“ಮನೆ ಬಾಗಿಲಿಗೆ ಮಹಾನಗರ ಪಾಲಿಕೆ” ಮೇಯರ್ ಈರೇಶ ಅಂಚಟಗೇರಿ ಮೊದಲ ಮಾತು…!
1 min readಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಮಹಾಪೌರರಾಗಿ ಈರೇಶ ಅಂಚಟಗೇರಿ
ಉಪಮಹಾಪೌರರಾಗಿ ಉಮಾ ಮುಕುಂದ್ ಆಯ್ಕೆ
ಹುಬ್ಬಳ್ಳಿ: ಮೂರು ವರ್ಷದ ನಂತರ ಮಹಾನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತ ಆರಂಭವಾಗಲಿದ್ದು, ನೂತನ ಮೇಯರ್ ಈರೇಶ ಅಂಚಟಗೇರಿಯವರು ಮನೆ ಬಾಗಿಲಿಗೆ ಮಹಾನಗರ ಪಾಲಿಕೆಯನ್ನ ತೆಗೆದುಕೊಂಡು ಹೋಗುವ ಕಳಕಳಿಯನ್ನ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾಗಿ ಈರೇಶ ಅಂಚಟಗೇರಿ, ಉಪಮಹಾಪೌರರಾಗಿ ಉಮಾ ಮುಕುಂದ ಬಹುಮತದಿಂದ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ, ಬೆಳಗಾವಿ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಘೋಷಿಸಿದರು.
ಮಹಾನಗರಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ಚುನಾವಣೆ ಪ್ರಕ್ರಿಯೆ ಬಳಿಕ ಅವರು ಅಧಿಕೃತವಾಗಿ ಘೋಷಣೆ ಮಾಡಿದರು.
ಮಹಾಪೌರ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿದ್ದ ಈರೇಶ ಅಂಚಟಗೇರಿ ಅವರ ಪರವಾಗಿ 50, ವಿರುದ್ಧ 35 ಹಾಗೂ ತಟಸ್ಥವಾಗಿ 4 ಸದಸ್ಯರು ಮತ ಚಲಾಯಿಸಿದರು.
ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಯೂರ ಮೋರೆ ಪರವಾಗಿ 35, ವಿರುದ್ಧ 51 ಹಾಗೂ ತಟಸ್ಥವಾಗಿ 03 ಸದಸ್ಯರು ಮತ ಚಲಾಯಿಸಿದರು.
ಎಐಎಂಐಎಂ ಅಭ್ಯರ್ಥಿಯಾಗಿದ್ದ ನಜೀರ್ ಅಹ್ಮದ್ ಹೊನ್ಯಾಳ ಅವರ ಪರವಾಗಿ 03, ವಿರುದ್ಧ 83 ಹಾಗೂ ತಟಸ್ಥವಾಗಿ 03 ಸದಸ್ಯರು ಮತ ಚಲಾಯಿಸಿದರು.
ಉಪಮಹಾಪೌರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 51 ಮತಗಳನ್ನು ಪಡೆದು ಚುನಾಯಿತರಾದರು. ಕಾಂಗ್ರೆಸ್ ಅಭ್ಯರ್ಥಿ ದೀಪಾ ಸಂತೋಷ ನೀರಲಕಟ್ಟಿ 35 ಮತಗಳನ್ನು ಪಡೆದರೆ, ಎಐಎಂಐಎಂ ನ ವಹೀದಾ ಖಾನಂ ಅಲ್ಲಾಭಕ್ಷ ಕಿತ್ತೂರ ಅವರು 03 ಮತಗಳನ್ನು ಪಡೆದರು.
ಸಭೆ ಪ್ರಾರಂಭವಾಗುತ್ತಿದ್ದಂತೆ ನೂತನ ಸದಸ್ಯರಿಂದ ಲಿಖಿತ ಪ್ರಮಾಣ ವಚನ ಪಡೆಯಲಾಯಿತು. ನಾಮಪತ್ರಗಳ ಪರಿಶೀಲನೆ ಬಳಿಕ , ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ಕಲ್ಪಿಸಲಾಯಿತು. ಯಾವುದೇ ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆಯದ ಕಾರಣ ಕೈ ಎತ್ತುವ ಮೂಲಕ ಚುನಾವಣೆ ಪ್ರಕ್ರಿಯೆ ನಡೆಯಿತು.ಪ್ರತಿ ಹತ್ತು ಜನ ಸದಸ್ಯರ ಮತ ಎಣಿಕೆ ಹಾಗೂ ಸಹಿ ಸಂಗ್ರಹಕ್ಕಾಗಿ ಓರ್ವ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿತ್ತು.
ಮಹಾನಗರಪಾಲಿಕೆಯ ಎಲ್ಲಾ 82 ಚುನಾಯಿತ ಸದಸ್ಯರ ಜೊತೆಗೆ ಮತದಾನದ ಅರ್ಹತೆ ಹೊಂದಿರುವ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ,ಮಾಜಿಮುಖ್ಯಮಂತ್ರಿ,ಶಾಸಕ ಜಗದೀಶ ಶೆಟ್ಟರ್,ಶಾಸಕರಾದ ಪ್ರಸಾದ ಅಬ್ಬಯ್ಯ,ಅರವಿಂದ ಬೆಲ್ಲದ,ಅಮೃತ ದೇಸಾಯಿ,ವಿಧಾನ ಪರಿಷತ್ ಸದಸ್ಯರಾದ ಎಸ್.ವಿ.ಸಂಕನೂರ,ಪ್ರದೀಪ ಶೆಟ್ಟರ್ ಚುನಾವಣೆಯಲ್ಲಿ ಭಾಗವಹಿಸಿ ಮತ ಚಲಾಯಿಸಿದರು.
ಮಹಾನಗರಪಾಲಿಕೆ ಆಯುಕ್ತರಾದ ಡಾ.ಬಿ.ಗೋಪಾಲಕೃಷ್ಣ, ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಗೀತಾ ಕೌಲಗಿ,ಪಾಲಿಕೆ ಹೆಚ್ಚುವರಿ ಆಯುಕ್ತ ಶಂಕರಾನಂದ ಬನಶಂಕರಿ,ಹುಬ್ಬಳ್ಳಿ ಶಹರ ತಹಸೀಲ್ದಾರ ಶಶಿಧರ ಮಾಡ್ಯಾಳ ಮತ್ತಿತರರು ಚುನಾವಣೆ ಪ್ರಕ್ರಿಯೆ ನಡೆಸಿದರು.