ಸರ್ಕಾರಿ ನೌಕರರಿಗೆ ಕೋವಿಡ್-19 ಪರೀಕ್ಷೆ ಕಡ್ಡಾಯ- ಶಶಿಧರ ಮಾಡ್ಯಾಳ ತಹಶೀಲ್ದಾರ
1 min readಹುಬ್ಬಳ್ಳಿ: ಸರ್ಕಾರ ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಹುಬ್ಬಳ್ಳಿ ಶಹರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್-19 ಪರೀಕ್ಷೆ ಮಾಡಿಸುವುದು ಕಡ್ಡಾಯವಾಗಿದೆ ಎಂದು ಹುಬ್ಬಳ್ಳಿ ನಗರ ತಹಶೀಲ್ದಾರ್ ಶಶಿಧರ ಮಾಡ್ಯಾಳ ಹೇಳಿದರು.
ಈ ಕುರಿತು ಮಿನಿವಿಧಾನ ಸೌಧದಲ್ಲಿ ಎಲ್ಲಾ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಜರುಗಿಸಿ ಅವರು ಮಾತನಾಡಿದರು.
ಹುಬ್ಬಳ್ಳಿ ಮಿನಿವಿಧಾನ ಸೌಧಲ್ಲಿ ಹಲವು ಇಲಾಖೆಗಳ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿದಿನ ಸಾವಿರಾರು ಸಾರ್ವಜನಿಕರು ಕೆಲಸ ಕಾರ್ಯಗಳಿಗೆ ಭೇಟಿ ನೀಡುತ್ತಾರೆ. ಅದರಲ್ಲಿ ಯಾರು ಸೋಂಕಿತರು ಎಂಬು ತಿಳಿದು ಬರುವುದಿಲ್ಲ. ಲಕ್ಷಣ ರಹಿತ ಸೋಂಕಿತರ ಸಂಖ್ಯೆ ಜಾಸ್ತಿ ಇದೆ. ಇಂತಹ ಸಂದರ್ಭದಲ್ಲಿ ಸರ್ಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೋವಿಡ್ ಸೋಂಕು ತುತ್ತಾಗುವ ಸಾಧ್ಯತೆ ಇರುತ್ತಿದೆ. ಕಚೇರಿಯಲ್ಲಿ ಲಕ್ಷಣ ರಹಿತ ಕೋವಿಡ್ ಸೋಂಕಿತರು ಸುತ್ತು ಮುತ್ತ ಇದ್ದರೂ ತಿಳಿದು ಬರುವುದಿಲ್ಲ. 50 ವರ್ಷದ ದಾಟಿದ ಸಿಬ್ಬಂದಿ ಅಧಿಕಾರಿಗಳಿಗೆ ಇದರಿಂದ ತೊಂದರೆ ಹೆಚ್ಚು. ಆದ್ದರಿಂದ ಎಲ್ಲಾ ಸಿಬ್ಬಂದಿ ಅನುಕೂಲಕ್ಕಾಗಿ ಮಿನಿವಿಧಾನ ಸೌಧದಲ್ಲೇ ಕೋವಿಡ್-19 ಪರೀಕ್ಷೆ ಮಾಡಿಸಲಾಗುವುದು. ಎಲ್ಲಾರೂ ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅಧಿಕಾರಿಗಳು ತಮ್ಮ ಸಿಬ್ಬಂದಿಗೆ ಇದರ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಭಯ ಪಡುವ ಅಗತ್ಯವಿಲ್ಲ ತಾಲೂಕು ಆಡಳಿತ ವತಿಯಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಲಕ್ಷಣ ರಹಿತ ಸೋಂಕು ಇದ್ದರೆ ಗೃಹ ಪ್ರತ್ಯೇಕ ವಾಸಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.