ಸರಕಾರ ಆರ್ಥಿಕ ಬಿಕ್ಕಟ್ಟಿನಲ್ಲಿದೆಯಂತೆ: ಸರ್ಕಾರದ ಪತ್ರದಲ್ಲೇ ಉಲ್ಲೇಖ- ನೌಕರರಿಗೆ ಗಳಿಕೆ ರಜೆ ಹಣ ಕೊಡಲು ಅಯೋಮಯ..!
ಬೆಂಗಳೂರು: ಕರ್ನಾಟಕ ಸರಕಾರ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ ಎಂಬುದನ್ನ ಸರಕಾರದ ಅಧಿಕಾರಿಗಳ ಆದೇಶದ ಪ್ರತಿಯಿಂದ ಗೊತ್ತಾಗಿದ್ದು, ನೌಕರರ ಗಳಿಕೆ ರಜೆ ಹಣವನ್ನೂ ಕೊಡದ ಸ್ಥಿತಿಗೆ ಬಂದಿದೆ.
ಈ ಬಗ್ಗೆ ಸರಕಾರದ ಉಪ ಕಾರ್ಯದರ್ಶಿ ಜಿ.ಬಿ.ಹೇಮಣ್ಣ ಆದೇಶವನ್ನ ಮಾಡಿದ್ದು, ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ 2020ನೇ ಸಾಲಿನ ಅವಧಿಗೆ ಗಳಿಕೆ ರಜೆಯನ್ನ ನಗದೀಕರಣ ಪಡೆಯುವ ಸೌಲಭ್ಯ ರದ್ದುಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಮುಂದುವರೆದು ಬರೆದಿರುವ ಆದೇಶದಲ್ಲಿ, ಜನವರಿ 2020ರಿಂದ ಡಿಸೆಂಬರ್ 2020ರಲ್ಲಿ ನಿವೃತ್ತಿ ಹೊಂದುವ ನೌಕರರು, ಅಧಿಕಾರಿಗಳು ನಿವೃತ್ತಿ ಹೊಂದುವ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲ, ಈ ಆದೇಶ ಸರ್ಕಾರದಿಂದ ಸಹಾಯನುದಾನ ಪಡೆಯುತ್ತಿರುವ ಸಂಸ್ಥೆಗಳ ನೌಕರರಿಗೂ ಅನ್ವಯಿಸುತ್ತದೆ ಎಂದು ಹೇಳಲಾಗಿದೆ.
ಇಲ್ಲಿಯವರೆಗೆ ಡಿಎ ಹಣವನ್ನೂ ನೀಡಿಲ್ಲ. ಅದನ್ನಾದರೂ ಸರಕಾರ ನೀಡತ್ತಾ ಅಥವಾ ಇಲ್ಲವೋ ಎಂಬುದನ್ನ ನೌಕರರು ಕಾದು ನೋಡುತ್ತಿದ್ದಾರೆ.