಮ್ಮದಿ ದೊರೆಯುತ್ತದೆ ಎಂದು ಬೃಹತ್ ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಎಸ್.ಎಸ್. ಶೆಟ್ಟರ್ ಫೌಂಡೇಷನ್ ವತಿಯಿಂದ ದಿವಂಗತ ಎಸ್.ಎಸ್. ಶೆಟ್ಟರ್ ಸ್ಮರಣಾರ್ಥ ಭಾನುವಾರ ನಗರದ ಸವಾಯಿ ಗಂಧರ್ವ ಹಾಲ್’ನಲ್ಲಿ ಏರ್ಪಡಿಸಲಾದ ದತ್ತಿ ಉಪನ್ಯಾಸ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಂದೆಯವರು 50 ವರ್ಷದ ವಕೀಲಿ ವೃತ್ತಿಯನ್ನು ನಿಸ್ವಾರ್ಥ ಮನೋಭಾವದಿಂದ ನಿರ್ವಹಿಸಿದರು. ಹುಬ್ಬಳ್ಳಿ- ಧಾರವಾಡದಲ್ಲಿ ‘ರಾಜೀ ವಕೀಲರು’ ಎಂದು ಹೆಸರು ವಾಸಿಯಾಗಿದ್ದರು. ಕೋರ್ಟ್ ಗಳಲ್ಲಿ ವ್ಯಾಜ್ಯ ಹೂಡಿ ಸಮಯ ಜಾಗೂ ಹಣ ಕಳೆದುಕೊಳ್ಳದಂತೆ ಕಕ್ಷಿದಾರರಗೆ ಬುದ್ದಿವಾದ ಹೇಳುತ್ತಿದ್ದರು. ಬಡವರು ಹಾಗೂ ನಿರ್ಗತಿಕರ ಪರವಾಗಿ ಉಚಿತವಾಗಿ ಕೇಸುಗಳನ್ನು ವಾದಿಸುತ್ತಿದ್ದರು.ಅವರ ನಿಸ್ವಾರ್ಥ ಹಾಗೂ ಮಾನವೀಯ ಗುಣ ನಮಗೆ ಆದರ್ಶಪ್ರಾಯವಾಗಿದೆ. ಸಸತವಾಗಿ 5 ಬಾರಿ ಪಾಲಿಕೆ ಸದಸ್ಯರಾಗಿದ್ದ ಅವರು ಒಮ್ಮೆ ಮಹಾನಗರದ ಮಹಾಪೌರರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. 3 ಬಾರಿ ವಿಧಾನ ಸಭೆ ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಂತಿದ್ದ ಅವರಿಗೆ ವಿಜಯ ದೊರಕಲಿಲ್ಲ. ಅವರ ಸತತ ಶ್ರಮ ಹಾಗೂ ಪ್ರಾಮಾಣಿಕ ಪ್ರಯತ್ನ 1994 ರಲ್ಲಿ ಶಾಸಕನಾಗಿ ನಾನು ಆಯ್ಕೆಯಾಗುವುದರೊಂದಿಗೆ ಫಲಪ್ರಧವಾಯಿತು. ರಾಜಕೀಯದಲ್ಲಿ ಭದ್ರ ನೆಲೆಕಲ್ಪಿಸಿತು. 1972 ರಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಪಾಸು ಮಾಡಿದ ಬಳಿಕ ತಂದೆಯವರನ್ನು ದುಂಬಾಲು ಬಿದ್ದು ವಾಸ್ಕೋ ಸ್ಕೂಟರ್ ಖರೀದಿಗೆ ನೊಂದಾಯಿಸಿದ್ದೆ. 1984 ರಲ್ಲಿ ಹತ್ತು ವರ್ಷಗಳ ಬಳಿಕ ಸ್ಕೂಟರ್ ನನಗೆ ದೊರಕಿತು. ಪ್ರತಿದಿನ ಸ್ಕೂಟರ್ ನಲ್ಲಿ ತಂದೆಯವರೊಂದಿಗೆ ವಕೀಲಿ ವೃತ್ತಿ ಅಭ್ಯಾಸಕ್ಕೆ ನ್ಯಾಯಾಲಯಕ್ಕೆ ತೆರಳುತಿದ್ದೆ. ಇದೇ ಸಂದರ್ಭದಲ್ಲಿ ಮದುವೆಯಾದ್ದರಿಂದ ಮಡದಿಯನ್ನು ಸಹ ಸ್ಕೂಟರ್ ನಲ್ಲಿ ಕೂರಿಸಿಕೊಂಡು ಸುತ್ತಾಡಿದೆ. ತಂದೆ ತಾಯಿಯವರ ಆರ್ಶೀವಾದ ಹಾಗೂ ಧರ್ಮಪತ್ನಿ ಸಹಕಾರದಿಂದ ರಾಜಕೀಯ ಜೀವನದಲ್ಲಿ ಯಶಸ್ಸು ಲಭಿಸಿದೆ ಎಂದು ನೆನಪುಗಳನ್ನು ಮೆಲಕು ಹಾಕಿದರು.
