ಕ್ಷಣದ ಸಿಟ್ಟು “ಗಂಡನ ಉಳಿಸಲು ಹೋಗಿ ಹೆಣವಾದ ಸತಿ”- ಗದಗ ಸುತ್ತಿ ಬಂದ ಆರೋಪಿ ಮೈದುನ ಹುಬ್ಬಳ್ಳಿಯಲ್ಲಿ ಅರೆಸ್ಟ್…!!!

ಅತ್ತಿಗೆಯನ್ನು ಕೊಂದು ತಲೆಮರೆಸಿಕೊಂಡಿದ್ದ ಮೈದುನನ್ನು 24 ಗಂಟೆಯಲ್ಲಿ ಬಂಧನ ಮಾಡಿದ ಇನ್ಸ್‌ಪೆಕ್ಟರ್ ರಾಘವೇಂದ್ರ ಟೀಂ
ಹುಬ್ಬಳ್ಳಿ: ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಅಣ್ಣ ತಮ್ಮಂದಿರ ನಡುವೆ ಜಗಳ ವಿಕೋಪಕ್ಕೆ ಹೋದ ಸಂದರ್ಭದಲ್ಲಿ ಅತ್ತಿಗೆಯನ್ನೇ ಚಾಕು ಇರಿದು ಕೊಲೆಗೈದು ಪರಾರಿಯಾಗಿದ್ದ ಮೈದುನನನ್ನು ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳೂರ್ ನೇತೃತ್ವದ ತಂಡ 24 ಗಂಟೆಯಲ್ಲಿಯೇ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವೀಡಿಯೋ ಪೂರ್ಣ ನೋಡಿ…
ಹುಬ್ಬಳ್ಳಿಯ ಎಸ್. ಎಂ. ಕೃಷ್ಣಾನಗರದಲ್ಲಿ ನಾಶೀರ್ ಎಂಬಾತ ತನ್ನ ಇಬ್ಬರು ಅಣ್ಣಂದಿರ ಜೊತೆ ವಾಸವಿದ್ದ. ಆದ್ರೆ, ಕಳೆದ ಕೆಲವು ದಿನಗಳಿಂದ ಕುಟುಂಬದಲ್ಲಿ ಆಸ್ತಿಯ ವಿಚಾರಕ್ಕೇ ಮೇಲಿಂದ ಮೇಲೆ ಅಣ್ಣ ತಮ್ಮಂದಿರ ನಡುವೆ ಜಗಳವಾಗಿತ್ತು.
ನಿನ್ನೇ ಕೂಡಾ ನಾಶೀರ್ ಹಾಗೂ ಆತನ ಅಣ್ಣನ ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ನಾಶೀರ್ ಚಾಕು ತೆಗೆದುಕೊಂಡು ಅಣ್ಣನ ಮೇಲೆ ಹಲ್ಲೆ ಮಾಡಲು ಮುಂದೆ ಹೋದ ಸಮಯದಲ್ಲಿ ಅತ್ತಿಗೆ ಸಾಜಿಯಾ ಜಗಳ ಬಿಡಿಸಲು ಮುಂದಾದಾಗ, ನಾಶೀರ್ ಸಾಜಿಯಾಳ ಕುತ್ತಿಗೆಗೆ ಚಾಕು ಇರಿದ ಪರಿಣಾಮ ಸ್ಥಳದಲ್ಲೇ ಕುಸಿದು ಬಿದ್ದು ಸಾವನಪ್ಪಿದ್ದಳು.
ಸಾಜಿಯಾಳ ರಕ್ತ ಮನೆಯ ಮುಂದಿನ ರಸ್ತೆಯ ತುಂಬ ಹರಡುತ್ತಿದ್ದ ಹಾಗೆ ನಾಶೀರ್ ಭಯದಿಂದ ಬೈಕ್ ಏರಿ ಹುಬ್ಬಳ್ಳಿಯಿಂದ ಕಾಲ್ಕಿತ್ತಿದ್ದ, ಪೊಲೀಸರ ಭಯದಲ್ಲಿ ಗದಗ ಹಾಗೂ ನಗರದ ಸುತ್ತ ಮುತ್ತ ತಿರುಗುತ್ತಿದ್ದ ಖಚಿತ ಮಾಹಿತಿಯನ್ನು ಆಧರಿಸಿ ಇನ್ಸ್‌ಪೆಕ್ಟರ್ ರಾಘವೇಂದ್ರ ಹಳ್ಳೂರ್ ನೇತೃತ್ವದ ತಂಡ ಆರೋಪಿಯನ್ನು ಬಂಧನ ಮಾಡಿದ್ದಾರೆ.
ತುಂಬಿದ ಕುಟುಂಬದಲ್ಲಿ ಚಿಕ್ಕ ಚಿಕ್ಕ ಭಿನ್ನಾಭಿಪ್ರಾಯ ಬರೋದು ಸಹಜ. ಆದ್ರೆ, ಅವುಗಳನ್ನು ಶಾಂತವಾಗಿ ಕುಳಿತು ಬಗೆಹರಿಸಿಕೊಳ್ಳೋದು ಬಿಟ್ಟು ನಾಶೀರ್ ಸಿಟ್ಟಿನ ಕೈಯಲ್ಲಿ ಬುದ್ದಿ ಕೊಟ್ಟ ತಪ್ಪಿಗೆ ಅಮಾಯಕ ಜೀವ ಬಲಿಯಾಗಿದ್ದು ಒಂದೆಡೆಯಾದ್ರೆ, ಬಲಿ ಪಡೆದ ತಪ್ಪಿಗೆ ಜೈಲು ಪಾಲಾಗಿದ್ದಾನೆ.