Posts Slider

Karnataka Voice

Latest Kannada News

ಹರಪನಹಳ್ಳಿಯಲ್ಲಿ ತಡ ರಾತ್ರಿ ಬಿಲ್ ಬರೆದ ಸಿಬ್ಬಂದಿ ವರ್ಗ…?

1 min read
Spread the love

ಹರಪನಹಳ್ಳಿ: ದಿನನಿತ್ಯ ಕಛೇರಿ ಅವಧಿಯಲ್ಲಿಯೇ ಸಾರ್ವಜನಿಕರ ಕೈಗೆಟುಕದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ತಡ ರಾತ್ರಿ ಕಛೇರಿಯಲ್ಲಿ ಲೈಟು ಹಾಕಿಕೊಂಡು ಕಾರ್ಯನಿರ್ವಹಿಸಿದರೆ ಯಾರಿಗಾದರೂ ಆಶ್ಚರ್ಯವಾಗಬಹುದಲ್ಲವೇ. ಬುಧವಾರ ತಡರಾತ್ರಿ 11.30 ಗಂಟೆಗೆ ಹರಪನಹಳ್ಳಿ ಪಟ್ಟಣದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗೀಯ ಕಛೇರಿಯಲ್ಲಿ ಈ ಸನ್ನಿವೇಶ ಜರುಗಿದ್ದು ಎಂದರೆ ಎಲ್ಲರೂ ನಂಬಲೇಬೆಕಾಗಿದೆ. ಮಾರ್ಚ್ ತಿಂಗಳ ಅಂತ್ಯದ ಒಳಗಡೆಯೇ ವಾರ್ಷಿಕ ಆಯವ್ಯಯ ಸರಿದೂಗಿಸಿ ಬಿಲ್ ಬರೆದು ಅಂತಿಮಗೊಳಿಸುವ ಹಿನ್ನೆಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ನಾಲ್ಕು ತಾಲ್ಲೂಕು ಒಳಗೊಂಡ ವಿಭಾಗೀಯ ಕಛೇರಿಯ ಸಿಬ್ಬಂದಿ ವರ್ಗ ಇಂತಹ ದುಸ್ಸಾಹಸಕ್ಕೆ ಕೈ ಹಾಕಿರಬಹುದೆಂಬ ಶಂಕೆ ಸಾರ್ವಜನಿಕರಲ್ಲಿ ವ್ಯಕ್ತವಾಗಿದೆ.

ಹರಪನಹಳ್ಳಿ, ಹಡಗಲಿ, ಕೂಡ್ಲಿಗಿ ಹಾಗೂ ಕೊಟ್ಟೂರು ತಾಲ್ಲೂಕುಗಳನ್ನು ಒಳಗೊಂಡ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗೀಯ ಕಛೇರಿ ಪಟ್ಟಣದ ಹೊಸಪೇಟೆ ರಸ್ತೆಯ ಹೃದಯ ಭಾಗವಾಗಿರುವ ಪ್ರವಾಸಿ ಮಂದಿರದಲ್ಲಿದೆ. ಬಿಟೀಷ್ ಕಾಲದ ಬಂಗಲೆಯಂತಿರುವ ಈ ಸರ್ಕಾರಿ ಕಛೇರಿ ಸುಣ್ಣ-ಬಣ್ಣಗಳಿಲ್ಲದೇ ಶಿಥಿಲಗೊಂಡು, ಸಾರ್ವಜನಿಕರಿಗೆ ದಿನ ನಿತ್ಯ ಎದ್ದುಕಾಣುತ್ತದೆ. ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಪೈಪುಗಳು ಒಡೆದುಹೋಗಿ ನೈರ್ಮಲ್ಯವೆಂಬುದು ಎದ್ದು ಕಾಣುತ್ತಿವೆ. ಈ ಕುರಿತು ನೂರಾರು ಬಾರಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ದೂರು ಸಲ್ಲಿಸಿದರೂ ಕ್ಯಾರೆ ಎನ್ನದ ಸದರಿ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಏಕಾಏಕಿ ತಡರಾತ್ರಿ ಲೈಟಿನ ಬೆಳಕಿನಲ್ಲಿ ಬಿಲ್ ಬರೆದಿದ್ದು ಏಕೆ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ. ಮಾರ್ಚ್ ತಿಂಗಳಲ್ಲಿನ ವಾರ್ಷಿಕ ಆಯವ್ಯಯವನ್ನು ಸರಿದೂಗಿಸಿ ಗುತ್ತಿಗೆದಾರರಿಗೆ ಬಿಲ್ ದಯಪಾಲಿಸಲು ತಡ ರಾತ್ರಿಯವರೆಗೂ ಕಛೇರಿಯನ್ನು ತೆರೆದಿಟ್ಟಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.

