ಗ್ರಾ.ಪಂ ಚುನಾವಣೆ: ರಾಜಕೀಯ ನಾಯಕರ ನಿದ್ದೆಗೆಡಿಸಿದ ಆಯೋಗದ ಮಹತ್ವದ ಆದೇಶ..!
1 min readಬೆಂಗಳೂರು: ನ್ಯಾಯಾಲಯದ ಆದೇಶದಂತೆ ಎರಡು ಹಂತಗಳಲ್ಲಿ ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ನಡೆಯುತ್ತಿದೆ. ನ್ಯಾಯಸಮ್ಮತ ಹಾಗೂ ಮುಕ್ತ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಎಲ್ಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ. ಮುಂದಿನ ಸಾರ್ವತ್ರಿಕ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ನೋಡುವುದಾದರೆ, ತಳಮಟ್ಟದಲ್ಲಿ ನಡೆಯುವ ಗ್ರಾಮ ಪಂಚಾಯತಿ ಚುನಾವಣೆ ಮಹತ್ವ ಪಡೆದುಕೊಂಡಿದೆ. ತಳ ಮಟ್ಟದಲ್ಲಿ ಬೆಂಬಲ ಪಡೆಯುವುದು ರಾಜಕೀಯ ಪಕ್ಷಗಳಿಗೆ ಅತ್ಯಗತ್ಯ. ಹೀಗಾಗಿ ಎಲ್ಲ ರಾಜಕೀಯ ಪಕ್ಷಗಳಿಗೆ ಇದು ಮಹತ್ವದ ಚುನಾವಣೆ, ಆದರೂ ನೇರವಾಗಿ ಚುನಾವಣೆಯಲ್ಲಿ ಭಾಗವಹಿಸುವಂತಿಲ್ಲ.
ಡಿಸೆಂಬರ್ 22 ಹಾಗೂ 27 ರಂದು ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಒಟ್ಟಾರೆ 5,762 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆಯಾಗಿದೆ. ವಿವಿಧ ಕಾರಣಗಳಿಂದ 242 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ಒಟ್ಟು 92,121 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇದು ಬೃಹತ್ ಚುನಾವಣೆ. ಇದೇ ಸಂದರ್ಭದಲ್ಲಿ ರಾಜ್ಯ ಚುನಾವಣಾ ಆಯೋಗ ಮಹತ್ವದ ಆದೇಶ ಮಾಡಿದ್ದು, ಆ ಆದೇಶ ಎಲ್ಲ ರಾಜಕೀಯ ಪಕ್ಷಗಳ ನಾಯಕರ ನಿದ್ದೆಗೆಡಿಸಿದೆ.
ಮೊದಲ ಹಂತದಲ್ಲಿ ಒಟ್ಟು 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯತಿಗಳ 48,048 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈಗಾಗಲೇ 4,377 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿರುವುದರಿಂದ ಒಟ್ಟು 1,17,387 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಹೀಗಾಗಿ ಚುನಾವಣೆ ರಂಗೇರಿದೆ. ಇದು ಪಕ್ಷಾತೀತವಾಗಿ ನಡೆಯುವ ಚುನಾವಣೆ ಆಗಿದ್ದರೂ, ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಯಾವುದೇ ಒಂದು ರಾಜಕೀಯ ಪಕ್ಷದ ಬೆಂಬಲಿಗರೆ ಆಗಿರುವುದು ಸಹಜ. ಹೀಗಾಗಿ ಚುನಾವಣಾ ಆಯೋಗ ರಾಜಕೀಯ ನಾಯಕರಿಗೆ ಖಡಕ್ ಆದೇಶ ನೀಡಿದೆ.
ಗ್ರಾಮ ಪಂಚಾಯತಿ ಚುನಾವಣೆಗಳು ಪಕ್ಷರಹಿತ ಚುನಾವಣೆಯಾಗಿದ್ದು, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವ, ಸಭೆ ಸಮಾರಂಭಗಳನ್ನು ನಡೆಸುವ ಹಾಗೂ ರಾಜಕೀಯ ನಾಯಕರ ಫೋಟೊಗಳಿರುವ ಕರಪತ್ರ ಹಂಚುವ ಸಾಧ್ಯತೆಗಳಿವೆ. ಆ ಬಗ್ಗೆ ಗಮನ ಹರಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗ ಚುನಾವಣಾ ಆಧಿಕಾರಿಗಳಿಗೆ ಸೂಚಿಸಿದೆ.
ಗ್ರಾಮ ಪಂಚಾಯಿತಿ ಚುನಾವಣೆಯು ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ಪಕ್ಷದ ಆಧಾರ ರಹಿತವಾಗಿ ನಡೆಸಲಾಗುತ್ತಿದೆ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಕೊಡುವುದಿಲ್ಲ. ಅದರ ಬದಲಿಗೆ ಸಾಮಾನ್ಯ ಚಿಹ್ನೆಗಳನ್ನು ಅಭ್ಯರ್ಥಿಗಳಿಗೆ ಕೊಡಲಾಗುತ್ತದೆ ಎಂದು ಆಯೋಗ ತಿಳಿಸಿದೆ.
ಹೀಗಾಗಿ ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಪ್ರಚಾರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗದ ಖಡಕ್ ಆದೇಶ ಮಾಡಿದೆ. ರಾಜಕೀಯ ನಾಯಕರು ಸಭೆಗಳನ್ನು ನಡೆಸಿ ಮತದಾರರ ಮೇಲೆ ಪ್ರಭಾವ ಬೀರುವುದಕ್ಕೂ ಅವಕಾಶವಿಲ್ಲ. ಯಾವುದೇ ಸಂದರ್ಭದಲ್ಲಿಯೂ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ರಾಜಕೀಯ ಸಲ್ಲದು. ಹಾಗೆ ಯಾರಾದರೂ ರಾಜಕೀಯ ನಾಯಕರು ಮಾಡಿದಲ್ಲಿ ಅದು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು, ಪ್ರಕರಣ ದಾಖಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ಎಚ್ಚರಿಸಿದೆ.