ಹುಬ್ಬಳ್ಳಿ ಎಪಿಎಂಸಿ ಠಾಣೆಯಲ್ಲಿನ “ಗಾಂಜಾ” ಎಲ್ಲಿ ಹೋಯಿತು…!? ಸತ್ಯಕ್ಕೆ ಮೊಳೆ….!?

ಹುಬ್ಬಳ್ಳಿ: ಅವಳಿನಗರದ ಪೊಲೀಸರು ತಲೆತಗ್ಗಿಸುವಂತಹ ಕೆಲಸ ಮಾಡಿ ಅಮಾನತ್ತಾಗಿರುವ ಪ್ರಕರಣದಲ್ಲಿ ವಶಕ್ಕೆ ಪಡೆದ ಗಾಂಜಾ ಎಲ್ಲಿ ಹೋಯಿತು ಎಂಬುದು ಇನ್ನೂ ಚಿದಂಬರ ರಹಸ್ಯವಾಗಿಯೇ ಉಳಿದಿದೇಯಾ ಅಥವಾ ಹಾಗೆ ಮಾಡಲಾಗುತ್ತಿದೇಯಾ ಎಂಬ ಪ್ರಶ್ನೆ ಮೂಡಿದೆ.

ಹುಬ್ಬಳ್ಳಿಯ ಎಪಿಎಂಸಿ ಠಾಣೆಯ ಪೊಲೀಸರಿಗೆ ಮಾಹಿತಿದಾರನೊಬ್ಬ ಗಾಂಜಾ ಸಾಗಾಟ ಮತ್ತು ಮಾರಾಟದ ಬಗ್ಗೆ ಮಾಹಿತಿ ನೀಡಿ, ಮಾಲು ಸಮೇತ ಸಿಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದ. ಆದರೆ, ಪೊಲೀಸರು ಆರೋಪಿಗಳನ್ನ ಬಿಟ್ಟು ಕಳಿಸಿ ‘161’ ಮಾಡಿದ್ದರೆಂಬುದು ಬಹಿರಂಗಗೊಂಡಿತ್ತು.

ದಕ್ಷ ಅಧಿಕಾರಿಗಳಾದ ಪೊಲೀಸ್ ಕಮೀಷನರ್ ಲಾಬುರಾಮ್ ಮತ್ತು ಡಿಸಿಪಿ ಕೆ.ರಾಮರಾಜನ್ ಅವರು ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು, ತನಿಖೆಯನ್ನ ನಡೆಸಿ, ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಸೇರಿ ಏಳು ಪೊಲೀಸರನ್ನ ಅಮಾನತ್ತು ಮಾಡಿದ್ದರು.

ಇಷ್ಟೇಲ್ಲ ನಡೆದ ನಂತರ ಪ್ರಕರಣದ ತನಿಖೆಯ ಜವಾಬ್ದಾರಿಯನ್ನ ಧಾರವಾಡದ ಎಸಿಪಿ ಜೆ.ಅನುಷಾ ಅವರಿಗೆ ನೀಡಲಾಗಿತ್ತು. ಡಿಸಿಪಿ ಕೆ.ರಾಮರಾಜನ್ ಅವರ ಮುಂದೆ ಹೇಳಿಕೆ ನೀಡಿದ ಭದ್ರಾಪುರದ ಅಸ್ಪಾಕ ಎಂಬ ಗಾಂಜಾ ಗಿರಾಕಿಯ ಹೇಳಿಕೆಯನ್ನ ಬದಲಾವಣೆ ಮಾಡಿಸುವ ತಂತ್ರವನ್ನ ಗೋಕುಲ ಠಾಣೆಯ ಮೇಧಾವಿ ಸಿಬ್ಬಂದಿಗಳಿಬ್ಬರು ಪ್ರಯತ್ನ ಮಾಡಿದ್ದರು.

ಘಟನೆ ನಡೆದು, ಅಮಾನತ್ತಾಗಿ ಸುಮಾರು ದಿನಗಳು ಕಳೆದರೂ ವಶಕ್ಕೆ ಪಡೆದ ಗಾಂಜಾ ಎಲ್ಲಿದೆ ಎಂಬ ಮಾಹಿತಿಯನ್ನ ಕಲೆ ಹಾಕಲು ಆಗದೇ ಇರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ದಕ್ಷತೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಎಸಿಪಿ ಜೆ.ಅನುಷಾ ಅವರಿಗೂ ಇದು ಗೊತ್ತಾಗಿಲ್ಲವೇ ಎಂಬುದು ಹಲವರನ್ನ ಹುಬ್ಬೇರಿಸುವಂತೆ ಮಾಡಿದೆ.
ಬೇಲಿ ರೂಪದಲ್ಲಿದ್ದ ಪೊಲೀಸರು ಗಾಂಜಾವನ್ನ ಮೇಯ್ದದ್ದು ಎಲ್ಲಿ ಎಂಬುದನ್ನ ಪತ್ತೆ ಹಚ್ಚಿ, ಇಲಾಖೆಯಲ್ಲಿನ ಕಸವನ್ನ ಪೊಲೀಸ್ ಕಮೀಷನರ್ ಅವರು ಹೊರಗೆ ಹಾಕುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.