ವಿದೇಶಗಳಿಗಿಂತ ಭಾರತ ಕೊರೋನಾ ತಡೆಗಟ್ಟುವಲ್ಲಿ ಸಫಲ: ಮೋಹನ ಲಿಂಬಿಕಾಯಿ

ಹುಬ್ಬಳ್ಳಿ: ವಿಶ್ವದ ಅನೇಕ ರಾಷ್ಟ್ರಗಳಿಗಿಂತ ಭಾರತ ಕೊರೋನಾ ಹರಡುವುದನ್ನು ತಡೆಗಟ್ಟವಲ್ಲಿ ಸಫಲವಾಗಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಹೇಳಿದರು.
ಸಂಜೀವಿನಿ ಆರ್ಯವೇದ ಮಹಾವಿದ್ಯಾಲಯ, ಬಿ.ಡಿ.ಜತ್ತಿ ಹೋಮಿಯೋಪತಿ ಮಹಾವಿದ್ಯಾಲಯ, ಜಿಲ್ಲಾ ಆಯುಷ್ಯ ಇಲಾಖೆ ಹಾಗೂ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಸಹಯೋಗದಲ್ಲಿ, ಹುಬ್ಬಳ್ಳಿಯ ಸಂಜೀವಿನಿ ಆರ್ಯವೇದ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಉಚಿತ ಔಷಧಿ ವಿತರಣಾ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಕೈಗೊಂಡ ಲಾಕ್ ಡೌನ್ ನಂತಹ ಕಠಿಣ ಕ್ರಮಗಳು ಕೊರೋನಾ ಹರಡುವುದು ಸಾಕಷ್ಟು ಪರಿಣಾಮಕಾರಿಯಾಗಿದೆ. ಕೊರೋನಾ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿವೆ. ಸರ್ಕಾರದೊಂದಿಗೆ ನಾಗರಿಕರು ಕೈ ಜೋಡಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಂಜೀವಿನಿ ಆರ್ಯವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬನ್ನಿಗೋಳ ಕೊರೋನಾ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತಿರುವ ಸರಕಾರಿ ನೌಕರು, ಪೊಲೀಸರು, ಪೌರಕಾರ್ಮಿಕರು, ಸಾರಿಗೆ ಸಂಸ್ಥೆ ನೌಕರರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೆನಿಕ್ ಆಲ್ಬಮ್ -30 ಮಾತ್ರೆಗಳನ್ನು ವಿತರಿಸಲಾಗಿದೆ. ಮಾಧ್ಯಮ ಪ್ರತಿನಿಧಿಗಳು ಸಹ ತುಂಬಾ ಆಪಾಯಕಾರಿಯಾದ ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಮಾತ್ರೆ ನೀಡಲಾಗುತ್ತಿದೆ ಎಂದರು.
ಹೋಮಿಯೋಪತಿ ಕಾಲೇಜು ಪ್ರಾಚಾರ್ಯ ಡಾ.ಆನಂದ ಕುಲಕರ್ಣಿ ಮಾತನಾಡಿ ಆರ್ಸೆನಿಕಂ ಆಲ್ಬಮ್ -30 ಮಾತ್ರೆಗಳನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮಾತ್ರೆಗಳನ್ನು ಜಾಗರೂಕತೆಯಿಂದ ಸೇವಿಸಬೇಕು. 12 ವರ್ಷ ಮೇಲ್ಪಟ್ಟವರು ದಿನವೊಂದಕ್ಕೆ 6 ಮಾತ್ರೆಗಳನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು ದಿನಗಳ ಕಾಲ ತೆಗೆದುಕೊಳ್ಳಬೇಕು. 12 ವರ್ಷಕಿಂತ ಕಡಿಮೆ ವಯೋಮಾನದವರು 4 ಮಾತ್ರೆಗಳನ್ನು ತೆಗೆದುಕೊಳ್ಳಬೇಕು. ಹೀಗೆ ಮಾತ್ರ ದಿನಾಂಕಗಳನ್ನು ಕ್ಯಾಲೆಂಡರ್ ನಲ್ಲಿ ಗುರುತು ಹಾಕಿ, ಕೋವಿಡ್ -19 ಸಾಂಕ್ರಾಮಿಕ ರೋಗ ಮುಂದವರೆದಲ್ಲಿ ನಂತರದ ತಿಂಗಳಿನಲ್ಲಿ ಅದೇ ದಿನಾಂಕಗಳಲ್ಲಿ ಮಾತ್ರೆಗಳನ್ನು ಸೇವಿಸಬೇಕು. ಮಾತ್ರೆಗಳಲ್ಲಿ 5 ಬಾರಿ ಸಂಸ್ಕರಿಸಿದ ಆರ್ಸನಿಕ್ ಅನ್ನು ಸಕ್ಕರೆ ಗುಳಿಗಳಿಗೆ ಅಲ್ಪ ಪ್ರಮಾಣದಲ್ಲಿ ಲೇಪಿಸಲಾಗಿದೆ. ಇದು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆ್ಚ್ಚ್ಚಿಚ್ಚಿಸುತ್ತದೆ. ಮಾತ್ರೆಗಳನ್ನು ಯಾವದೇ ಖಾಯಿಲೆ ಇರುವವರು ಸಹ ಸೇವಿಸಬಹುದು ಎಂದು ಹೇಳಿದರು.
ಹುಬ್ಬಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಮಾತನಾಡಿ, ಮಾಧ್ಯಮದವರ ಆರೋಗ್ಯ ರಕ್ಷಣೆ ಉದ್ದೇಶದಿಂದ ಮಾತ್ರೆಗಳನ್ನು ನೀಡಿರುವುದಕ್ಕೆ ಧನ್ಯವಾದಗಳು. ಮಾತ್ರೆಗಳನ್ನು ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆಯುಷ್ಯ ವೈದ್ಯಾಧಿಕಾರಿ ಡಾ. ಸಂಗಮೇಶ ಕಲಹಾಳ, ವಾರ್ತಾ ಇಲಾಖೆಯ ಅಧೀಕ್ಷಕರಾದ ವಿನೋದ್ ಕುಮಾರ್.ಡಿ, ಮಾಧ್ಯಮ ಪ್ರತಿನಿಧಿಗಳು, ವಿದ್ಯಾರ್ಥಿಗಳು ಕಾಲೇಜಿನ ಸಿಬ್ಬಂದಿ ಉಪಸ್ಥಿತರಿದ್ದರು. ಆರ್ಯವೇದ ಕಾಲೇಜಿನ ಡಾ.ಸೋಮಶೇಖರ ಹುದ್ದಾರ ಸ್ವಾಗತಿಸಿದರು.ಆಯುಷ್ ಫೆಡರೇಷನ್ ಆಫ್ ಇಂಡಿಯಾದ ಜಿಲ್ಲಾ ಅಧ್ಯಕ್ಷ ಡಾ.ರವೀಂದ್ರ ವೈ ವಂದಿಸಿದರು.ಪ್ರಾಧ್ಯಪಕ ಡಾ.ಚರಂತಯ್ಯ ಹಿರೇಮಠ ನಿರೂಪಿಸಿದರು.