ನಾಳೆ ಹುಬ್ಬಳ್ಳಿ-ಧಾರವಾಡದಲ್ಲೂ ಬಂದ್ ಆಗಲಿದೆ ಬಸ್ ಸಂಚಾರ…!

ಹುಬ್ಬಳ್ಳಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ನಾಳೆ ನಡೆಯಲಿರುವ ಮುಷ್ಕರಕ್ಕೆ ಅವಳಿನಗರದಲ್ಲಿಯೂ ಬೆಂಬಲ ನೀಡಿ, ಬಸ್ ಗಳನ್ನ ಬಂದ್ ಮಾಡಲಾಗುವುದೆಂದು ಸಾರಿಗೆ ನೌಕರರ ಕೂಟ ಹೇಳಿದೆ.
ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಕೂಟದ ಪಿ.ಎಚ್.ನೀರಲಕೇರಿ ಮಾತನಾಡಿ, ನಾಳೆ ನಡೆಯುವ ಸಾರಿಗೆ ಮುಷ್ಕರಕ್ಕೆ ಹುಬ್ಬಳ್ಳಿಯಲ್ಲಿ ಬೆಂಬಲ ನೀಡುತ್ತೇವೆ. ನಾಳೆ ಬೆಳಿಗ್ಗೆಯಿಂದಲೇ ಸಾರಿಗೆ ಬಸ್ ಗಳು ಬಂದ್ ಆಗಲಿವೆ. ಎಸ್ಮಾ ಜಾರಿ ಮಾಡಿದ್ರು ಹೆದರುವುದಿಲ್ಲ. ಸಾಮೂಹಿಕ ರಾಜೀನಾಮೆಗೆ ನಾವು ಸಿದ್ದರಾಗಿದ್ದೇವೆ ಎಂದು ಹೇಳಿದರು.
ಇದೇ ತಿಂಗಳ 23 ರಿಂದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಕುಟುಂಬ ಸಮೇತ ಜೈಲ್ ಭರೋ ಚಳುವಳಿ ನಡೆಸಲಾಗುವುದು. ನಮ್ಮ ಬೇಡಿಕೆಗಳು ಈಡೇರುವವರೆಗೆ ಹಿಂದೆ ಸರಿಯಲ್ಲ. ನಮ್ಮ 9 ಬೇಡಿಕೆಗಳನ್ನ ಈಡೇರಿಸುತ್ತೇವೆಂದು ಹೇಳಿದ್ದ ಸರ್ಕಾರ, ಯಾವ ಬೇಡಿಕೆಗಳನ್ನೂ ಇಲ್ಲಿಯವರೆಗೆ ಈಡೇರಿಸಿಲ್ಲವೆಂದು ಹೇಳಿದರು.
ಸಾರಿಗೆ ನೌಕರರ ಕೂಟ ಹೋರಾಟಕ್ಕೆ ಬೆಂಬಲ ನೀಡಿದ್ದರಿಂದ ನಾಳೆ ಸಾರಿಗೆ ಬಸ್ ಗಳು ಸಂಪೂರ್ಣವಾಗಿ ಬಂದ್ ಆಗುವ ನಿರೀಕ್ಷೆಯಿದೆ. ಈ ಬಗ್ಗೆ ಇನ್ನೂ ಸಾರಿಗೆ ಇಲಾಖೆಯ ಅಧಿಕಾರಿಗಳು ಯಾವುದೇ ಸ್ಪಷ್ಟಿಕರಣ ನೀಡಿಲ್ಲ.