‘ಅಪ್ಪ-ಮಗ’ ಸೇರಿಸಿದ ‘ಅಪ್ಪಣ್ಣ’ -ಮನೆಯಂಗಳದ ನಗುವನ್ನ ಮಡಿಲಿಗೆ ಸೇರಿಸಿದ ಲಾಲಸಾಬ ನದಾಫ
ಹುಬ್ಬಳ್ಳಿ: ಇನ್ನೂ ಜಗತ್ತು ಕಾಣದ ಸಣ್ಣ ಜೀವವದು. ಮನೆಯಲ್ಲಿ ಏನೋ ಅಂದ್ರು ಅಂದುಕೊಂಡು ಸಿಕ್ಕ ವಾಹನಕ್ಕೆ ಕೈ ಮಾಡಿ ಛೋಟಾ ಮುಂಬೈಗೆ ಬಂದುಬಿಟ್ಟಾ. ಹೀಗೇನು ಬಂದು ಬಿಟ್ಟೆ, ಬೆಳಿಗ್ಗೆಯಿಂದ ಹೊಸ ಜೀವನ ಕಟ್ಟಿಕೋಬೇಕು ಎಂದವನಿಗೆ ನೆನಪಾಗಿದ್ದು, ಪತ್ರಿಕೆ ಹಾಕೋ ಕೆಲಸ. ಅದೇ ಕಾರಣಕ್ಕೆ ಆತ ಪ್ರೆಸ್ ಕ್ಲಬ್ ಗೆ ಬಂದು ಪೇಪರ ಹಾಕೋ ಕೆಲ್ಸಾ ಕೊಡಿ ಎನ್ನುತ್ತಿದ್ದ.. ನಂತರ ನಡೆದದ್ದೇ ಬೇರೆ..
ಪತ್ರಕರ್ತರ ಸಂಘದ ಕಾರ್ಯಾಲಯದ ಸಹಾಯಕನಾಗಿ ಕಾರ್ಯನಿರ್ವಹಿಸುವ ಲಾಲಸಾಬ ನದಾಫನನ್ನ ಎಲ್ಲರೂ ಪ್ರೀತಿಯಿಂದ ಕರೆಯುವುದು ‘ಅಪ್ಪಣ್ಣ’ ಎಂದೇ. ಆ ಅಪ್ಪಣ್ಣನ ಮುಂದೆ ನಿಂತು ಕೆಲಸಕ್ಕೆ ಕೈಚಾಚಿದ್ದು ಈ ಹದಿಮೂರು ವಯಸ್ಸಿನ ಎಳೆಯ.
ಎಂಟನೇಯ ತರಗತಿಯ ಆ ಪೋರನ ಹಾವಭಾವ ನೋಡಿ, ಸಂಶಯಗೊಂಡ ಅಪ್ಪಣ್ಣ, ಕೆಲಸ ಕೊಡ್ತೇನಿ ಎಲ್ಲಿಂದ ಬಂದೆ, ಏನಾಗಿದೆ ಎಂದು ಕೇಳಿದ. ಆತನಿಗೆ ಅಳು ತಡೆಯಲಾಗದೇ ಸತ್ಯವನ್ನ ಬಾಯಿಬಿಟ್ಟ.
ಅಂದ ಹಾಗೇ ಈ ಪೋರ ಮನೆ ಬಿಟ್ಟು ಬಂದವನಾಗಿದ್ದ. ನಾನು ಊರಿಗೆ ಹೋಗಲ್ಲ ಎನ್ನತೊಡಗಿದ. ಅಷ್ಟರಲ್ಲೇ ಅಲ್ಲಿಯೇ ಇದ್ದ ಹಿರಿಯ ಪತ್ರಕರ್ತ ಮಹೇಂದ್ರ ಚವ್ಹಾಣ, ಬಾಲಕನ ವಿವರವನ್ನ ಪಡೆದು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರ ಸುಪರ್ಧಿಯಲ್ಲಿ ಕೊಟ್ಟು, ಪಾಲಕರನ್ನ ಕರೆಸಿ ಅವರೊಂದಿಗೆ ಬಾಲಕನನ್ನ ಮನೆಗೆ ಕಳಿಸಲಾಗಿದೆ.
ಲಾಲಸಾಬ ನದಾಫ್ ಸಮಯಪ್ರಜ್ಞೆ ಬಾಲಕನನ್ನ ಆತನ ಮನೆಗೆ ಮರಳಿ ಕಳಿಸುವಂತೆ ಮಾಡಿದೆ. ಮಗನನ್ನ ಮರಳಿ ಕರೆದುಕೊಂಡು ಹೋಗುವಾಗ ಪಾಲಕರು ಕೂಡಾ ಅಪ್ಪಣ್ಣನಿಗೆ ದೇವರು ಒಳ್ಳೆಯದನ್ನ ಮಾಡ್ಲಿ ಎಂದು ಹರಸಿದ್ದಾರೆ.
ಇಂತಹ ಅಪ್ಪಣ್ಣನಿಗೆ ನೀವೂ ಮಾತಾಡಿ (9945153822), ಒಳ್ಳೆಯ ಕೆಲಸ ಮಾಡೀ ಎಂದು ಹೇಳಿ. ಸುಂದರ ಮನಸ್ಸುಗಳಿಗೆ ಒಂಚೂರು ಖುಷಿ ಸಿಗತ್ತೆ.. ಅಲ್ವಾ..!
ಯರೆಬೆಲೇರಿ ಗ್ರಾಮದ ವೀರೇಶ್ ಪಾತ್ರವು ಸಹ ಬಹು ಮುಖ್ಯವಾದದು. ಆತನಿಂದ ಪಾಲಕರ ಸಂಪರ್ಕ ಸಾಧ್ಯವಾಯಿತು.