“ಕಷ್ಟಜೀವಿ ಗಣಪತಿ” ಜರತಾರಘರಗೆ ಹುಧಾ ಧೀಮಂತ ಪ್ರಶಸ್ತಿ…
1 min readಹುಬ್ಬಳ್ಳಿ: ಮಹಾನಗರ ಪಾಲಿಕೆಯು ರಾಜ್ಯೋತ್ಸವದ ಅಂಗವಾಗಿ ಕೊಡ ಮಾಡುವ ಧೀಮಂತ ಪ್ರಶಸ್ತಿಗೆ ಛಾಯಾಗ್ರಹಣ ವಿಭಾಗದಲ್ಲಿ ಹಿರಿಯ ಪೋಟೋಗ್ರಾಫರ್ ಗಣಪತಿ ಜರತಾರಘರ ಅವರನ್ನ ಆಯ್ಕೆ ಮಾಡುವ ಮೂಲಕ, ಪ್ರಶಸ್ತಿಯ ಗೌರವವನ್ನ ಹೆಚ್ಚಿಸಲಾಗಿದೆ.
ಗಣಪತಿ ಅವರು ಮೂರು ದಶಕಗಳಿಗಿಂತ ಹೆಚ್ಚಿನ ಸಮಯ ಹುಬ್ಬಳ್ಳಿಯ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದರು. ನಗರದ ಕ್ಷತ್ರಿ ಸ್ಟುಡೀಯೋದಿಂದ ಆರಂಭಗೊಂಡಿದ್ದ ಜೀವನ ಸ್ವಂತ ಸ್ಟುಡಿಯೋ ಹಾಕುವವರೆಗೂ ಬೆಳೆದು ನಿಂತಿದ್ದರು.
ಪ್ರತಿಷ್ಠಿತ ಸಂಯುಕ್ತ ಕರ್ನಾಟಕ, ಸಂಜೆದರ್ಪಣ ಸೇರಿದಂತೆ ಹಲವು ಪ್ರಮುಖ ಪತ್ರಿಕೆಗಳಲ್ಲಿ ಇವರ ಪೋಟೋಗಳು ಮುದ್ರಿತಗೊಂಡಿವೆ. ಪತ್ರಿಕೆಗಳ ಮೇಲಿನ ಪ್ರೀತಿ ಗಣಪತಿ ಅವರಿಗೆ ಎಷ್ಟಿತ್ತು ಅಂದರೇ, ಇಂದು ಅವರ ಕಿರಿಯ ಪುತ್ರ ಮಂಜುನಾಥ ಜರತಾರಘರ ಪ್ರಮುಖ ಪತ್ರಿಕೆಗಳಿಗೆ ಪೋಟೋಗ್ರಾಫರ್ ಆಗಿದ್ದಾರೆ.
ಗಣಪತಿ ಜರತಾರಘರ ಅವರು ಕ್ಷತ್ರಿ ಸ್ಟುಡಿಯೋದಿಂದ ಹೊರಗೆ ಬಂದು ತಮ್ಮ ಸ್ಟುಡಿಯೋ ಹಾಕಿಕೊಳ್ಳಲು ಪರದಾಡಿದ ರೀತಿ ಎಲ್ಲರಿಂದಲೂ ಆಗಲು ಸಾಧ್ಯವಿಲ್ಲ. ಕಿರಿಯರೊಂದಿಗೂ ಅವರ ಒಡನಾಟ ಗೌರವದಿಂದಲೇ ಇರುತ್ತಿತ್ತು.
ಕಮರಿಪೇಟೆ ಎಂದರೇ ಎಲ್ಲರೂ ಬೇರೆಯದೇ ದೃಷ್ಟಿಯಿಂದ ನೋಡುತ್ತಿದ್ದ ಪ್ರದೇಶದಿಂದ ಬಂದ ಗಣಪತಿ ಬಹುತೇಕರ ಅಚ್ಚುಮುಚ್ಚಿನ “ಅಜ್ಜಾ” ಎಂದು ಗುರುತಿಸಿಕೊಂಡಿದ್ದರು.
ಕಷ್ಟಜೀವಿಯಾಗಿ ಹುಬ್ಬಳ್ಳಿಯ ಅಂದ-ಚೆಂದವನ್ನ ಪತ್ರಿಕೆಗಳಲ್ಲಿ ತೋರಿಸುತ್ತಿದ್ದ ಗಣಪತಿ ಅವರಿಗೆ ಈ ಪ್ರಶಸ್ತಿ ಯಾವಾಗಲೋ ಸಿಗಬೇಕಿತ್ತು. ಬಹುತೇಕ ಸಮಯದಲ್ಲಿ ಉತ್ತಮರಿಗೆ ಪ್ರಶಸ್ತಿಗಳು ಸಿಗುವುದು ತಡವಾಗಿಯೇ ಎನ್ನುವಂತೆ, ಇವರಿಗೆ ಈ ವರ್ಷವಾದರೂ ಧೀಮಂತ ಪ್ರಶಸ್ತಿ ಘೋಷಣೆಯಾಗಿದೆ.
ಗಣಪತಿ ಜರತಾರಘರ, ಹುಬ್ಬಳ್ಳಿಯ ಪತ್ರಿಕಾ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯುವ ಹೆಸರಾಗಿದೆ. ಇಂತಹ ಉತ್ತಮ ಕಷ್ಟಜೀವಿಗೆ ಪ್ರಶಸ್ತಿ ಲಭಿಸಿದ್ದು, ಕರ್ನಾಟಕವಾಯ್ಸ್. ಕಾಂ ಅಭಿನಂದನೆ ಸಲ್ಲಿಸತ್ತೆ.