ಹುಬ್ಬಳ್ಳಿ- ಧಾರವಾಡ ರಸ್ತೆ ಅಭಿವೃದ್ಧಿಗೆ 1000 ಕೋಟಿ ಬಿಡುಗಡೆ: ಸಚಿವರ ಹೇಳಿಕೆ
1 min readಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿ ನಗರದ ಪ್ರಮುಖ ರಸ್ತೆಗಳನ್ನು ಕೇಂದ್ರ ರಸ್ತೆ ನಿಧಿ(ಸಿ.ಆರ್.ಎಫ್) ಅಡಿ ನಿರ್ಮಾಣ ಮಾಡಲಾಗುತ್ತಿದೆ. ಉಳಿದ ರಸ್ತೆಗಳ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ನೀಡುವಂತೆ ಜನಪ್ರತಿನಿಧಿಗಳು, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಖ್ಯಮಂತ್ರಿಗಳು ಪ್ರಸ್ತಾವನೆಗೆ ಒಪಿಗ್ಪೆ ನೀಡಿದ್ದು, ಶೀಘ್ರವಾಗಿ ಸಾವಿರ ಕೋಟಿ ರುಪಾಯಿಗಳನ್ನು ರಸ್ತೆ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಹೇಳಿದರು.
ನಗರದ ಐ.ಟಿ. ಪಾರ್ಕನ ಕೆ.ಯು.ಡಿ.ಎಫ್.ಸಿ ಸಭಾಂಗಣದಲ್ಲಿ ಜರುಗಿದ ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ನಗರಾಭಿವೃದ್ಧಿ ಪ್ರಾಧಿಕಾರ, ಕ.ನ.ನಿ.ಸ ಮತ್ತು ಒಳಚರಂಡಿ ಮಂಡಳಿ ಹಾಗೂ ಕೆ.ಯು.ಐ.ಡಿ.ಎಫ್.ಸಿ ಪ್ರಗತಿ ಪರಿಶೀಲನಾ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಮಹಾನಗರ ಪಾಲಿಕೆಗೆ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಡಿ 150 ಕೋಟಿ, 15 ಹಣಕಾಸು ಯೋಜನೆ ಅಡಿ 51.50 ಕೋಟಿ, ಎಸ್.ಎಫ್.ಸಿ, ಮುಖ್ಯ ನಿಧಿ, ಎಸ್.ಇ.ಪಿ. ಟಿ.ಎಸ್.ಪಿ ಸೇರಿದಂತೆ ಎಲ್ಲಾ ಯೋಜನೆಗಳಿಂದ 229 ಕೋಟಿ ಹಣವನ್ನು ನೀಡಲಾಗಿದೆ. ಇದನ್ನು ರಸ್ತೆ ಅಭಿವೃದ್ಧಿಗಾಗಿ ವ್ಯಯಿಸಲು ಸರ್ಕಾರ ಬದ್ದವಾಗಿದೆ. ನಗರ ವಿಕಾಸ ಯೋಜನೆಯ ಕಾರ್ಯಯೋಜನೆ ಸಿದ್ದವಿದ್ದು ಶೀಘ್ರವೇ ಟೆಂಡರ್ ಕರೆದು ಕಾಮಗಾರಿ ಕೈಗೊಳ್ಳಲಾಗುವುದು. ಬರುವ ಬೇಸಿಗೆಯಲ್ಲಿ ನಗರದ ಎಲ್ಲಾ ರಸ್ತೆ ಹಾಗೂ ಒಳಚರಂಡಿಗಳನ್ನು ದುರಸ್ತಿ ಮಾಡಲಾಗುವುದು. ಮಹಾನಗರ ವ್ಯಾಪ್ತಿಯಲ್ಲಿ 77 ಕೋಟಿ ರುಪಾಯಿ ವೆಚ್ಚದಲ್ಲಿ ಎಲ್.ಇ.ಡಿ. ಲೈಟ್ ಅಳವಡಿಸಲು ಕಾರ್ಯಾದೇಶ ನೀಡಲಾಗುವುದು.
ರಾಜ್ಯದ ಎಲ್ಲಾ ಮಹಾ ನಗರಗಳಿಗೆ ಮೇಲಿಂದ ಮೇಲೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಹುಬ್ಬಳ್ಳಿ-ಧಾರವಾಡಕ್ಕೂ ನಾಲ್ಕೈದು ಬಾರಿ ಭೇಟಿ ಜನಪ್ರತಿನಿಧಿಗಳೊಂದಿಗೆ ನಗರ ಅಭಿವೃದ್ಧಿ ಕುರಿತು ಚರ್ಚಿಸಿದ್ದೇನೆ. ಕಳೆದ ಬಾರಿ ಭೇಟಿ ನೀಡಿದಾಗ ಘನತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ ಮಾಡಿದ್ದು, ಘಟಕ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನಗರದ ಹೊರ ವಯಲದಲ್ಲಿ ಶೇಖರಣೆಯಾಗಿರುವ ತ್ಯಾಜ್ಯಗಳ ವಿಲೇವಾರಿಗೆ ಪಾಲಿಕೆ ವತಿಯಿಂದ 51 ಕೋಟಿ ರುಪಾಯಿಗಳ ಯೋಜನೆ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಂದಿನ ಆಯವ್ಯಯದಲ್ಲಿ ಯೋಜನೆ ಹಣ ಬಿಡುಗಡೆ ಮಾಡಲಾಗುವುದು.
ವೇಗವಾಗಿ ಸ್ಮಾರ್ಟ್ ಸಿಟಿ ಅನುಷ್ಠಾನಕ್ಕೆ ಸೂಚನೆ
ಸ್ಮಾರ್ಟ್ ಸಿಟಿ ಕಾಮಗಾರಿ ವಿಳಂಬವಾಗುತ್ತಿರುವ ಕುರಿತು ಮಾಧ್ಯಮಗಳಲ್ಲಿ ವರದಿಗಳು ಬಂದಿವೆ. ಸ್ಮಾರ್ಟ್ ಸಿಟಿ ಯೋಜನೆ ಪ್ರಧಾನ ಮಂತ್ರಿಗಳ ಕನಸಿನ ಕೂಸು, ಗುಣಮಟ್ಟದ ಕಾಮಗಾರಿ ಬಗ್ಗೆ ರಾಜಿಯಾಗುವುದಿಲ್ಲ. ಕಾಲಮಿತಿಯಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಪ್ರಗತಿಯಲ್ಲಿ ಇರುವ ಕಾಮಗಾರಿಗಳು 5-6 ತಿಂಗಳಿನಲ್ಲಿ ಪೂರ್ಣಗೊಳ್ಳಲಿವೆ. ಸ್ಮಾರ್ಟ್ ಸಿಟಿ ಅನುಷ್ಠಾನಗೊಳಿಸಲು ಒಂದು ವರೆ ವರ್ಷಗಳ ಕಾಲಾವಕಾಶವಿದೆ. ಯೋಜನೆಯ ಹಣ ನಷ್ಟವಾಗದ ರೀತಿ ಎಲ್ಲಾ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯಲ್ಲಿಯೇ ಪೂರ್ಣಗೊಳಿಸಲಾಗುವುದು.
ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ 64 ಸಾವಿರ ಎಲ್.ಇ.ಡಿ ದೀಪಗಳನ್ನು 77 ಕೋಟಿ ವೆಚ್ಚದಲ್ಲಿ ಅಳವಡಿಸಲಾಗುತ್ತಿದೆ. ಯೋಜನೆ ಲಾಭ ನಷ್ಟಗಳನ್ನು ಪರಿಶೀಲಸಿ ಅನುಮೋದನೆ ನೀಡಲಾಗಿದೆ. ಸರ್ಕಾರಕ್ಕೆ ಯಾವುದೇ ರೀತಿಯ ಹೊರೆಯಿಲ್ಲ. ಶಿವಮೊಗ್ಗ, ಮಂಗಳೂರು, ದಾವಣಗೆರೆ, ಮೈಸೂರು ನಗರಗಳಲ್ಲಿಯೂ ಸಹ ಎ.ಇ.ಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಎಲ್ಲವೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದ್ದು, ಪಾಲಿಕೆ ವತಿಯಿಂದ ವಿದ್ಯುತ್ ವೆಚ್ಚದಲ್ಲಿ ಉಳಿತಾಯವಾಗುವ ಹಣವನ್ನು ಕಂಪನಿಗಳಿಗೆ ತಿಂಗಳ ವೆಚ್ಚದಲ್ಲಿ ಪಾವತಿ ಮಾಡಲಾಗುತ್ತಿದೆ.
