Posts Slider

Karnataka Voice

Latest Kannada News

ಭಾರತೀಯ ಮಾಧ್ಯಮ ಸಂಸ್ಥೆಗಳ ಒಡೆಯರು ಯಾರು…?

1 min read
Spread the love

ಭಾರತೀಯ ಮಾಧ್ಯಮದ ಗತಿಶೀಲತೆ ಹೆಚ್ಚು. ಹಲವಾರು ಭಾಷೆಗಳು ಸಮೃದ್ಧವಾಗಿ ಬೆಳದಿರುವ ದೇಶದಲ್ಲಿ ಪ್ರತಿ ಭಾಷೆಯಲ್ಲೂ ಸುದ್ದಿ ಹಾಗೂ ಮನೋರಂಜನೆ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಆಧುನಿಕತೆಯ ಪರಿಣಾಮ, ಸರ್ಕಾರದ ನೀತಿ ನಿಯಮಗಳಲ್ಲಿ ಆದ ಬದಲಾವಣೆ ಮಾಧ್ಯಮದ ಬೆಳವಣಿಗೆ ಸಹಾಯಕಾರಿಯಾಗಿವೆ.

ಕೇಂದ್ರದ ಮಾಹಿತಿ ಮತ್ತು ಪ್ರಸಾರ ಮಂತ್ರಾಲಯದಲ್ಲಿ ಒಟ್ಟು 534 ಕ್ಕೂ ಹೆಚ್ಚು ಉಪಗ್ರಹ ಆಧಾರಿತ ಭಾರತೀಯ ಮಾಧ್ಯಮ ಪ್ರಸಾರ ಸಂಸ್ಥೆಗಳು ನೊಂದಣಿಯಾಗಿವೆ. ಈ ಸಂಸ್ಥೆಗಳ ಅಡಿಯಲ್ಲಿ ಹಲವು ಭಾಷೆಯಲ್ಲಿ, ಸುದ್ದಿ ಹಾಗೂ ಮನೋರಂಜನೆ ವಾಹಿನಿಗಳು ಬಿತ್ತರವಾಗುತ್ತಿವೆ. ಇದನ್ನು ಹೊರತು ಪಡಿಸಿ ದೇಶದಲ್ಲಿ ಒಟ್ಟು 1664ಕ್ಕೂ ಹೆಚ್ಚು ನೊಂದಾಯಿತ ಕೇಬಲ್ ಚಾನಲ್ ಗಳು ಕಾರ್ಯನಿರ್ವಹಿಸುತ್ತಿವೆ. ರಿಜಿಸ್ಟಾರ್ ಆಫ್ ನ್ಯೂಸ್ ಪೇಪರ್ ಇಂಡಿಯಾದ ಅಧಿಕೃತ ಮಾಹಿತಿಯಂತೆ ದೇಶದಲ್ಲಿ 1.20 ಲಕ್ಷಕ್ಕೂ ಹೆಚ್ಚು ದೈನಿಕ, ಸಪ್ತಾಹ, ಮಾಸ, ಪಾಕ್ಷಿಕ, ವಾರ್ಷಿಕ ಪ್ರಕಟಣೆಗಳು ನೊಂದಾಯಿಸಿಕೊಂಡಿವೆ‌.
ಸುಮಾರು 18 ಸಾವಿರ ಸುದ್ದಿ ಪತ್ರಿಕೆಗಳು ದೇಶದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರೊಂದಿಗೆ ನವ ಸಾಮಾಜಿಕ ಮಾಧ್ಯಮಗಳು ಸಹ ಸುದ್ದಿಯನ್ನು ಜನರಿಗೆ ‌ತಲುಪಿಸುವಲ್ಲಿ ತವಕವಾಗಿವೆ.

