ಹುಬ್ಬಳ್ಳಿಯಲ್ಲಿ “353” ಕೇಸ್: ಕಿರಣಕುಮಾರ ಬಳ್ಳಾರಿ, ಅಕ್ಷಯ ಬಂಧನ…!
1 min readಹುಬ್ಬಳ್ಳಿ: ನಗರದ ಮಹಾನಗರ ಪಾಲಿಕೆಯ ಮುಂದಿನ ಬಿಆರ್ ಟಿಎಸ್ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಗಳಿಗೆ ತೊಂದರೆ ಕೊಟ್ಟು ಹಲ್ಲೆ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದ ಇಬ್ಬರನ್ನ ಹೆಡಮುರಿಗೆ ಕಟ್ಟಿ ಜೈಲಿಗೆ ಕಳಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಧಾರವಾಡ ಕಡೆಯಿಂದ ಬರುತ್ತಿದ್ದ ಅಕ್ಷಯ ಮತ್ತು ಕಿರಣಕುಮಾರ ಬಳ್ಳಾರಿ ಎಂಬುವವರು, ಟಿಕೆಟ್ ಬೇರೆ ಕಡೆ ತೆಗೆದುಕೊಂಡು ಹುಬ್ಬಳ್ಳಿ ಮಹಾನಗರ ಪಾಲಿಕೆ ಮುಂದಿನ ಬಸ್ ನಿಲ್ದಾಣದಲ್ಲಿ ಇಳಿದಿದ್ದಾರೆ. ಆಗ, ಟಿಕೆಟ್ ಸ್ಕ್ಯಾನ್ ಆಗದೇ ಇದ್ದ ಪರಿಣಾಮ, ಕೌಂಟರಿನಲ್ಲಿದ್ದ ಮಹಿಳೆಯೊಂದಿಗೆ ಜಗಳಕ್ಕೆ ಮುಂದಾಗಿ, ಗಲಾಟೆ ಮಾಡಿಕೊಂಡಿದ್ದಾರೆ.
ಅಷ್ಟೇ ಅಲ್ಲ, ಮಹಿಳೆ ಕುಳಿತುಕೊಳ್ಳುತ್ತಿದ್ದ ಖುರ್ಚಿಯನ್ನ ಮಹಾನಗರ ಪಾಲಿಕೆ ಎದುರಿಗೆ ಇರುವ ಸಂಘಟನೆಯೊಂದರ ಕಚೇರಿಗೆ ತೆಗೆದುಕೊಂಡಿದ್ದಾರೆ. ಇದೇಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಿಆರ್ ಟಿಎಸ್ ಅಧಿಕಾರಿಗಳು ದೂರು ದಾಖಲು ಮಾಡುವಂತೆ ಹೇಳಿದ್ದರಿಂದ, ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನ ಬಂಧನ ಮಾಡಿ, ನ್ಯಾಯಾಂಗ ಬಂಧನಕ್ಕೆ ಕೊಡಲಾಗಿದೆ.
ಕಿರಣಕುಮಾರ ಬಳ್ಳಾರಿ ಹಲವು ಸಂಘಟನೆಗಳ ಜೊತೆ ಕಾಣಿಸಿಕೊಂಡಿದ್ದ. ಹಾಗಾಗಿಯೇ, ಇಂತಹ ಆಟಾಟೋಪಗಳನ್ನ ಮಾಡುತ್ತಿದ್ದನೆಂದು ಹೇಳಲಾಗಿದ್ದು, ಕಸಬಾಪೇಟೆ ಪೊಲೀಸ್ ಠಾಣೆಯ ಓರ್ವ ಪೊಲೀಸ್, ಉಪನಗರ ಠಾಣೆಗೆ ಬಂದು ‘ಆತನಿಗೇನು ಮಾಡಬೇಡಿ’ ಎಂದು ಹೇಳಿ ಹೋಗಿದ್ದು ಕೂಡಾ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಷ್ಟೇ ಸತ್ಯವಾಗಿದೆ.