ಈ ಹಿಂದೆ ಅವಳಿನಗರದಲ್ಲಿ ಬೀದಿದೀಪ ಉಸ್ತುವಾರಿ ನೋಡುತ್ತಿದ ಕಂಪನಿಗಳನ್ನು ಸರಿಯಾಗಿ ಕಾರ್ಯ ನಿರ್ವಹಿಸುವಲ್ಲಿ ವಿಫಲವಾಗಿವೆ. ಉಸ್ತುವಾರಿ ಗುತ್ತಿಗೆಯನ್ನು ಬೇರಯವರಿಗೆ ನೀಡಿದ್ದು ಶೇ.98 ರಷ್ಟು ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕಾಮಗಾರಿಗಳ ಅನುಷ್ಠಾನದ ಕುರಿತು ಸಮಿತಿ ರಚಿಸಲಾಗಿದೆ. ಪಾಲಿಕೆ ಸೇರಿದಂತೆ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ ಎಂದರು.
ಸಂಪೂರ್ಣ ಕರ ಸಂಗ್ರಹಣೆ ಸೂಚನೆ
ಅವಳಿನಗರದಲ್ಲಿ ಆಸ್ತಿ, ನೀರು ಹಾಗೂ ಮಳಿಗೆ ಕರಗಳನ್ನು ಸಂಪೂರ್ಣವಾಗಿ ಸಾರ್ವಜನಿಕರಿಂದ ಸಂಗ್ರಹಿಸಬೇಕು. ಹೀಗೆ ಸಂಗ್ರಹಿಸಿದ ಹಣವನ್ನು ಅವಳಿ ನಗರ ಅಭಿವೃದ್ಧಿಗಾಗಿ ವ್ಯಯಿಸಲಾಗುವುದು. ಪಾಲಿಕೆ ಅಧಿಕಾರಿಗಳು ಕರ ಸಂಗ್ರಹಣೆಯಲ್ಲಿ ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ ಜರುಗಿಸಲಾಗುವುದು. ಸಾರ್ವಜನಿಕರಿ ಸುಲಭವಾಗಿ ಕರ ಪಾವತಿಸಲು ವ್ಯವಸ್ಥೆ ಕಲ್ಪಿಸಿ ಬರುವ ಮಾರ್ಚ ವೇಳಗೆ ಬಾಕಿ ಸಹಿತ ಎಲ್ಲಾ ಕರಗಳನ್ನು ಸಂಗ್ರಹಿಸಬೇಕು ಎಂದರು.
ನಗರ ಸೌಂದರ್ಯಕ್ಕೆ ಆದ್ಯತೆ
ಅವಳಿ ನಗರಕ್ಕೆ ಪ್ರವೇಶ ಕಲ್ಪಿಸುವ ಗದಗ, ಕುಸುಗಲ್, ಪಿಬಿ ಹಾಗೂ ಗೊಕುಲ್ ರಸ್ತೆಗಳನ್ನು ಸ್ವಚ್ಛವಾಗಿ ಇಡಬೇಕು. ಅತಿಕ್ರಮಣಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಹುಬ್ಬಳ್ಳಿ ನಗರಕ್ಕೆ ಹೊರಗಿನಿಂದ ಆಗಮಿಸಿ ಜನರಿಗೆ ಅವಳಿ ನಗರ ಸುಂದರವಾಗಿ ಗೋಚರಿಸಬೇಕು. ಪಾಲಿಕೆ ಅಧಿಕಾರಿಗಳು ಪೌರ ಕಾರ್ಮಿಕರಿಂದ ರಸ್ತೆ ಇಕ್ಕೆಲಗಳಲ್ಲಿ ಬಿದ್ದಿರುವ ನಿರ್ಮಾಣ ತ್ಯಾಜ್ಯಗಳನ್ನು ಸೇರಿದಂತೆ ಎಲ್ಲಾ ತ್ಯಾಜ್ಯಗಳನ್ನು ತೆರವುಗೊಳಿಸಬೇಕು. ಅವಳಿನಗರ 67 ವಾರ್ಡಗಳಲ್ಲಿಯೂ ಸಂಪೂರ್ಣ ಸ್ವಚ್ಛತಾ ಅಭಿಯಾನಗಳನ್ನು ನಡೆಸಬೇಕು. ನಿರ್ಲಕ್ಷ ತೋರಿದ ಅಧಿಕಾರಿಗಳನ್ನು ಕೆಲಸದಿಂದ ವಜಾ ಮಾಡಲಾಗುವುದು ಎಂದು ಸಚಿವರು ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಚ್ಚರಿಸಿದರು.