ಸುದ್ದಿ ಮಾಧ್ಯಮಗಳು ಅತಿ ಪ್ರಭಾವಶಾಲಿಯಾಗಿದ್ದು ಜನರ ಅಭಿಪ್ರಾಯ ಹಾಗೂ ಧೋರಣೆಗಳನ್ನು ಸಹ ಬದಲಾಯಿಸುವಷ್ಟು ಶಕ್ತವಾಗಿವೆ. ಸಹಜವಾಗಿ ಸುದ್ದಿ ಮಾಧ್ಯಮ ಸಂಸ್ಥೆಗಳ ಒಡೆತನ ಯಾರ‌ ಹಿಡಿತದಲ್ಲಿ ಇರುತ್ತದೆಯೇ, ಅವರು ಪ್ರಭಾವಶಾಲಿಗಳಾಗುತ್ತಾರೆ. ಮಾಧ್ಯಮ ನಿರ್ವಹಣೆ ವೆಚ್ಚದಾಯಕವಾಗಿರುವುದರಿಂದ ಹಣ ಇರುವ ಪ್ರಭಾವಶಾಲಿಗಳೇ ಸುದ್ದಿ ಮಾಧ್ಯಮಗಳ ಹಿಡಿತ ಸಾಧಿಸಿದ್ದಾರೆ. ಪ್ರಭಾವಶಾಲಿಗಳು ಪ್ರತಿನಿಧಿಸುವ ಅಥವಾ ಬೆಂಬಲಿಸುವ ರಾಜಕೀಯ ಪಕ್ಷಗಳ ನಿಲುವುಗಳನ್ನು ಈ ಮಾಧ್ಯಮಗಳು‌ ಪ್ರಚಾರ ಮಾಡುತ್ತವೆ.‌

ಪ್ರಸ್ತುತ ವಿದ್ಯಮಾನದಲ್ಲಿ ಸುದ್ದಿ ಮಾಧ್ಯಮಗಳ ಕುರಿತು “ಗೋದಿ ಮೀಡಿಯಾ” (Godi Media) ಎನ್ನುವ ನವಪದ (Neologism) ಬಳಕೆಗೆ ಬಂದಿದೆ. ಇದರ ಅರ್ಥ ಸರ್ಕಾರ ಅಥವಾ ಆಳ್ವಿಕೆ ನೆಡೆಸುವ ಪಕ್ಷದ ತೊಡೆಯ ಮೇಲೆ ಕುಳಿತು ಆಡುವ ಮಾಧ್ಯಮಗಳು ಎಂದರ್ಥ. ಈ ರೀತಿಯ ಮಾಧ್ಯಮ ಸಂಸ್ಥೆಗಳು, ಸರ್ಕಾರ ಅಥವಾ ಆಡಳಿತಾರೂಢ ಪಕ್ಷದ ನೀತಿ ನಿಲುವುಗಳನ್ನು ವಿಮರ್ಶೆ ಹಾಗೂ ತುಲನಾತ್ಮಕ ದೃಷ್ಟಿಯಿಂದ ನೋಡದೆ, ಅವುಗಳಿಗೆ ಸಹಕಾರಿಯಾಗುವಂತೆ ಸುದ್ದಿಗಳನ್ನು ಬಿತ್ತರಿಸುತ್ತವೆ. ಹೆಚ್ಚಾಗಿ ಬಲಪಂಥೀಯ (Right wing) ನಿಲುವುಗಳನ್ನು ಸಮರ್ಥಿಸುವ ಪಕ್ಷ, ಸಂಘಟನೆ ಹಾಗೂ ನಾಯಕಪೂಜೆಯನ್ನು(Hero worship) ಬೆಂಬಲಿಸುತ್ತವೆ. ಸರ್ಕಾರ ಅಥವಾ ಆಡಳಿತಾರೂಢ ನಿಲುವುಗಳನ್ನು ವಿರೋಧಿಸುವ ಗುಂಪು, ಪಕ್ಷ ಹಾಗೂ ಸಂಘಟನೆಗಳನ್ನು ಈ ಮಾಧ್ಯಮ ಸಂಸ್ಥೆಗಳು ರಾಕ್ಷಸೀಕರಣ ಮಾಡುತ್ತಿವೆ(Demonised). ವಿರೋಧವನ್ನು ದೇಶದ್ರೋಹ ಎಂದು ಬಿಂಬಿಸುತ್ತವೆ.

