ಹುಬ್ಬಳ್ಳಿಯ “ಗೋಲ್ಡನ್ ಹೋಮ್ಸ್ ಬಿಲ್ಡರ್ಸಗೆ” ಆಯೋಗದ ಆದೇಶ…

ಮಾತು ತಪ್ಪಿದ ಗೋಲ್ಡನ್ ಹೋಮ್ಸ್ ಬಿಲ್ಡರ್ಸ್‍ಗೆ ಕ್ರಯ ಪತ್ರ ಬರೆದು ಕೊಡಲು ಗ್ರಾಹಕರ ಆಯೋಗದ ಆದೇಶ
ಧಾರವಾಡ (ಕರ್ನಾಟಕ ವಾರ್ತೆ) ಜು.3: ಹುಬ್ಬಳ್ಳಿಯ ಗೋಕುಲ ರಸ್ತೆಯ ನಿವಾಸಿ ಮಲ್ಲಿಕಾರ್ಜುನ ಕ್ಯಾದಿ ಎನ್ನುವವರು ಗೋಲ್ಡನ್ ಹೋಮ್ಸ ಕಾರ್ಪೋರೆಷನ್‍ರವರು ಹುಬ್ಬಳ್ಳಿ ತಾಲೂಕಿನ ಮಾವನೂರ ಗ್ರಾಮದಲ್ಲಿ ನಿರ್ಮಿಸುತ್ತಿದ್ದ ಬಡಾವಣೆಯ ಪ್ಲಾಟ್ ನಂ.495 ನ್ನು ರೂ.2,40,000 ಗೆ ಖರೀದಿಸಿದ್ದರು. ಈ ಬಗ್ಗೆ ಗೋಲ್ಡನ್ ಹೋಮ್ಸನ ಮಾಲಿಕ ಮಿಲನ್ ಪಾರಿಕ ದೂರುದಾರರಿಗೆ ದಿ:20/03/2007 ರಂದು ಖರೀದಿ ಕರಾರು ಪತ್ರ ಬರೆದುಕೊಟ್ಟಿದ್ದರು. ದೂರುದಾರರು ಕಂತಿನ ರೂಪದಲ್ಲಿ ಪೂರ್ತಿ ಹಣ ಸಂದಾಯ ಮಾಡಿದ್ದರು. ನಂತರ ಹಲವು ಬಾರಿ ಮೌಖಿಕವಾಗಿ ಮತ್ತು ಪತ್ರದ ಮೂಲಕ ವಿನಂತಿಸಿದರು ಎದುರುದಾರ ಗೋಲ್ಡನ್ ಹೋಮ್ಸರವರು ದೂರುದಾರರಿಗೆ ಖರೀದಿ ಪತ್ರ ನೊಂದಣಿ ಮಾಡಿಕೊಟ್ಟಿರಲಿಲ್ಲ. ತಮ್ಮ ಹಣವನ್ನು ಎದುರುದಾರರು ವಾಪಸ್ಸು ಕೊಟ್ಟಿರಲಿಲ್ಲ. ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಎದುರುದಾರ ಗೋಲ್ಡನ್ ಹೋಮ್ಸರವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರ ಮತ್ತು ಎದುರುದಾರ ಗೋಲ್ಡನ್ ಹೋಮ್ಸರವರ ಮದ್ಯ 2007 ರಲ್ಲಿ ಪ್ಲಾಟ್ ಖರೀದಿಯ ಬಗ್ಗೆ ಖರೀದಿ ಕರಾರು ಪತ್ರ ಆಗಿದೆ. ಆ ಪತ್ರದಂತೆ ದೂರುದಾರರು ಎದುರುದಾರರಿಗೆ ಖರೀದಿಯ ಪೂರ್ತಿ ಹಣ ರೂ.2,40,000 ಸಂದಾಯ ಮಾಡಿದ್ದಾರೆ. ಖರೀದಿ ಕರಾರು ಪತ್ರದ ಷರತ್ತಿನಂತೆ ದೂರುದಾರರಿಗೆ ಖರೀದಿ ಪತ್ರ ನೋಂದಣಿ ಮಾಡಿಕೊಡುವುದು ಎದುರುದಾರರ ಹೊಣೆ ಮತ್ತು ಕರ್ತವ್ಯವಾಗಿದೆ. ಈವರೆಗೆ ದೂರುದಾರರು ಹಲವಾರು ಬಾರಿ ವಿನಂತಿಸಿದರೂ ಎದುರುದಾರರು ದೂರುದಾರರಿಗೆ ಖರೀದಿ ಪತ್ರ ನೋಂದಣಿ ಮಾಡಿಕೊಟ್ಟಿಲ್ಲ. ಅಥವಾ ದೂರುದಾರರಿಗೆ ಖರೀದಿ ಮುಂಗಡ ಹಣ ವಾಪಸ್ಸು ಕೊಟ್ಟಿಲ್ಲ. ಅಂತಹ ಎದುರುದಾರ ಗೋಲ್ಡನ್ ಹೋಮ್ಸರವರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯಿದೆಯಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತ ಆಯೋಗ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ತೀರ್ಪು ನೀಡಿದ ಒಂದು ತಿಂಗಳೊಳಗಾಗಿ ದೂರುದಾರರಿಗೆ ಅವರು ಖರೀದಿಸಿದ ಪ್ಲಾಟ್ ನಂ.495 ನ್ನು ಹುಬ್ಬಳ್ಳಿಯ ಸಬ್ ರಿಜಿಸ್ಟ್ರಾರ ಕಛೇರಿಯಲ್ಲಿ ನೊಂದಣಿ ಮಾಡಿಕೊಡುವಂತೆ ಆಯೋಗ ಎದುರುದಾರ ಗೋಲ್ಡನ್ ಹೋಮ್ಸ ಮಾಲೀಕರಿಗೆ ನಿರ್ಧೇಶಿಸಿದೆ. ಒಂದು ತಿಂಗಳೊಳಗಾಗಿ ಎದುರುದಾರರು ಖರೀದಿ ಪತ್ರ ನೋಂದಣಿ ಮಾಡಿಕೊಡದ್ದಿದ್ದರೆ ದೂರುದಾರರು ಆಯೋಗದ ಮೂಲಕ ಕೋರ್ಟ ಕಮಿಷನ್ ನೇಮಿಸಿಕೊಂಡು ಆ ಖರೀದಿ ಪತ್ರ ಮಾಡಿಕೊಳ್ಳಲು ಅರ್ಹರಿದ್ದಾರೆಂದು ಆದೇಶಿಸಿದೆ. ನೋಂದಣಿ ಖರ್ಚು ವೆಚ್ಚವನ್ನು ದೂರುದಾರರೆ ನಿಬಾಯಿಸುವಂತೆ ಸೂಚಿಸಿದೆ.