ಪ್ರತ್ಯಕ್ಷದರ್ಶಿ ಟಿ.ಮಂಜುನಾಥ ರವರು ಹೇಳಿದಂತೆ, ಎಂದೂ ಕೂಡ ರಾತ್ರಿ ಅವಧಿಯಲ್ಲಿ ಬೆಳಕು ಕಾಣದಿದ್ದ  ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗೀಯ ಕಛೇರಿಯಲ್ಲಿ ರಾತ್ರಿ 11.30 ಗಂಟೆಗೆ ವಿದ್ಯದ್ದೀಪ ಉರಿಯುತ್ತಿರುವುದು ಕಂಡು ಅನುಮಾನಗೊಂಡು ಕಛೇರಿಯ  ಒಳಗೆ ಪ್ರವೇಶಿಸಿದೆ. ನಾನು ಪ್ರವೆಶಿಸಿರುವುದನ್ನು ಗಮನಸಿಯೂ ಕೂಡ ವಿಚಲಿತರಾಗದೇ ಸಿಬ್ಬಂದಿ ವರ್ಗ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದರು. ಓರ್ವ ಸಿಬ್ಬಂದಿಯೊಬ್ಬರು ವಿವಿಧ ಗುತ್ತಿಗೆ ಕಾಮಗಾರಿಯ ಹೆಸರಿನಲ್ಲಿರುವ ದಾಖಲಾತಿ ಪುಸ್ತಕಗಳನ್ನು ಹಿಡಿದುಕೊಂಡು ಓದುತ್ತಿದ್ದರೇ ಮತ್ತೋರ್ವ ಸಿಬ್ಬಂದಿಯೂ, ಅವರು ಓದಿದಂತೆ ಬರೆದು ಅಂದಾಜು ಮೊತ್ತವನ್ನು ನಮೂದಿಸುತ್ತಿದ್ದರು. ಒಟ್ಟು ನಾಲ್ಕೈದು ಜನ ಸಿಬ್ಬಂದಿಗಳು ತಡರಾತ್ರಿ ಚಹ ಕುಡಿಯುತ್ತಲೇ ದಾಖಲೆಗಳನ್ನು ಬರೆಯುತ್ತಿದ್ದರು. ಈ ಬಗ್ಗೆ ಕೇಳಿದಾಗ ‘ಮಾರ್ಚ್ ಮುಗಿಯುವುದರೊಳಗೆ ಗುತ್ತಿಗೆ ಕಾರ್ಯ ನಿರ್ವಹಿಸಿದ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಡಬೇಕಲ್ಲವಾ, ಅದಕ್ಕಾಗಿ ತಡರಾತ್ರಿಯಾದರೂ ಕಾರ್ಯನಿರ್ವಹಿಸುತ್ತಿದ್ದೇವೆ’ ಎಂದು ಸಮಜಾಯಿಷಿ ನೀಡಿದರು ಎಂದು ತಿಳಿಸಿದ್ದಾರೆ.

ನಿಜವಾಗಿಯೂ ತಡರಾತ್ರಿ ಹರಪನಹಳ್ಳಿಯಲ್ಲಿರುವ ನಾಲ್ಕು ತಾಲ್ಲೂಕುಗಳನ್ನು ಒಳಗೊಂಡಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗೀಯ ಕಛೇರಿಯಲ್ಲಿ ನಡೆದಿದ್ದಾದರೂ ಏನು? ಸಾರ್ವಜನಿಕರು ಹಾಗೂ ಪ್ರತ್ಯಕ್ಷದರ್ಶಿ ವ್ಯಕ್ತಪಡಿಸಿರುವ ಅನುಮಾನಗಳು ಸತ್ಯವಾ? ಎನ್ನುವ ಪ್ರಶ್ನೆಗಳಿಗೆ ಪಾರದರ್ಶಕ ತನಿಖೆಯಿಂದಲೇ ಉತ್ತರ ದೊರಕಬೇಕಿದೆ. ಈ ಕುರಿತು ಕಾರ್ಯಪಾಲಕ ಅಭಿಯಂತರರನ್ನು ಸಂಪರ್ಕಿಸಲು ಪ್ರಯತ್ನಿಸಿದರೆ ಅವರು ಸಂರ್ಕಕಕ್ಕೆ ಲಭ್ಯವಾಗಿರುವುದಿಲ್ಲ. ಕಛೇರಿ ಸಿಬ್ಬಂದಿ ವರ್ಗದವರಿಗೆ ವಿಚಾರಿಸಿದಾಗ, ಶಿವರಾತ್ರಿ ಪ್ರಯುಕ್ತ ಕಾರ್ಯಪಾಲಕ ಅಭಿಯಂತರರು ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿದ್ದಾರೆ ಎಂಬ ಉತ್ತರ ಲಭಿಸಿದೆ.


Spread the love

Leave a Reply

Your email address will not be published. Required fields are marked *

You may have missed