ಈ ಸಂದರ್ಭದಲ್ಲಿ ದೇಶದ ಪ್ರಮುಖ ಸುದ್ದಿ ಮಾಧ್ಯಮ ಸಂಸ್ಥೆಗಳ ಒಡೆಯರು ಯಾರು ಎಂಬ ಕಿರು ಪರಿಚಯ ಇಲ್ಲಿದೆ.

ನೆಟ್ ವರ್ಕ್ -18 (Network -18)

ನ್ಯೂಸ್ ನೆಟ್ ವರ್ಕ್ -18 ಹೆಸರಿನ ಈ ಮಾಧ್ಯಮ ಸಂಸ್ಥೆಯ ಒಡೆಯ ಮುಕೇಶ್ ಅಂಬಾನಿ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮಾಲೀಕ. ಭಾರತದ ಎಲ್ಲಾ ಭಾಷೆಗಳಲ್ಲಿ‌ 16 ಸುದ್ದಿ ವಾಹಿನಿಗಳು, 21 ಮನೋರಂಜನೆ ವಾಹಿನಿಗಳು,
ಸಿನಿಮಾ ನಿರ್ಮಾಣ, ಸೇರಿದಂತೆ ಡಿಜಿಟಲ್ ವೆಬ್ ಸೈಟ್ ಗಳು ಈ ಸಂಸ್ಥೆ ಅಡಿ ಕೆಲಸ ನಿರ್ವಹಿಸುತ್ತಿವೆ.

ಜೀ ಮೀಡಿಯಾ (Zee media)

ಎಸ್ಸೆಲ್ ಗ್ರೂಪ್ ಒಡತನದಡಿ ಇರುವ ಜೀ ಮೀಡಿಯಾ ಸಂಸ್ಥೆಯ ಒಡೆಯ ಸುಭಾಷ್ ಚಂದ್ರ. ಭಾರತೀಯ ಜನತಾ ಪಾರ್ಟಿಯ ಬೆಂಬಲದಿಂದ ರಾಜ್ಯಸಭಾ ಸಂಸದರಾಗಿ ಆಯ್ಕೆಯಾಗಿದ್ದಾರೆ. ಭಾರತದ 8 ಪ್ರಮುಖ ಭಾಷೆಗಳು ಸೇರಿದಂತೆ 14 ಸುದ್ದಿ ವಾಹಿನಿಗಳು ಸಂಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿವೆ.

ದಿ ಟೈಮ್ಸ್ ಗ್ರೂಪ್ (The times group)

ಬೆನೆಟ್ ಕೋಲಮನ್ ಕಂಪನಿ ಲಿಮಿಟೆಡ್ ಸುದ್ದಿ ಸಂಸ್ಥೆ, ದಿ ಟೈಮ್ಸ್ ಗ್ರೂಪ್ ಹೆಸರಿನಡಿ ಪ್ರಸಿದ್ಧಿ ಹೊಂದಿದೆ. ಈ ಕಂಪನಿ ಶಾಹು ಜೈನ್ ಕುಟುಂಬದ, ಮಹಿಳಾ ಉದ್ದಮಿ ಇಂದು ಜೈನ್ ಒಡೆತನದಲ್ಲಿದೆ. ದಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಸೇರಿದಂತೆ 3 ಸುದ್ದಿ ವಾಹಿನಿಗಳು ಇಂಗ್ಲಿಷ್ ಭಾಷೆಯಲ್ಲಿ ಪ್ರಸಾರವಾಗುತ್ತಿವೆ. ರೆಡಿಯೋ ಮಿರ್ಚಿ ಸಹ ಟೈಮ್ಸ್ ಗ್ರೂಪ್ ಒಡೆತನಕ್ಕೆ ಸೇರಿದೆ.

