ಸಾಹೇಬ್ರ ಹೆಸರಲ್ಲಿ 2ವರ್ಷದ್ದ ಕಮೀಟಮೆಂಟ್: ಕೊಟ್ಟ ಹಣ ‘ಹೊಳೆ’ ಪಾಲಾಗುವ ಭೀತಿಯಲ್ಲಿ ಪೊಲೀಸ್ ಅಧಿಕಾರಿ..!

ಹುಬ್ಬಳ್ಳಿ: ಸಾಹೇಬ್ರ ಹೆಸರು ಹೇಳಿ ಅಧಿಕಾರಿಗಳ ವರ್ಗಾವಣೆ ಧಂದೆಗೆ ಆಡಳಿತಾರೂಢ ಪಕ್ಷದ ಯುವ ನಾಯಕರುಗಳು ಕೈ ಹಾಕಿ ಕೈ ಕೈ ಹಿಸುಕಿಕೊಳ್ಳುತ್ತಿದ್ದಾರೆ ಎಂಬ ಮಾತು ಈಗ ಬಿಜೆಪಿ ಪಕ್ಷದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಎರಡು ವರ್ಷಗಳ ಕಾಲ ಯಾವುದೇ ರೀತಿಯ ತೊಂದರೆ ಅಥವಾ ವರ್ಗಾವಣೆ ಇಲ್ಲದೆ ಪೋಸ್ಟಿಂಗ್ ಮಾಡಿಸುವುದಾಗಿ ಹೇಳಿ ಲಕ್ಷ ಲಕ್ಷ ರೂ. ಗಳನ್ನು ತಿಂದು ತೇಗಿ ಹುಬ್ಬಳ್ಳಿಯ ಆಯಕಟ್ಟಿನ ಪೊಲೀಸ್ ಠಾಣೆಗೆ ಅಧಿಕಾರಿಯೋರ್ವರಿಗೆ ಪೋಸ್ಟಿಂಗ್ ಕೊಡಿಸಿದ್ದ ನಾಯಕರುಗಳು, ಒಂದು ವರ್ಷ ಗತಿಸುವ ಮುನ್ನವೇ ಮತ್ತೆ ಆ ಜಾಗೆಗೆ ಬೇರೆ ಅಧಿಕಾರಿಯನ್ನ ತರಲು ಪ್ರಯತ್ನ ನಡೆಸಿದ್ದೇ ವರ್ಗಾವಣೆ ದಂಧೆ ಬಯಲಿಗೆ ಬರಲು ಕಾರಣ ಎಂದು ಹೇಳಲಾಗಿದೆ.
ಈ ವಿಷಯ ಗೊತ್ತಾದ ಕೂಡಲೇ ಆ ನಾಯಕರುಗಳು ಉಲ್ಲೇಖಿಸಿದ್ದ ಇಬ್ಬರು ಉನ್ನತ ನಾಯಕರುಗಳ ಬಳಿ ಧಾವಿಸಿದ ಪೊಲೀಸ್ ಅಧಿಕಾರಿ “ಸಾಹೇಬ್ರೆ ನಿಮ್ಮ ಹೆಸರು ಹೇಳಿ ಎರಡು ವರ್ಷ ವರ್ಗಾವಣೆ ಮಾಡಿಸಲ್ಲ ಎಂದು ಹೇಳಿ ನಂಬಿಸಿ ಲಕ್ಷಗಟ್ಟಲೆ ಹಣ ಪಡೆದಿದ್ದಾರೆ, ಈಗ ನೋಡಿದ್ರೆ ನನ್ನ ವರ್ಗಾವಣೆಗೆ ಪ್ರಯತ್ನ ನಡೆದಿದೆಯಂತೆ, ಇದು ಅನ್ಯಾಯ ಸರ್” ಎಂದಿದ್ದಾರೆ.
ಆಧಿಕಾರಿಯ ನೋವಿನ ಮಾತುಗಳನ್ನು ಕೇಳಿ ತಬ್ಬಿಬ್ಬಾಗಿರುವ ನಾಯಕರುಗಳು ಭ್ರಷ್ಟಾಚಾರ ಮುಕ್ತ ಆಡಳಿತದ ಘೋಷಣೆ ನೀಡಿರುವ ಪ್ರಧಾನಿ ಮೋದಿ ಅವರ ಪಕ್ಷದ ನಾಯಕರುಗಳು ವರ್ಗಾವಣೆ ದಂಧೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ನಂಬಲಾಗದ ಹಾಗೇ ವರ್ತಿಸಿ, ಅವರೂ ಕೂಡ ಕೈ ಕೈ ಹಿಸುಕಿಕೊಂಡಿದ್ದಾರಂತೆ. ಉಗಳಲೂ ಆಗದೆ ನುಂಗಲು ಆಗದೆ ವಿಷಯ ಕೇಳಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗಿದೆ.
ಆ ಅಧಿಕಾರಿ ಮಾತ್ರ ಇನ್ನೂ ತನ್ನ ಮುಂದುವರಿಕೆಯ ಬಗ್ಗೆ ಖಚಿತತೆ ಇಲ್ಲದೆ, ವಿಲ ವಿಲ ತಳಮಳಿಸುತ್ತಿದ್ದಾರೆ ಎನ್ನಲಾಗಿದೆ. ತಾನು ಕೊಟ್ಟಿರುವ ಹಣ ‘ಹೊಳೆ’ ಪಾಲು ಆಗಲು ಬಿಡುವುದಿಲ್ಲ ಎಂದೂ ಹೇಳುತ್ತಿದ್ದಾರಂತೆ. ವರ್ಗಾವಣೆ ದಂಧೆಗೆ ಕೈ ಹಾಕಿ ಭಾರಿ ಸುದ್ದಿಗೆ ಗ್ರಾಸವಾಗಿರುವ ನಾಯಕರುಗಳು ಯಾರು ಎಂಬುದು ಕೆಲವೇ ದಿನಗಳಲ್ಲಿ ತಾನೇ ಬಹಿರಂಗ ಗೊಳ್ಳಲಿದೆ ಎಂಬ ಮಾತೂ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ.