ಕೋಟಿ ಮೌಲ್ಯದ ತಿಮಿಂಗಲ ವಾಂತಿ ದಂಧೆ: ಹುಬ್ಬಳ್ಳಿಯ ಇಬ್ಬರು ಸೇರಿ ಆರು ಜನರ ಬಂಧನ…
1 min readಬಳ್ಳಾರಿ: ಅವರೆಲ್ಲಾ ಪಕ್ಕಾ ಕಳ್ಳರು. ಆದ್ರೆ, ಎಲ್ಲಾ ಕಳ್ಳರು ಮಾಡೋ ಹಾಗೆ ಮನೆಕಳ್ಳತನ, ಕಿಸೆ ಕಳ್ಳತನ ಮಾಡ್ತಿರಲಿಲ್ಲ. ಅದಕ್ಕಾಗಿಯೇ ಬೇರೆ ದಾರಿ ಹುಡುಕಿಕೊಂಡಿದ್ರು. ಹೌದು.. ಅವ್ರೆಲ್ಲಾ ಸಮುದ್ರದಲ್ಲಿ ಸಿಗೋ ತಿಮಿಂಗಲದ ವಾಂತಿಯನ್ನು ಮಾರಾಟ ಮಾಡಿ ಶ್ರೀಮಂತರಾಗಬೇಕು ಎನ್ನೋ ಹಪಾಹಪಿ ಹೊಂದಿದ್ದವರು. ಇದೇ ಕೆಲಸದ ಮೇಲೆ ಅವರಿದ್ದಾಗ, ಪೊಲೀಸರು ದಾಳಿ ಮಾಡಿ ಮಾಲು ಸಮೇತ ಆರು ಜನ ಆರೋಪಿತರನ್ನು ಬಂಧಿಸಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ಎಸ್.ವಿ.ಕೆ ಬಸ್ ನಿಲ್ದಾಣದ ಬಳಿ ಈ ಅಪರೂಪದ ತಿಮಿಂಗಲದ ವಾಂತಿಯನ್ನು ಮಾರಾಟ ಮಾಡೋದಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಒಂದೂವರೆ ಕೆಜಿ ತಿಮಿಂಗಲದ ವಾಂತಿಯೊಂದಿಗೆ ಹೊಸಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದರ ಮೌಲ್ಯದ ಅಂದಾಜು ಒಂದೂವರೆ ಕೋಟಿ ರೂಪಾಯಿಯಷ್ಟಾಗುತ್ತದೆ. ಇನ್ನು ಇವರಿಬ್ಬರನ್ನು ಪೊಲೀಸರು ವಿಚಾರಣೆ ನಟೆಸಿದಾಗ ಇನ್ನೂ ನಾಲ್ಕು ಜನರ ಮಾಹಿತಿ ದೊರೆತು ಅವರನ್ನೂ ಸಹ ಬಂಧಿಸಲಾಗಿದೆ ಎಂದು ವಿಜಯನಗರ ಎಸ್ಪಿ ಡಾ. ಅರುಣ್ ಕೆ ಹೇಳಿದರು.
ಕೊಪ್ಪಳ ಜಿಲ್ಲೆ ಬಂಡಿ ಹರ್ಲಾಪುರದ ಲಂಬಾಣಿ ವೆಂಕಟೇಶ್ ಹಾಗೂ ಅಬ್ದುಲ ವಹಾಬ ಎಂಬುವವರು ಈ ತಿಮಿಂಗಲದ ವಾಂತಿಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ಮಾಡಿ ಇವರಿಬ್ಬರನ್ನೂ ಬಂಧಿಸಿದ್ದಾರೆ. ಬಂಧಿತ ಈ ಇಬ್ಬರನ್ನೂ ವಿಚಾರಣೆಗೊಳಪಡಿಸಿದಾಗ, ಭಟ್ಕಳದ ಹಿರಮನೆ ಗಣಪತಿ, ಹುಬ್ಬಳ್ಳಿಯ ಪುಂಡಲೀಕ್ ಹಾಗೂ ಮಹೇಶ್ ಮತ್ತು ವಿಜಯಪುರ ಜಿಲ್ಲೆಯ ಶ್ರೀಧರ್ ಅವರೂ ಸಹ ಈ ದಂಧೆಯಲ್ಲಿ ಪಾಲುದಾರರು ಎಂದು ತಿಳಿದುಬಂದಿದೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಈ ನಾಲ್ವರನ್ನೂ ಸಹ ಬಂಧಿಸಿದ್ದಾರೆ. ಅಂದಹಾಗೆ ಬಹುತೇಕ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಈ ತಿಮಿಂಗಲದ ವಾಂತಿಯನ್ನು ಬಳಸಲಾಗುತ್ತದೆ. ಕಾನೂನು ಪ್ರಕಾರ ಇದರ ಸಾಗಾಟ, ಶೇಖರಣೆ ಮತ್ತು ಮಾರಾಟ ಅಪರಾಧವಾಗಿದ್ದು, ಇನ್ನೂ ಹೆಚ್ಚಿನ ಪ್ರಮಾಣದ ತಿಮಿಂಗಲದ ವಾಂತಿಯ ಶೇಖರಣೆ ಕುರಿತು ಅನುಮಾನಗಳಿದ್ದು, ಅದರ ಕುರಿತು ತನಿಖೆ ನಡೆಸಲಾಗುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.