ಟಿವಿ ಟುಡೇ (TV Today)

ಟಿವಿ ಟುಡೇ ನೆಟ್ ವರ್ಕ್ ಹಿಂದಿ‌ ಹಾಗೂ ಇಂಗ್ಲೀಷ್ ನಲ್ಲಿ ಪ್ರಸಾರವಾಗುವ ಸುದ್ದಿ ವಾಹಿನಿಗಳನ್ನು ಹೊಂದಿದೆ. ಆಜ್ ತಕ್ ಹಿಂದಿ ಭಾಷೆಯಲ್ಲಿ ಪ್ರಸಾರವಾದರೆ, ಇಂಡಿಯಾ ಟುಡೇ ಇಂಗ್ಲೀಷ್ ನಲ್ಲಿ ಪ್ರಸಾರವಾಗುತ್ತದೆ. ಅರುಣ್ ಪುರಿ (ಆರೂನ್ ಪ್ಯೂರೈ) ಇದರ ಮಾಲಿಕರಾಗಿದ್ದಾರೆ.

ಎನ್.ಡಿ.ಟಿ.ವಿ ಇಂಡಿಯಾ (NDTV India)

ನ್ಯೂ ದೆಹಲಿ ಟೆಲಿವಿಷನ್ ಲಿಮಿಟೆಡ್ ಒಡತನದಲ್ಲಿರುವ ಎನ್.ಡಿ.ಟಿ.ವಿ.ಇಂಡಿಯಾ
ರಾಧಿಕಾ ರಾಯ್ , ಪ್ರನ್ನಾಯ್ ರಾಯ್ ಹಾಗೂ ಅಭಯ್ ಓಸ್ವಾಲ್ ಪಾಲುದಾರಿಕೆಯಲ್ಲಿದೆ. ರಾಧಿಕಾ ರಾಯ್ ಸಿಪಿಐ ರಾಜ್ಯ ಸಭಾ ಸಂಸದೆ ಬೃಂದಾ ಕಾರಟ್ ಅವರ‌ ಸಹೋದರಿ. ಅಭಯ್ ಓಸ್ವಾಲ್ ಕ್ರಾಂಗ್ರೆಸ್ ಪಕ್ಷದ ಮಾಜಿ ಸಂಸದ ಹಾಗೂ ಉದ್ಯಮಿ ನವೀನ್ ಜಿಂದಾಲ್ ಅವರ ಅಳಿಯ. ಹಿಂದಿಯಲ್ಲಿ ಎನ್.ಡಿ.ಟಿ.ವಿ.ಇಂಡಿಯಾ ಹಾಗೂ ಇಂಗ್ಲೀಷ್ ನಲ್ಲಿ ಎನ್.ಡಿ.ಟಿ.ವಿ. 24*7 ಸುದ್ದಿವಾಹಿನಿಗಳು ಬಿತ್ತರವಾಗುತ್ತಿವೆ.

ರಿಪಬ್ಲಿಕ್ ಟಿವಿ (Republic TV)

ಅತಿ ಹೆಚ್ಚು ವೀಕ್ಷಕ ಬಳಗ ಹೊಂದಿರುವ ಸುದ್ದಿವಾಹಿನಿ ರಿಪಬ್ಲಿಕ್ ಟಿವಿ. ಇದರ ಮಾಲೀಕರು ಅರ್ನಬ್ ಗೋಸ್ವಾಮಿ‌ ಹಾಗೂ ಬಿ.ಜೆ.ಪಿ.ಯ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್. ಇಂಗ್ಲೀಷ್ ನಲ್ಲಿ ರಿಪಬ್ಲಿಕ್ ಟಿವಿ ಹಾಗೂ‌ ಹಿಂದಿಯಲ್ಲಿ ರಿಪಬ್ಲಿಕ್ ಭಾರತ್ ಸುದ್ದಿವಾಹಿನಿ ಸಂಸ್ಥೆ ಅಡಿ ಪ್ರಸಾರವಾಗುತ್ತಿವೆ.

ಇಂಡಿಯಾ ಟಿವಿ(India TV)

ಹಿಂದಿಯಲ್ಲಿ ಪ್ರಸಾರವಾಗುವ ಇಂಡಿಯಾ ಟಿವಿ ಮಾಲಿಕರು ರಜತ್ ಶರ್ಮಾ ಹಾಗೂ ಅವರ ಪತ್ನಿ ರಿತು ಧವನ್. ರಜತ್ ಶರ್ಮ ಬಿ.ಜೆ.ಪಿ. ಪಕ್ಷದ ವಿದ್ಯಾರ್ಥಿ ಸಂಘಟನೆ ಎ.ಬಿ.ವಿ.ಪಿಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದರು.

