ನೀರಲ್ಲಿ ಕೊಚ್ಚಿ ಹೋದ ಬಾಲಕಿ ಶವವಾಗಿ ಪತ್ತೆ: ಮೂರುದಿನದ ಕಾರ್ಯಾಚರಣೆ
ಧಾರವಾಡ: ಕಲಘಟಗಿ ತಾಲೂಕಿನ ಗಂಜಿಗಟ್ಟಿ ಗ್ರಾಮದ ಹಿರೇಕೆರೆ ನೀರಿನ ಸೆಳವಿನಲ್ಲಿ ತೇಲಿ ಹೋಗಿದ್ದ, 8 ವರ್ಷದ ಬಾಲಕಿ ಶ್ರೀದೇವಿ ಹನುಮಂತಪ್ಪ ಗಾಣಿಗೇರ ದೇಹ ಇದೀಗ ತೇಲಿ ಹೋದ ಸ್ಥಳದ ಸುಮಾರು ಒಂದೂವರೆ ಕಿ.ಮೀ.ಅಂತರದಲ್ಲಿ ಪತ್ತೆಯಾಗಿದೆ.
ಅಗಸ್ಟ್ 6 ರಂದು ಈ ಬಾಲಕಿ ನೀರಿನ ಸೆಳವಿಗೆ ಸಿಕ್ಕು ತೇಲಿ ಹೋಗಿದ್ದಳು. ಅಂದಿನಿಂದ ನಿರಂತರವಾಗಿ ಎನ್ ಡಿ ಆರ್ ಎಫ್ ಹಾಗೂ ಅಗ್ನಿಶಾಮಕ ಹಾಗೂ ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಹಗಲು-ರಾತ್ರಿ ಕಾರ್ಯಾಚರಣೆ ನಡೆಸಿದ್ದರು. ಬಾಲಕಿಯ ದೇಹ ಪತ್ತೆಯಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು. ಬಾಲಕಿಯ ಕುಟುಂಬಕ್ಕೆ ಶೀಘ್ರವೇ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಆತುರದ ನಿರ್ಧಾರ ಬೇಡ
ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು , ಗ್ರಾಮೀಣ ಭಾಗದ ನಿವಾಸಿಗಳು ತುಂಬಿ ಹರಿಯುವ ಹಳ್ಳ,ಕೊಳ್ಳಗಳನ್ನು ರಭಸದ ಸಂದರ್ಭದಲ್ಲಿ ದಾಟಲು ಆತುರ ಪಡಬಾರದು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.
ನೀರು ಇಳಿಮುಖವಾಗುವವರೆಗೂ ತಾಳ್ಮೆಯಿಂದ ಇರಬೇಕು, ಸ್ಥಳೀಯ ಸ್ವಯಂ ಸೇವಕರು, ಅತಿವೃಷ್ಟಿ ನಿರ್ವಹಣಾ ಸಿಬ್ಬಂದಿಯ ನೆರವು ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.