ಹುಬ್ಬಳ್ಳಿ ಎಪಿಎಂಸಿ ಠಾಣೆಯ ಗಾಂಜಾ ಕೇಸ್ ಏನಾಯ್ತು ಕಮೀಷನರ್ ಸಾಹೇಬ್ರೆ…!

ಹುಬ್ಬಳ್ಳಿ: ಮಾಹಿತಿದಾರ ನೀಡಿದ್ದ ಮಾಹಿತಿಯ ಮೇರೆಗೆ ಗಾಂಜಾದ ದಾಳಿ ಮಾಡಿ, ಆರೋಪಿಗಳನ್ನ ಹಿಡಿದು ಬಿಟ್ಟಿದ್ದ ಪ್ರಕರಣದಲ್ಲಿ ಅಮಾನತ್ತು ಮಾಡಿ, ಕೈತೊಳೆದುಕೊಂಡಿರುವ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಗಾಂಜಾ ಎಲ್ಲಿ ಹೋಯಿತು ಎಂಬುದನ್ನ ಇನ್ನೂ ಪತ್ತೆ ಮಾಡದೇ ಇರುವುದು ಅಚ್ಚರಿ ಮೂಡಿಸಿದೆ.

ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆಯಲ್ಲಿ ‘161’ ದಾಳಿ ಮಾಡಿ ಆರೋಪಿಗಳನ್ನ ಹಣಕ್ಕಾಗಿ ಬಿಟ್ಟು ಕಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಗಾವಣೆಗೊಂಡ ಡಿಸಿಪಿ ಕೆ.ರಾಮರಾಜನ್ ನೀಡಿದ, ತನಿಖಾದೇಶವನ್ನ ಪರಿಗಣನೆಗೆ ತೆಗೆದುಕೊಂಡು ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಇನ್ಸಪೆಕ್ಟರ್ ವಿಶ್ವನಾಥ ಚೌಗಲೆ ಸೇರಿ ಏಳು ಸಿಬ್ಬಂದಿಗಳನ್ನ ಅಮಾನತ್ತು ಮಾಡಿದ್ದರು.
ಇದಾಗಿ ಒಂದು ತಿಂಗಳಕ್ಕೂ ಹೆಚ್ಚು ಕಾಲ ಸವೆದರೂ, ಇನ್ನೂ ಪ್ರಕರಣವನ್ನ ಪತ್ತೆ ಮಾಡಲು ಆಗದೇ ಇರುವುದು ಹಲವು ಸಂಶಯಗಳಿಗೆ ಕಾರಣವಾಗುತ್ತಿದೆ. ಡಿಸಿಪಿ ಮಟ್ಟದಲ್ಲಿಯೇ ತನಿಖೆ ಮಾಡಿದ್ದನ್ನ, ಎಸಿಪಿ ಜೆ.ಅನುಷಾ ಅವರಿಗೆ ವಹಿಸಲಾಗಿತ್ತು. ಆದರೆ, ಅದರ ಫಲಿತಾಂಶ ಮಾತ್ರ ಹೊರಗಡೆ ಬರುತ್ತಲೇ ಇಲ್ಲಾ.
ಪೊಲೀಸರಿಂದ ಬಂಧಿತರಾಗಿ ಹಣ ಕೊಟ್ಟು ಹೊರಗೆ ಬಂದವರನ್ನ ಪದೇ ಪದೇ ಕರೆದು ಹೇಳಿದ್ದನ್ನೇ ನೂರೆಂಟು ಬಾರಿ ಕೇಳುವ ಪ್ರಯತ್ನವನ್ನ ಮಾಡಲಾಗುತ್ತಿದೆ ಹೊರತು, ಗಾಂಜಾ ಕೇಸ್ ಲ್ಲಿ ಬಂಧನಕ್ಕೆ ಒಳಗಾಗಬೇಕಾದವರು ಯಾರೂ ಎಂಬುದನ್ನ ಹೇಳುತ್ತಿಲ್ಲ.

ಅಸಲಿಯಾಗಿ ಗಾಂಜಾ ಮಾರಾಟ ಮಾಡಲು ಯತ್ನಿಸಿದ್ದ ಭದ್ರಾಪೂರದ ಆಸೀಫ ಸೇರಿದಂತೆ ಎಲ್ಲರೂ ಹೊರಗೆ ಬಿಂದಾಸ್ ಅಲೆಯುತ್ತಿದ್ದಾರೆ. ಆರೋಪಿಗಳಿಂದ ಗಾಂಜಾ ಸಮೇತ ಎಲ್ಲವನ್ನೂ ತಿಂದು ತೇಗಿದವರು, ಹೊರಗೆ ಅಲೆಯುತ್ತಿದ್ದಾರೆ. ಹಾಗಾದ್ರೇ, ಕೇಸನ್ನ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೇಯಾ ಎಂದು ಜನ ಕೇಳುತ್ತಿದ್ದಾರೆ.

ದಕ್ಷ ಅಧಿಕಾರಿ ಲಾಬುರಾಮ್ ಅವರು ಈ ಪ್ರಕರಣದ ಸತ್ಯಾಸತ್ಯತೆಯನ್ನ ಬೇಗನೆ ಹೊರಗೆ ಹಾಕಿ, ಗಾಂಜಾವನ್ನ ಮಾರಾಟ ಮಾಡಿದವರನ್ನ ಬಂಧನ ಮಾಡಬೇಕಿದೆ.