ನ್ಯೂಸ್ 24 (NEWS 24)

ಬಿಎಜಿ ಮಿಡಿಯಾ ಆ್ಯಂಡ್ ಫಿಲ್ಮ್ಸ್ ಲಿಮಿಟೆಡ್ ಒಡೆತನದಲ್ಲಿರುವ ಹಿಂದಿ ಸುದ್ದಿ ವಾಹಿನಿ, ನ್ಯೂಸ್ 24. ಇದರ ಮಾಲಿಕರು ಅನುರಾಧ ಪ್ರಸಾದ್. ಆಡಳಿತಾರೂಢ ಬಿ.ಜೆ.ಪಿ ಪಕ್ಷದಲ್ಲಿ ಕೇಂದ್ರ ಕಾನೂನು ಮಂತ್ರಿಯಾಗಿರುವ ರವಿಶಂಕರ್ ಪ್ರಸಾದ್ ಅವರ ಸಹೋದರಿ. ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ರಾಜೀವ್ ಶುಕ್ಲಾ ಇವರ ಪತಿ.

ಸಹರಾ ಇಂಡಿಯಾ ಪರಿವಾರ್ (Sahara India Parivar)

ಸುಭ್ರತ್ ರಾಯ್ ಸ್ಥಾಪಿಸಿದ ಸಹರಾ ಇಂಡಿಯಾ ಪರಿವಾರ ಅತಿ ದೊಡ್ಡ ಬಿಜನಸ್ ಕಂಪನಿ. ಸಹರಾ ಇಂಡಿಯಾ ಪರಿವಾರ್ ನ ಮಿಡಿಯಾ ಗ್ರೂಪ್, ಸಮಯ್ ಎನ್ನುವ ಹಿಂದಿ ಸುದ್ದಿ ವಾಹಿನಿಯನ್ನು ಹೊಂದಿದೆ. ಇದರೊಂದಿಗೆ 36 ಸುದ್ದಿ ವಾಹಿನಿಗಳು ವಿವಿಧ ಭಾಷೆ ಹಾಗೂ ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. ರಾಷ್ಟ್ರೀಯ ಸಹಾರ ಎನ್ನುವ ಹಿಂದಿ ಪತ್ರಿಕೆ, ರೋಜಾನಾ ಸಹಾರ ಎನ್ನುವ ಉರ್ದು ಪತ್ರಿಕೆ ಸಹ ಇವರ ಒಡತನದಲ್ಲಿದೆ.

ಇಂಡಿಯಾ ನ್ಯೂಸ್(India News)

ಐಟಿವಿ ಮಿಡಿಯಾ ಗ್ರೂಪ್ ಒಡೆತನದಲ್ಲಿ‌ರುವ ಇಂಡಿಯಾ ನ್ಯೂಸ್ ಸುದ್ದಿ ಸಂಸ್ಥೆ ಮಾಲೀಕ ಕಾರ್ತಿಕೇಯ ಶರ್ಮ. ನ್ಯೂಸ್ ಎಕ್ಸ್ ಸೇರಿದಂತೆ ಹಲವು ಸುದ್ದಿವಾಹಿನಿಗಳು ಈ ಸಂಸ್ಥೆ ಅಡಿ ಕಾರ್ಯ ನಿರ್ವಹಿಸುತ್ತಿವೆ. ಕಾರ್ತಿಕೇಯ ಶರ್ಮ ಕಾಂಗ್ರೇಸ್ ನಾಯಕ ವಿನೋದ್ ಶರ್ಮಾ ಅವರ ಮಗನಾಗಿದ್ದಾರೆ.