ಕಸ ಸಂಗ್ರಹಣೆ ಟಿಪ್ಪರ್‌ಗಳು ಕಾರ್ಯನಿರ್ವಹಣೆ ಕುರಿತ ಚರ್ಚೆಯ ಸಂದರ್ಭದಲ್ಲಿ ಶಾಸಕ ಅರವಿಂದ ಬೆಲ್ಲದ್ ಅಸಮರ್ಪಕ ಕಾರ್ಯವೈಖರಿ ಕುರಿತು ಸಚಿವರ ಗಮನ ಸೆಳೆದರು. ಪಾಲಿಕೆ ಟಿಪ್ಪರ್‌ಗಳನ್ನು ಪ್ರತಿನಿತ್ಯ ವಿಂಗಡಿಸಿದ ಕಸ ಸಂಗ್ರಹಿಸಬೇಕು. ಕಾರ್ಯ ನಿರ್ವಹಣೆಯಲ್ಲಿ ದೋಷ ಕಂಡುಬಂದರೆ ಕಸ ಸಂಗ್ರಹಣೆಯ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
ಒಳಚಂರಡಿ ನೀರು ಸಂಸ್ಕರಣಾ ಘಟಕಗಳನ್ನು ಸರಿಯಾಗಿ ಕಾರ್ಯನಿರ್ವಹಿಸಬೆಕು. ಜನಪ್ರತಿನಿಧಿಗಳು ಈ ಕುರಿತು ದೂರುಗಳನ್ನು ತಿಳಿಸಿದ್ದಾರೆ. ಮುಂದಿನ ಬಾರಿ ಇದು ಪುನರಾವರ್ತನೆಯಾದರೆ ಸಂಬಂಧ ಪಟ್ಟ ಅಧಿಕಾರಿಯನ್ನು ಹೊಣೆಯಾಗಿಸಿ ಶಿಸ್ತುಕ್ರಮ ಕೈಗೊಳ್ಳಲಾವುದು. ಸರ್ಕಾರದ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲರೂ ಜವಬ್ದಾರಿಗಳನ್ನು ಅರಿಯಬೇಕು. ಸರಕಾರದ ಅನ್ನ ತಿನ್ನುತ್ತಿದ್ದೇವೆ. ಅದರ ಋಣವನ್ನು ಸಹ ತೀರಿಸಬೇಕು ಎಂದರು.
ಅಕ್ರಮ ಸಕ್ರಮ ಕುರಿತು ಸಚಿವ ಸಂಪುಟ ಉಪ ಸಮಿತಿ ರಚನೆ
ನಗರಗಳಲ್ಲಿನ ಅಕ್ರಮ ಸಕ್ರಮ ಆಸ್ತಿಗಳ ಕುರಿತು ಗ್ರಾಮೀಣಾಭಿವೃದ್ದಿ ಸಚಿವರಾದ ಕೆ.ಎಸ್.ಈಶ್ವರಪ್ಪನವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿಯನ್ನು ರಚಿಸಲಾಗಿದೆ. ಎಲ್ಲಾ ಸಾದಕ ಬಾದಕಗಳನ್ನು ಸಮಿತಿಯಲ್ಲಿ ಚರ್ಚಿಸಿ ಸರ್ಕಾರಕ್ಕೆ ವರದಿ ನೀಡಲಾಗುವುದು. ಪಾಲಿಕೆ ಪಿಂಚಣಿ ಪಾವತಿಗೆ 52 ಕೋಟಿ ರೂಪಾಯಿಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಉಳಿದ ಹಣವನ್ನು ಸಹ ಶೀಘ್ರವಾಗಿ ಬಿಡುಗಡೆ ಮಾಡಲಾಗುವುದು. ವಿಶ್ವ ಬ್ಯಾಂಕ್ ನೆರವಿನ 2800 ಕೋಟಿ ರೂಪಾಯಿಯಲ್ಲಿ ಅವಳಿ ನಗರ ಸೇರಿದಂತೆ ಕಲಬುರ್ಗಿ, ಬೆಳಗಾವಿಯಲ್ಲಿ 24*7 ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆ ಅಧ್ಯಕ್ಷ ಮತ್ತು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಬಸವರಾಜ ಹೊರಟ್ಟಿ, ಅರವಿಂದ ಬೆಲ್ಲದ್, ಶ್ರೀನಿವಾಸ ಮಾನೆ, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಪಾಲಿಕೆ ಆಯುಕ್ತ ಡಾ.ಸುರೇಶ್ ಇಟ್ನಾಳ್, ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಎಂ.ಟಿ.ರೆಜು, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ಶಕೀಲ್ ಅಹಮದ್, ಹುಡಾ ಆಯುಕ್ತ ವಿನಾಯಕ ಪಾಲನಕ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.