Karnataka Voice

Latest Kannada News

ಸರಕಾರಿ ಶಾಲೆ ವಿಲೀನ ಪ್ರಶ್ನಿಸಿದ ಶಿಕ್ಷಕನಿಗೆ ನೋಟೀಸ್… ರಾಜ್ಯಾದ್ಯಂತ ಆಕ್ರೋಶ…

Spread the love

ಚಿಕ್ಕೋಡಿ: ಸರಕಾರಿ ಶಾಲೆಗಳ ವಿಲೀನದ ಕುರಿತು ಸರಕಾರಿ ಶಾಲೆಯ ಶಿಕ್ಷಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅನಿಸಿಕೆ ಹಂಚಿಕೊಂಡದ್ದಕ್ಕೆ ಡಿಡಿಪಿಐ ಕಾರಣ ಕೇಳಿ ನೋಟೀಸ್ ನೀಡಿದ್ದು, ಇದು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಈ ನೋಟೀಸ್ ಬಗ್ಗೆ ಸ್ವತಃ ಶಿಕ್ಷಕ ವೀರಣ್ಣ ಮಡಿವಾಳರ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು ಇಲ್ಲಿದೆ ನೋಡಿ…

ನನ್ನ ಮೇಲೆ ಶಿಸ್ತುಕ್ರಮ ತೆಗೆದುಕೊಳ್ಳುತ್ತಾರಂತೆ?!

ಆತ್ಮೀಯರೇ, ಹೌದು ನನ್ನ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರಂತೆ. ಕಾರಣ ಸರಕಾರಿ ಶಾಲೆಗಳ ವಿಲೀನದ ಬಗೆಗೆ ನಾನು ಹಾಕಿದ ಎರಡು ಸಾಲಿನ ಪದ್ಯ (ವಾಟ್ಸಪ್ ಸ್ಟೇಟಸ್).

ಯಾವುದೇ ಶಾಲೆಯನ್ನ ಮುಚ್ಚಿದಾಗ ಒಬ್ಬ ಪ್ರಾಮಾಣಿಕ ಶಿಕ್ಷಕನಿಗೆ ಸಂತೋಷವಾಗುವುದಿಲ್ಲ, ಬೇಸರವಾಗುತ್ತದೆ, ದುಃಖವಾಗುತ್ತದೆ. ಹದಿಮೂರು ಸಾವಿರದ ಎಂಟುನೂರು ಶಾಲೆಗಳನ್ನ ವಿಲೀನ ಮಾಡುತ್ತೇವೆ ಎಂದಾಗ ನಾನೂ ಕೂಡ ವ್ಯಥೆ ಪಟ್ಟೆ, ಆಳದಿಂದ ನೊಂದೆ, ಎರಡು ಸಾಲು ಬರೆದೆ. ಅದೀಗ ಅಪರಾಧವಾಗಿದೆ. ನನಗೆ ಕಾರಣ ಕೇಳಿ ನೋಟೀಸ್ ನೀಡಿದ್ದಾರೆ.

ಕಳೆದ ಹದಿನೈದು ವರ್ಷಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಸಾಹಿತ್ಯಿಕವಾಗಿ ಆತ್ಮಪೂರ್ವಕ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿರುವೆ. ಫೇಸ್‌ಬುಕ್‌, ವಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣದಿಂದ ಶಿಕ್ಷಣಪ್ರೇಮಿಗಳನ್ನ ಸಂಪರ್ಕಿಸಿ ಹಲವಾರು ಮಕ್ಕಳಿಗೆ, ನೊಂದವರಿಗೆ ಸಹಾಯ ಮಾಡಿದ್ದೇವೆ, ಅನೇಕ ಸಾರ್ಥಕ ಕೆಲಸ ಮಾಡಿದ್ದೇವೆ. ಸಮಯದ ಹಂಗಿಲ್ಲದೆ ಕನಸಿನ ಶಾಲೆ ರೂಪಿಸಲು ಶ್ರಮಿಸಿದ್ದೇವೆ, ಇಂದು ನನಸಾಗಿಸಿಕೊಂಡಿದ್ದೇವೆ. ನಮ್ಮ ಅಂಬೇಡ್ಕರ್ ನಗರಕ್ಕೆ ಶಾಲೆಯ ಅಭಿವೃದ್ಧಿ ಮನಗಂಡ ನಂತರವೇ ಮೊದಲ ಬಾರಿಗೆ ಬೀದಿ ದೀಪಗಳು ಬೆಳಗಿದವು, ಮನೆ ಮನೆಗೂ ನಲ್ಲಿ ನೀರು ಬಂತು, ನಿಡಗುಂದಿ ಯಿಂದ ನಮ್ಮ ಶಾಲೆವರೆಗೂ ಪಕ್ಕಾ ರಸ್ತೆ ಬಂತು, ಕಳೆದ ಐದು ವರ್ಷಗಳಲ್ಲಿ ಮಕ್ಕಳ ಸಂಖ್ಯೆ ದುಪ್ಪಟ್ಟಾಯಿತು. ಒಬ್ಬ ಮಾಸ್ತರನಿಗೆ ಇದಕ್ಕಿಂತ ಸಂತೋಷ ಸಾರ್ಥಕತೆ ಸಂಭ್ರಮ ಬೇರೆಲ್ಲಿತಾನೆ ಸಿಕ್ಕೀತು.