ಎಬಿಪಿ ನ್ಯೂಸ್ (ABP News)

ಭಾರತದ ಆನಂದ ಬಜಾರ್ ಪತ್ರಿಕಾ ಗ್ರೂಪ್, ವಿದೇಶಿ ಮೂಲದ ಸ್ಟಾರ್ ನ್ಯೂಸ್ ಜೊತೆಗೂಡಿ ಮೀಡಿಯಾ ಕನೆಕ್ಟ್ ಆ್ಯಂಡ್ ಕಮ್ಯೂನಿಕೇಷನ್ ಸರ್ವೀಸ್ ಪ್ರವ್ಹೇಟ್ ಲಿಮಿಟೆಡ್ ಸಂಸ್ಥೆ ಹುಟ್ಟಿಹಾಕಿತು. ಇದರ ಮಾಲಿಕರು ಸುರೇಶ್ ಚಂದ್ರ ಮಜುಂದಾರ್. ಸಂಸ್ಥೆ ಇಂಗ್ಲೀಷ್ ಹಾಗೂ ಹಿಂದಿ ಸೇರಿದಂತೆ 5 ಸುದ್ದಿ ವಾಹಿನಿ, ಬೆಂಗಾಳಿ ಹಾಗೂ ಇಂಗ್ಲೀಷ್ ನಲ್ಲಿ ದಿನಪತ್ರಿಕೆಗಳನ್ನು ಹೊರಡಿಸುತ್ತದೆ.

ಸನ್ ಗ್ರೂಪ್ ನೆಟ್ ವರ್ಕ್ (Sun Group Network)

ದಕ್ಷಿಣ ಭಾರತದ ಅತಿ ದೊಡ್ಡ ಮಾಧ್ಯಮ ಸಂಸ್ಥೆ ಸನ್ ಗ್ರೂಪ್. ಇದರ ಮಾಲಿಕ ಕಲಾನಿಥಿ ಮಾರನ್. ಸನ್ ಗ್ರೂಪ್ ನೆಟ್ ವರ್ಕ್ ನಾಲ್ಕು ಭಾಷೆಯಲ್ಲಿ 32 ಟಿವಿ ವಾಹಿನಿಗಳು, 67 ರೇಡಿಯೋ ವಾಹಿನಿಗಳನ್ನು ಹೊಂದಿದೆ. 3 ದಿನಪತ್ರಿಕೆ ಹೊರಡಿಸುತ್ತದೆ. ಕಲಾನಿಥಿ ಮಾರನ್ ಅವರ ಸಹೋದರ ದಯಾನಿಧಿ ಮಾರನ್ ಮಾಜಿ ಕೇಂದ್ರ ಸರ್ಕಾರದ ಮಂತ್ರಿ ಹಾಗೂ ಡಿ.ಎಂ.ಕೆ. ಪಕ್ಷದ ನಾಯಕ.

ಏಷಿಯಾ ನೆಟ್ ನ್ಯೂಸ್ (Asianet News)

ಕೇರಳದ ತಿರುವನಂತಪುರಂನಲ್ಲಿ ಕೇಂದ್ರ ಕಚೇರಿ ಹೊಂದಿರುವ ಏಷಿಯಾ ನೆಟ್ ನ್ಯೂಸ್ ಅಥವಾ ಏಷಿಯಾ ನ್ಯೂಸ್ ನೆಟ್ ವರ್ಕ್ ಬಿ.ಜೆ.ಪಿ.ಯ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಮಾಲಿಕತ್ವದಲ್ಲಿದೆ. ಕನ್ನಡ ಹಾಗೂ ಮಲೆಯಾಳಂ ನಲ್ಲಿ ಸುದ್ದಿ ವಾಹಿನಿಗಳು, ಕನ್ನಡದಲ್ಲಿ ಕನ್ನಡ ಪ್ರಭ ದಿನಪತ್ರಿಕೆ, ಇಂಗ್ಲೀಷ್ , ತೆಲುಗು, ತಮಿಳ್, ಹಿಂದಿ ಹಾಗೂ ಬೆಂಗಾಲಿಯಲ್ಲಿ ನ್ಯೂಸ್ ಪೋರ್ಟಲ್ ಗಳನ್ನು ಸಂಸ್ಥೆ ನಿರ್ವಹಿಸುತ್ತಿದೆ.