ಕೈಗಾರಿಕ ಸಚಿವಾನದ ಮೇಲೆ ಕೆ.ಐ.ಡಿ.ಬಿ.ಯಲ್ಲಿ ಸಾವಿರಾರು ವ್ಯಾಜ್ಯಗಳು ಇದಿದ್ದನ್ನು ಕಂಡು, ಪ್ರತಿ ಜಿಲ್ಲೆಯಲ್ಲೂ ಕೈಗಾರಿಕಾ ಅದಾಲತ್ ಆಯೋಜನೆ ಮಾಡಿದ್ದೇನೆ. ಇದರಿಂದ ಹತ್ತಾರು ವರ್ಷಗಳ ಕಾಲ ಸಣ್ಣ ಪುಟ್ಟ ಕಾರಣಗಳಿಗೆ ಇದ್ದ ವ್ಯಾಜ್ಯಗಳು ಸುಖಾಂತ್ಯ ಕಂಡಿವೆ. 1994 ರಿಂದ ಹುಬ್ಬಳ್ಳಿ ಜನತೆ ನನ್ನನ್ನು ಶಾಸಕನಾಗಿ ಆರಿಸಿ ತಂದಿದ್ದಾರೆ. ಹುಬ್ಬಳ್ಳಿ ಧಾರವಾಡ ನಗರವನ್ನು ಸಂಪೂರ್ಣ ಉನ್ನತ ಮಟ್ಟದ ನಗರವನ್ನಾಗಿ ರೂಪಿಸಿದಾಗ ಮಾತ್ರ ನೆಮ್ಮದಿ ದೊರೆಯುತ್ತದೆ. ಜಿಲ್ಲೆಯ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರಿನ ಸರಬರಾಜು ಮಾಡಲು ವರ್ಷಧಾರೆ ಯೋಜನೆ ರೂಪಿಸಲಾಗಿದೆ ಎಂದರು.
ಎಸ್.ಎಸ್.ಶೆಟ್ಟರ್ ಫೌಂಡೇಶನ್ ವತಿಯಿಂದ ಸಸತ ಎಂಟು ವರ್ಷಗಳಿಂದ ತಂದೆಯವರ ಸ್ಮರಣಾರ್ಥ ವೈಶಿಷ್ಟ್ಯ ಪೂರ್ಣ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ನಗರದ ಸಮಗ್ರ ಬೆಳವಣಿಗೆ ಕುರಿತು ಸ್ಮಾರಕ ದತ್ತಿನಿಧಿಯಿಂದ ಚಿಂತನ ಮಂಥನ ಆಯೋಜಿಸಲಾಗುವುದು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಫೌಂಡೇಶನ್ ವತಿಯಿಂದ ಬಡವರಿಗೆ 20 ಸಾವಿರ ಫುಡ್ ಕಿಟ್ ಹಂಚಿಕೆ ಮಾಡಲಾಗಿದೆ ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಒಂಬತ್ತು ಮಂದಿಗೆ ಸನ್ಮಾನಿಸಲಾಯಿತು. ಧಾರವಾಡದ ಸಾಹಿತಿ ಅನಂತ ದೇಶಪಾಂಡೆ ದ.ರಾ. ಬೇಂದ್ರೆ ರೂಪಕ ಪ್ರಸ್ತತ ಪಡಿಸಿದರು. ಸೈಬರ ಅಪರಾಧಗಳ ಕುರಿತು ಜಾಗೃತಿ ಮೂಡಿಸಲಾಯಿತು.
ಶಿರಹಟ್ಟಿಯ ಸಂಸ್ಥಾನಮಠದ ಫಕೀರಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ನಿವೃತ್ತ ಪ್ರಾಚಾರ್ಯ ಹಾಗೂ ಸಾಹಿತಿ ಡಾ. ಬಸವರಾಜ ಜಗಜಂಪಿ ವಚನ ಸಾಹಿತ್ಯ ಆಧರಿಸಿ ನೆಮ್ಮದಿಯ ಬದುಕಿನ ಸೂತ್ರದ ಕುರಿತು ಉಪನ್ಯಾಸ ನೀಡಿದರು.ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಮೋಹನ ಶೆಟ್ಟರ್, ಪ್ರೊ. ಕೆ.ಎಸ್. ಕೌಜಲಗಿ, ಡಾ. ಲಿಂಗರಾಜ ಅಂಗಡಿ ಮುಂಡರುಗಾಳಾದ ಮಲ್ಲಿಕಾರ್ಜುನ ಸಾವುಕಾರ ಸೇರಿದಂತೆ ಮತ್ತಿತರು, ಸಂತೋಷ ಚೌವ್ಹಾಣ್ ಇದ್ದರು.