ನಿಮಗೆ ಗೊತ್ತಿರಬಹುದು ಶಿಕ್ಷಣ ಸಚಿವರಾಗಿದ್ದ ಮಾನ್ಯ ಸುರೇಶ್ ಕುಮಾರ್ ರವರೂ ಕರೆ ಮಾಡಿ ನಮ್ಮ ಕೆಲಸ ಶ್ಲಾಘಿಸಿದ್ದರು, ಸರ್ಕಾರದ ಪ್ರಿನ್ಸಿಪಾಲ್ ಸೆಕ್ರೆಟರಿ ಯವರು ನಮ್ಮ ಬೆಳವಣಿಗೆ ಗಮನಿಸಿ ಅಭಿನಂದಿಸಿ ಹೃದ್ಯ ಪತ್ರ ಬರೆದಿದ್ದರು, ಶಿಕ್ಷಣ ಇಲಾಖೆಯ ಮಾನ್ಯ ಆಯುಕ್ತರು ನಮ್ಮ ಕೆಲಸ ಕಾರ್ಯ ಬೆಂಬಲಿಸಿ ಅಭಿನಂದಿಸಿ ಪತ್ರ ಬರೆದು ಬೆನ್ನು ತಟ್ಟಿದ್ದರು.

ಈಗ ಮಾನ್ಯ ಡಿಡಿಪಿಐ ಸಾಹೇಬರು ಕಾರಣ ಕೇಳಿ ನನಗೆ ನೋಟೀಸ್ ನೀಡಿದ್ದಾರೆ. ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆಯೂ ಎಚ್ಚರಿಕೆ ನೀಡಿದ್ದಾರೆ. ಸರಕಾರಿ ಶಾಲೆಯೊಂದರ ಶಿಸ್ತು ಸುಂದರತೆ ಮತ್ತು ಅರ್ಥವಂತಿಕೆ ಹೇಗಿರುತ್ತದೆ ಎಂದು ತೋರಿಸಿಕೊಟ್ಟವರು ನಾವು, ಈಗ ನನ್ನ ಮೇಲೆಯೇ ಶಿಸ್ತುಕ್ರಮ ಜರುಗಿಸುವುದಾದರೆ…. ಅದೂ ಕೂಡ ನಡೆಯಲಿ.

ಯಾರು ಯಾವ ಹುನ್ನಾರದಿಂದ ಹೇಗೆಲ್ಲ ತುಳಿಯಲು ಹವಣಿಸಬಹುದು ಎಂಬುದು ಯಾರಿಗೂ ಅಂದಾಜಿರುವುದಿಲ್ಲ. ಈಗ ನನ್ನ ಪಾಲಿಗೂ ಅಂತಹ ಆತಂಕದ ದಿನಗಳು ಬರುತ್ತಿವೆ.

ಬರವಣಿಗೆ ನನ್ನ ಉಸಿರು, ಬರವಣಿಗೆ ಮತ್ತು ಕೃತಿ ನನ್ನ ಜೀವಂತಿಕೆ. ಅದಕ್ಕೂ ಕಡಿವಾಣ ಬೀಳುವುದಾದರೆ….

ಬಹಳಷ್ಟು ಜನ ಶಿಕ್ಷಕರ ಆತಂಕ ಏನೆಂದರೆ ಒಳ್ಳೆಯದನ್ನ ಮಾಡಲು ಹೋದಾಗ ಅಸಹಿಷ್ಣುಗಳಿಂದ ತೊಂದರೆಗಳು ಬರಬಹುದು ಎಂಬುದು. ಈಗ ನಾನು ಮಾಡುತ್ತಿರುವ ಕೆಲಸದಿಂದ ಹಿಂದೆ ಸರಿದರೆ ಅಥವಾ ನಿಲ್ಲಿಸಿದರೆ ಮುಂದೆ ಯಾರು ಹೇಗೆ ತಾನೆ ಧೈರ್ಯ ಮಾಡಿಯಾರು….

ಇಲ್ಲಿ ಈಗೀಗ ಹಣ ಅಧಿಕಾರ ಜಾತಿಗಳಿಂದಲೇ ಬಹಳಷ್ಟು ಜನ ಬದುಕುತ್ತಿದ್ದಾರೆ. ನನ್ನ ಬಳಿ ಹಣವಿಲ್ಲ, ಅಧಿಕಾರವಂತೂ ದೂರದ ಮಾತು, ಜಾತಿಯವರೂ ಹತ್ತಿರ ಬಿಟ್ಟುಕೊಳ್ಳುವುದಿಲ್ಲ, ಜೊತೆ ನಿಲ್ಲುವುದಿಲ್ಲ.

ನನ್ನೊಳಗಿರುವುದು ಆತ್ಮಪೂರ್ವಕ ಶ್ರದ್ಧೆ, ಶುದ್ಧ ಪ್ರಾಮಾಣಿಕತೆ.

ಶಿಸ್ತುಕ್ರಮ ಜರುಗಿದರೆ ಜರುಗಲಿ. ಈಗಾಗಲೇ ಒಂದು ಪೂರ್ಣ ಬದುಕಿನ ಅನುಭವ ನನ್ನ ಜೀವರಕ್ತದ ಕಣಕಣದಲ್ಲಿದೆ.

ಇನ್ನೆಷ್ಟು ದಿನ ಬದುಕೇನು? ಬದುಕಿರುವವರೆಗೆ ಇಸ್ತ್ರಿ ಅಂಗಡಿ ಇಟ್ಟುಕೊಂಡು ಬದುಕುವೆ, ಬರವಣಿಗೆ ಬಿಡಲಾರೆ…

  • ವೀರಣ್ಣ ಮಡಿವಾಳರ

Spread the love

Leave a Reply

Your email address will not be published. Required fields are marked *