ದೇಶಪಾಂಡೆನಗರದ ಗಾನವಿಧುಷಿಯ “ಗಂಗಾ ಲಹರಿ” ಸಂಕಟದಲ್ಲಿ…!
1 min readಹುಬ್ಬಳ್ಳಿ: ಗಾನವಿಧುಷಿ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಅವರ 90ನೇ ವಯಸ್ಸಿನ ಎರಡನೇಯ ಮಗ ಬಾಬುರಾವ್ ಹಾನಗಲ್ ತಮ್ಮ ತಾಯಿ ಡಾ.ಗಂಗೂಬಾಯಿ ಹಾನಗಲ್ ಅವರು ವಾಸಿಸಿದ್ದ ದೇಶಪಾಂಡೆನಗರದಲ್ಲಿನ ‘ಗಂಗಾ-ಲಹರಿ’ಯ ಹಿಂದೂಸ್ತಾನಿ ಸಂಗೀತ ಮ್ಯೂಸಿಯಂನ್ನ ರಾಜ್ಯ ಸರಕಾರಕ್ಕೆ ಒಪ್ಪಿಸಲು ಮುಂದಾಗಿದ್ದಾರೆ.
ಬಾಬುರಾವ ಹಾನಗಲ್ ಅವರ ಪುತ್ರಿ ಅನಿತಾ ಹಾಗೂ ಅಳಿಯ ಮಹೇಶ ಅವರು ಗಂಗಾ ಲಹರಿಗೆ ಅನಧಿಕೃತವಾಗಿ ಪ್ರವೇಶಿಸಿದ್ದಲ್ಲದೇ, ಮ್ಯೂಸಿಯಂನ ಬೀಗ ಮುರಿದಿರುವುದಕ್ಕೆ ಘಾಸಿಗೊಂಡಿರುವ ಬಾಬುರಾವ್ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ.
ತಮ್ಮ ತಾಯಿ ಡಾ.ಗಂಗೂಬಾಯಿ ಹಾನಗಲ್ ಕೊನೆಯುಸಿರಿರುವರೆಗೆ ಸಾಥ್ ನೀಡಿದ್ದ ಬಾಬುರಾವ್ ಹಾನಗಲ್ ತನ್ನ ಮಗ ಮನೋಜ ಹಾನಗಲ್ 2019ರ ಮೇ ನಲ್ಲಿ ತೀರಿಕೊಂಡ ನಂತರ, ಬೆಂಗಳೂರಿನಲ್ಲಿದ್ದ ತಮ್ಮ ಇನ್ನೊಬ್ಬ ಮಗನ ಬಳಿ ತೆರಳಿದ್ದರು.
ತದನಂತರ ಲಾಕ್ ಡೌನ್ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಬಂದಿರಲಿಲ್ಲ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಮಗಳು ಅನಿತಾ ಹಾಗೂ ಅಳಿಯ ಮಹೇಶ ಯಾರದ್ದೆ ಪರವಾನಿಗೆಯನ್ನೂ ಪಡೆಯದೇ ಗಂಗಾ ಲಹರಿಗೆ ಪ್ರವೇಶಿಸಿದ್ದಲ್ಲದೇ, ಹಿಂದೂಸ್ತಾನಿ ಮ್ಯೂಸಿಯಂನ ಬೀಗ ಮುರಿದು ಕಳೆದ ಸೋಮವಾರ ಒಳನುಸುಳಿದ್ದರು.
ಮ್ಯೂಸಿಯಂನಲ್ಲಿ 120ಕ್ಕೂ ಹೆಚ್ಚು ಹಿಂದೂಸ್ತಾನಿ ವಾಧ್ಯಗಳು, 55 ರಾಷ್ಟ್ರೀಯ, ರಾಜ್ಯ ಪ್ರಶಸ್ತಿಗಳು, ಪದ್ಮಭೂಷಣ, ಪದ್ಮವಿಭೂಷಣ ಫಲಕಗಳು ಹಾಗೂ 500ಕ್ಕೂ ಹೆಚ್ಚು ಅಪರೂಪದ ಭಾವಚಿತ್ರಗಳಿದ್ದವು. ಪ್ರಮುಖವಾಗಿ ತಾನಸೇನ, ಮಿರ್ಜಾ ಗಾಲಿಬ್, ಅಮೀರ ಖುಸ್ರು, ಪಂಡಿತ ಭೀಮಸೇನ ಜೋಶಿ, ಕುಮಾರ ಗಂಧರ್ವ, ಬಸವರಾಜ ರಾಜಗುರು ಭಾವಚಿತ್ರಗಳಿದ್ದವು. ಇದನ್ನು ಪಂಡಿತ ಜಸರಾಜ್ ಅವರು ಉದ್ಘಾಟಿಸಿದ್ದರು.
1963ರಲ್ಲಿ ಡಾ.ಗಂಗೂಬಾಯಿ ಹಾನಗಲ್ ಅವರ ತಾಯಿಯ ನಿಧನದ ನಂತರ ಬಾಬುರಾವ್ ಹಾನಗಲ್ ತಮ್ಮ ತಾಯಿಯ ಸೇವೆಯಲ್ಲಿ ತೊಡಗಿದ್ದರು. ಡಾ.ಗಂಗೂಬಾಯಿವರಿಗೆ ಮೂವರು ಮಕ್ಕಳು. ಹಿರಿಯ ಮಗಳು ಕೃಷ್ಣಾ ಹಾನಗಲ್, ಬಾಬುರಾವ್ ಹಾನಗಲ್ ಹಾಗೂ ನಾರಾಯಣರಾವ್ ಹಾನಗಲ್. ಈ ಪೈಕಿ ಕೃಷ್ಣಾ ಹಾನಗಲ್ ನಿಧನರಾಗಿದ್ದು, ಬಾಬುರಾವ್ ಹಾಗೂ ನಾರಾಯಣರಾವ್ ಅವರೇ ಡಾ.ಗಂಗೂಬಾಯಿಯವರ ಆಸ್ತಿಗಳ ವಾರಸುದಾರರು.
ಮೂಲಗಳ ಪ್ರಕಾರ ಡಾ.ಗಂಗೂಬಾಯಿಯವರ ಪುತ್ರ ಬಾಬುರಾವ ಹಾನಗಲ್ ಹಾಗೂ ಅವರ ಸುಪುತ್ರ ಅರುಣ ಹಾನಗಲ್, ಮಗಳು ಮಾಧವಿ ಜೋಶಿ (ಪುಣೆ) ಅವರು ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ದೂರು ನೀಡಿ, ಗಂಗಾ ಲಹರಿಯನ್ನ ಅನಿತಾ ಹಾಗೂ ಮಹೇಶ ಅವರ ಹಿಡಿತದಿಂದ ಬಿಡಿಸಿಕೊಡುವಂತೆ ಪ್ರಕರಣ ದಾಖಲು ಮಾಡಿದ್ದಾರೆಂದು ಹೇಳಲಾಗಿದೆ.