ರಾಜ್ಯಾಧ್ಯಂತ ಸಕ್ಕತ್ ವೈರಲ್ ಆಗಿದೆ ಚಪ್ಪಲಿ ಗುರುತಿನ ಗಂಗಮ್ಮನ ಚುನಾವಣಾ ತಂತ್ರ..!

ತುಮಕೂರು: ನೀವೂ ಯಾವತ್ತೂ ಇಂತಹ ಪ್ರಚಾರದ ಕರಪತ್ರವನ್ನ ನೋಡಿರಲೂ ಸಾಧ್ಯವೇಯಿಲ್ಲ. ಇಲ್ಲಿ ಸರಿ ತಪ್ಪುಗಳ ಲೆಕ್ಕಾಚಾರದ ಅವಶ್ಯಕತೆಯನ್ನ ನೋಡುವ ಹಾಗಿಲ್ಲ. ಗೆಲುವಿಗೆ ಏನೂ ಬೇಕೋ ಅದನ್ನ ಮಾಡುವುದಷ್ಟೇ ಮುಖ್ಯ. ಹಾಗೇ ಸಿದ್ಧವಾಗಿದೆ ಈ ಪ್ರಚಾರದ ಕರಪತ್ರ.
ತುಮಕೂರು ಜಿಲ್ಲೆಯ ಹೆಬ್ಬೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಕಲ್ಕೆರೆ ಗ್ರಾಮದ ಗಂಗಮ್ಮ ಎಚ್, ವಿಶಿಷ್ಟವಾದ ಕರಪತ್ರವನ್ನ ಸಿದ್ಧಪಡಿಸಿದ್ದಾರೆ. ಗೆದ್ದರೇ ಮಾಡುವ ಕೆಲಸಗಳೇನು ಎಂಬುದನ್ನ ನೋಡುವುದಕ್ಕಿಂತ ಸೋತರೇ ಮಾಡುವ ಕೆಲಸಗಳ ಪಟ್ಟಿ ಎಲ್ಲರಲ್ಲೂ ಕೌತುಕ ಮೂಡಿಸುವಂತಿದೆ.
ಸೋತರೇ ಮಾಡುವ ಪ್ರಮುಖ ಕೆಲಸದಲ್ಲಿ 25 ಕುಟುಂಬಗಳು ಅನರ್ಹವಾಗಿ ರೇಷನ್ ಕಾರ್ಡ ಪಡೆದಿರುವುದನ್ನ ರದ್ದು ಮಾಡಿಸುವುದೇ ಇವರ ಮೊದಲ ಗುರಿಯಾಗಿದೆ. ಈ ಗ್ರಾಮದಲ್ಲಿ 2019 ಗಣತಿಯ ಪ್ರಕಾರ 128 ಕುಟುಂಬಗಳು ವಾಸಿಸುತ್ತವೆ. ಇದರ ಪೈಕಿ 76 ಕುಟುಂಬಗಳು ಒಂದಿಲ್ಲಾ ಒಂದು ರಗಳೆಯಲ್ಲಿ ಇವೆ ಎಂಬುದನ್ನ ನೇರವಾಗಿ ಅಲ್ಲದಿದ್ದರೂ, ಕರಪತ್ರದಲ್ಲಿ ಬೇರೆಯದ್ದೇ ಥರದಲ್ಲಿ ಗಂಗಮ್ಮ ವಿವರಣೆ ನೀಡಿದ್ದಾರೆ.
ಇದು ಅಪರೂಪದ ಕರಪತ್ರವಾಗಿದ್ದು, ಶಿಕ್ಷಣ ಸಚಿವ ಸುರೇಶಕುಮಾರ ಅವರು ಕೂಡಾ ಇದನ್ನ ಇಷ್ಟಪಟ್ಟು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟಿನಲ್ಲಿ ಶೇರ್ ಮಾಡಿದ್ದಾರೆ. ಇದು ಗಂಗಮ್ಮಳ ಕಮಾಲ್ ಎನ್ನಬೇಕೋ, ಗೆಲ್ಲುವ ದಾರಿಯನ್ನ ಹೀಗೂ ಕಂಡು ಕೊಳ್ಳಬಹುದೆನ್ನಬೇಕೋ.. ನೀವೇ ನಿರ್ಧರಿಸಿ.. ಅಂದ ಹಾಗೇ ಗಂಗಮ್ಮ ಎಚ್ ಅವರ ಗುರುತು ಚಪ್ಪಲಿ.. ಚಪ್ಪಲಿ.. ಚಪ್ಪಲಿ..