ಹುಬ್ಬಳ್ಳಿಯಲ್ಲಿ ಪೊಲೀಸರ “ಮಾಸ್ಟರ್ ಚೇಸಿಂಗ್”- ಹಾಡುಹಗಲೇ ಬ್ಯಾಂಕ್ ರಾಬರಿಗಿಳಿದಿದ್ದ ಮಧುಮಗ…!

ಹುಬ್ಬಳ್ಳಿ: ವಾಣಿಜ್ಯನಗರಿಯಲ್ಲಿ ಹಾಡುಹಗಲೇ ಬ್ಯಾಂಕ್ ರಾಬರಿ ಮಾಡಿಕೊಂಡು ಪರಾರಿಯಾಗುತ್ತಿದ್ದ ಆರೋಪಿಯನ್ನ ಪೊಲೀಸರು ಹಿಡಿದಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೂಲತಃ ವಿಜಯಪುರದ ಪ್ರವೀಣಕುಮಾರ ಅಪ್ಪಾಸಾಹೇಬ್ ಪಾಟೀಲ ಎಂಬಾತನೇ ಸಿಕ್ಕಿ ಬಿದ್ದ ದರೋಡೆಕೋರ. ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರವೀಣ, ಕಳೆದ ಎರಡು ದಿನದ ಹಿಂದೆ ಹುಬ್ಬಳ್ಳಿಗೆ ಬಂದು ಭಾರತಿ ಲಾಡ್ಜ್ ನಲ್ಲಿ ತಂಗಿದ್ದ.
ಇಂದು ಕೊಪ್ಪಿಕರ ರಸ್ತೆಯಲ್ಲಿರುವ ಎಸ್ ಬಿಐ ಬ್ಯಾಂಕಿನೊಳಗೊಗಿ ಕ್ಯಾಷಿಯರ್ ಗೆ ಚಾಕು ತೋರಿಸಿ, ಬ್ಯಾಗಿನಲ್ಲಿ ಸುಮಾರು 7ಲಕ್ಷಕ್ಕೂ ಹೆಚ್ಚು ಹಣವನ್ನ ಹಾಕಿಸಿಕೊಂಡಿದ್ದಾನೆ. ತಕ್ಷಣವೇ ಪರಾರಿಯಾಗಲು ಯತ್ನಿಸಿದಾಗ, ಬ್ಯಾಂಕಿನ ಮಹಿಳಾ ಸಿಬ್ಬಂದಿ ಬಾಯಿ ಬಾಯಿ ಬಡಿದುಕೊಂಡಿದ್ದಾರೆ.
ಕೊಪ್ಪಿಕರ ರಸ್ತೆಯ ಮೆಟ್ರೋಪೊಲೀಸ್ ಹೊಟೇಲ್ ಬಳಿ ಕರ್ತವ್ಯ ನಿರತ ದಕ್ಷಿಣ ಸಂಚಾರಿ ಠಾಣೆಯ ಪೊಲೀಸ್ ಉಮೇಶ ಹಾಗೂ ಉಪನಗರ ಠಾಣೆಯ ಪೇದೆಯೋರ್ವರು ಆರೋಪಿಯನ್ನ ಹಣದ ಸಮೇತ ಹಿಡಿದಿದ್ದಾರೆ.
ಆರೋಪಿ ಪ್ರವೀಣನ ಮದುವೆ ಇನ್ನೆರಡು ದಿನದಲ್ಲಿ ವಿಜಯಪುರದಲ್ಲಿ ನಡೆಯುವುದಿತ್ತು ಎಂದು ಗೊತ್ತಾಗಿದೆ. ಹಾಡುಹಗಲೇ ನಡೆಯುತ್ತಿದ್ದ ದರೋಡೆಯನ್ನ ನಿಯಂತ್ರಿಸುವಲ್ಲಿ ಸಫಲರಾದ ಟ್ರಾಫಿಕ್ ಪೊಲೀಸ್ ಉಮೇಶ ಮತ್ತು ಇನ್ನೋರ್ವರಿಗೆ ಹಿರಿಯ ಅಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.