ಟಿವಿ 9 (TV 9)

ಹೈದರಾಬಾದ್ ಮೂಲದ ಅಸೋಸಿಯೇಟೆಡ್ ಬ್ರಾಡ್ ಕಾಸ್ಟಿಂಗ್ ಕಂಪನಿ ಪ್ರವ್ಹೇಟ್ ಲಿಮಿಟೆಡ್ ಮಾಲಿಕತ್ವದಲ್ಲಿ ಟಿ.ವಿ.9 ಸುದ್ದಿವಾಹಿನಿ ಕರ್ತವ್ಯ ನಿರ್ವಹಿಸುತ್ತಿದೆ. ತೆಲುಗು, ಕನ್ನಡ, ಮರಾಠಿ , ಗುಜರಾತಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸುದ್ದಿವಾಹಿನಿಗಳು ಬಿತ್ತರವಾಗುತ್ತಿವೆ.

ವಿ.ಆರ್.ಎಲ್.ಮಿಡಿಯಾ ಲಿಮಿಟೆಡ್ ನ ಕನ್ನಡದ ದ್ವಿಜಯ ನ್ಯೂಸ್ ಹಾಗೂ ವಿಜಯವಾಣಿ ದಿನ ಪತ್ರಿಕೆ ವಿಜಯ ಸಂಕೇಶ್ವರ ಒಡೆತನದಲ್ಲಿವೆ. ಬಿಜೆಪಿ ಪಕ್ಷದಿಂದ ವಿಜಯ ಸಂಕೇಶ್ವರ ಲೋಕಸಭಾ ಸದಸ್ಯರಾಗಿದ್ದರು. ಕನ್ನಡದ ಕಸ್ತೂರಿ ಸುದ್ದಿ ವಾಹಿನಿ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ ಒಡೆತನದಲ್ಲಿದೆ.

ಇದರ ಜೊತೆಯಲ್ಲಿ ಹಲವು ರಾಜ್ಯಗಳಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಅಥವಾ ಬೆಂಬಲಿಗರು ಮಾಧ್ಯಮ ಸಂಸ್ಥೆಗಳು ಒಡೆತನ ಹೊಂದಿದ್ದಾರೆ. ರಾಜಕೀಯ ಪಕ್ಷಗಳು ಸಹ ದಿನ ಪತ್ರಕೆಗಳನ್ನು ನಡೆಸುತ್ತಿವೆ. ಕಾಂಗ್ರೆಸ್ ಪಕ್ಷದ ನ್ಯಾಷನಲ್ ಹೆರಾಲ್ಡ್ , ಶಿವಸೇನಾ ಪಕ್ಷದ ಸಾಮ್ನಾ ಪತ್ರಿಕೆ ಇವಕ್ಕೆ ಉದಾಹರಣೆಯಾಗಿವೆ.

ಭಾರತದ ಮಾಧ್ಯಮಗಳು ಎಡಪಂಥೀಯ ‌ಹಾಗೂ ಬಲಪಂಥೀಯ ವಾದಗಳಲ್ಲಿ ಹರಿದು ಹಂಚಿಹೋಗಿವೆ. ಇವೆಲ್ಲಕ್ಕೂ ಮಿಗಿಲಾಗಿ ರಾಜಕೀಯ ಮುಖಂಡರು ಅವರ ವೈಯಕ್ತಿಕ ಲಾಭಕ್ಕಾಗಿ ಸುದ್ದಿ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ವಸ್ತುನಿಷ್ಠ, ಮೌಲ್ಯಾಧಾರಿತ ಸುದ್ದಿಗಳು ಮರೆಯಾಗಿ ಪ್ರಾಯೋಜಿಸ ಸುದ್ದಿಗಳು ಹೆಚ್ಚಾಗಿವೆ. ಸುಳ್ಳು ಸುದ್ದಿ, ಖಾಸಿಗಾಗಿ ಸುದ್ದಿ ಹೆಚ್ಚಾಗುತ್ತಿವೆ. ಜನರು ವಿವೇಚನೆಯಿಂದ ಸುದ್ದಿಗಳನ್ನು ಗ್ರಹಿಸಬೇಕಿದೆ.

ಲೇಖನ: ವೇಣುಗೋಪಾಲ ಪಿ.ಎಂ.


Spread the love

Leave a Reply

Your email address will not be published. Required fields are marked *