10ಸಾವಿರ ಗಡಿದಾಡಿದ ಕೋವಿಡ್ ಟೆಸ್ಟ್: ಲ್ಯಾಬ್ ತಂಡದ ಸಾಧನೆ
ಹಾವೇರಿ: ಇಲ್ಲಿನ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕೋವಿಡ್ ಟೆಸ್ಟಿಂಗ್ ಗಾಗಿ ಸ್ಥಾಪಿಸಲಾಗಿರುವ ವೈರಲ್ ರೀಸರ್ಚ ಆ್ಯಂಡ್ ಡಯಾಗ್ನೋಸ್ಟಿಕ್ ಲ್ಯಾಬರೋಟರಿಯೂ ಇಂದಿಗೆ ಜಿಲ್ಲೆಯಲ್ಲಿ ಒಟ್ಟು 10000 ಸಾರ್ವಜನಿಕರ ಮಾದರಿಗಳನ್ನು ಯಶಸ್ವಿಯಾಗಿ ತಪಾಸಣೆ ಮಾಡಿ ಸಾಧನೆ ಮಾಡಿದೆ.
ಈ ಸರ್ಕಾರಿ ಸಂಸ್ಥೆಯನ್ನು 1/7/2020 ರಂದು ಕಾರ್ಯಾರಂಭ ಮಾಡಲಾಗಿತ್ತು. ಪ್ರಸ್ತುತ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ನೋಡಲ್ ಅಧಿಕಾರಿಗಳಾದ ಡಾ.ಹಾವನೂರ, ಪಿ.ಸಿ.ಆರ್. ಪ್ರಯೋಗಾಲಯದ ಅಧಿಕಾರಿ ಡಾ. ಎಲ್.ಎಲ್.ರಾಥೋಡ್ ಹಾಗೂ ಕೋವಿಡ್ ಪ್ರಯೋಗಾಲಯದ ಮುಖ್ಯಸ್ಥೆ ಡಾ. ಶ್ಯಾಮಲಾ ಶೆಟ್ಟರ್ ಅವರ ನೇತೃತ್ವದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ಮೂವರು ಸಂಶೋಧನಾ ವಿಜ್ಞಾನಿಗಳು ಮೂವರು ಸಂಶೋಧನಾ ಸಹಾಯಕರು ಸೇರಿದಂತೆ ಪ್ರಯೋಗಾಲಯ ತಂತ್ರಜ್ಞರು (LT), ಹಾಗೂ ದತ್ತಾಂಶ ಸಂಗ್ರಾಹಕರು (DEO) ಒಟ್ಟು 27 ಜನ ಇದುವರೆಗೆ ಈ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋವಿಡ್ ತುರ್ತು ಪರಿಸ್ಥಿತಿಯ ನಡುವೆಯೂ ಹಗಲು ರಾತ್ರಿಯನ್ನದೆ ದಿನದ 24 ಘಂಟೆಯೂ ತಪಾಸಣೆಗೆಂದು ಬರುವ ಗಂಟಲು ದ್ರವದ ಮಾದರಿಗಳನ್ನು ಸಂಸ್ಕರಿಸಿ ತಪಾಸಣೆಗೊಳಪಡಿಸಿ ತ್ವರಿತಗತಿಯಲ್ಲಿ ಫಲಿತಾಂಶವನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ನಿಯಂತ್ರಣದಲ್ಲಿ ಬಹು ಮುಖ್ಯ ಪಾತ್ರವನ್ನು ಈ ತಂಡ ನಿರ್ವಹಿಸುವಲ್ಲಿ ಯಶಸ್ವಿಯಾಗಿದೆ.
ಇಂದು 10000 ಮಾದರಿಗಳ ಫಲಿತಾಂಶವನ್ನು ನೀಡುವಲ್ಲಿ ಯಶಸ್ವಿಯಾದ ತಂಡವನ್ನು ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಅಧಿಕಾರಿಗಳು ಅಭಿನಂಧಿಸಿದರು. ಈ ಸಂದರ್ಭದಲ್ಲಿ ಶ್ರೀ ಮಾಲೋಡ್ಕರ್, ಮತ್ತು ತಂಡ ಸಂಶೋಧನಾ ಸಹಾಯಕರಾದ ವಿನೂತಾ ಗೌಡ, ಧನ್ಯಕುಮಾರಿ, ವಿನಯಕುಮಾರ, ಹಾಗೂ ಸಂಶೋಧನಾ ವಿಜ್ಞಾನಿಗಳಾದ ಡಾ.ಗಿರೀಶ ಬಾಬು, ಡಾ.ಮೋಹನ್ ಕುಮಾರ ಹಾಗೂ ಉಮರ ಫಾರೂಕ್ ಮೀರಾನಾಯಕ್ ಸೇರಿದಂತೆ ಎಲ್ಲರೂ ಕೊರೋನಾ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಶ್ರಮ ಪಡುವ ಕುರಿತು ಆಶಯ ವ್ಯಕ್ತಪಡಿಸಿದರು.