“ಹು-ಧಾ ಖಾಸಗಿ ಆಸ್ಪತ್ರೆಗಳ ಅಮಾನವೀಯ ಕಹಾನಿ” 1ಲಕ್ಷ ಖರ್ಚಾಗಬಹುದು ಎಂದವರೇ, 11 ಲಕ್ಷ ರೂ. ಬಿಲ್ ಮಾಡಿದ ಕೀಚಕರು…!!!

ಕರ್ನಾಟಕವಾಯ್ಸ್.ಕಾಂ ಬಡವರ ಮತ್ತು ಮಧ್ಯಮ ವರ್ಗದ ಜನರ ನೋವಿಗೆ ಸ್ಪಂಧಿಸುವ ಉದ್ದೇಶದಿಂದ ಖಾಸಗಿ ಆಸ್ಪತ್ರೆಗಳಲ್ಲಿನ ಪರಿಸ್ಥಿತಿಯನ್ನ ಹೊರ ಹಾಕುತ್ತಿದೆ. ಇದಕ್ಕೆ ಸಂಬಂಧಿಸಿದ ಯಾವುದೇ ಸಲಹೆ ಸೂಚನೆ ಇದ್ದರೇ ನಮಗೆ ತಿಳಿಸಿ..
ಹುಬ್ಬಳ್ಳಿ: ತಲೆಗೆ ಆದ ಗಾಯವನ್ನ ಗುಣಪಡಿಸಲು ಒಂದು ಲಕ್ಷ ರೂಪಾಯಿ ವೆಚ್ಚವಾಗತ್ತೆ ಎಂದು ಹೇಳಿದ ಮಹಾನ್ ಖಾಸಗಿ ಆಸ್ಪತ್ರೆಯೊಂದು ಬರೋಬ್ಬರಿ ಹನ್ನೊಂದು ಲಕ್ಷ ರೂಪಾಯಿ ಬಿಲ್ ಮಾಡಿ, ಕೊನೆಗೆ ಎಂಟು ಲಕ್ಷ ರೂಪಾಯಿ ಪಡೆದು ಕಳಿಸಿರುವ ಘಟನೆಯೊಂದು ಎರಡು ದಿನಗಳ ಹಿಂದಷ್ಟೇ ಸಂಭವಿಸಿದೆ.
ವೈಯಕ್ತಿಕವಾಗಿ ಜೀವನದಲ್ಲಿ ಗೊಂದಲವನ್ನ ಉಂಟು ಮಾಡಿಕೊಂಡು ಆಸ್ಪತ್ರೆ ನಡೆಸುತ್ತಿರುವ ಫೇಮಸ್ ಡಾಕ್ಟರ್ ಈ ಮೂಲಕ ಮತ್ತಷ್ಟು ಅಮಾನವೀಯತೆ ಮೆರೆದಿದ್ದಾರೆ.
ಹುಬ್ಬಳ್ಳಿಯ ಹಿರಿಯ ವ್ಯಕ್ತಿಯೋರ್ವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ತಂದಾಗ, ‘ಒಂದು ಲಕ್ಷ ರೂಪಾಯಿ ಖರ್ಚಾಗತ್ತೆ’ ಎಂದು ಹೇಳಿದ್ದರು. ಆದರೆ, ಬಿಲ್ ಹನ್ನೊಂದು ಲಕ್ಷ ಮಾಡಿದಾಗ, ಅಡ್ಮೀಟ್ ಮಾಡಿದವರು ಹೌಹಾರಿ, ಅವರಿವರ ಬಳಿ ಕಾಲು ಹಿಡಿಯಲು ಮುಂದಾಗುವ ಸ್ಥಿತಿ ನಿರ್ಮಾಣವಾಗಿತ್ತು.
ಇದಾದ ಮೇಲೆ ಹಾಗೂ ಹೀಗೂ ಮಾಡಿ ಎಂಟು ಲಕ್ಷ ರೂಪಾಯಿ ಹಣಕ್ಕೆ ಹೊಂದಾಣಿಕೆ ಮಾಡಿಕೊಂಡ ಖಾಸಗಿ ಆಸ್ಪತ್ರೆ, ರೋಗಿಯನ್ನ ಗುಣಮುಖ ಮಾಡದೇ ಕಳಿಸಿಕೊಟ್ಟಿತ್ತು. ಕುಟುಂಬದ ಸದಸ್ಯರು ಕಿಮ್ಸಗೆ ಆ ರೋಗಿಯನ್ನ ತೋರಿಸಿದ ಎರಡು ದಿನದಲ್ಲಿ ಸಾವಿಗೀಡಾದರು.
ಇಂತಹ ಅಮಾನವೀಯ ವ್ಯವಸ್ಥೆ ಹುಬ್ಬಳ್ಳಿಯ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮನೆ ಮಾಡಿದೆ. ಒಳಗೆ ಬರುವವರೆಗೆ ಒಂದು ಡ್ರಾಮಾ, ಅಡ್ಮೀಟ್ ಆಗಿ ಅಡ್ವಾನ್ಸ್ ಕೊಟ್ಟ ನಂತರದ ಸೋಗು ಬೇರೆಯಾಗತ್ತೆ.
ಜನಸಾಮಾನ್ಯರು ಇದನ್ನ ಅರ್ಥ ಮಾಡಿಕೊಂಡು ನಮ್ಮನ್ನಾಳುವ ವ್ಯವಸ್ಥೆಯನ್ನ ಪ್ರಶ್ನಿಸಬೇಕಿದೆ. ಇಲ್ಲದೇ ಹೋದರೇ, ಸರಕಾರದ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಇರಲ್ಲ, ವ್ಯವಸ್ಥೆ ಇರೋವಲ್ಲಿ ಹಣದ ಥೈಲಿ ಬಡವರ ಬಳಿ ಇರಲ್ಲ.