ಪ್ರೂಟ್ ಇರ್ಫಾನ್ ಮಗನ ಮೇಲೆ FIR: ಮಚ್ಚು, ರಾಡ್ ತೋರಿಸಿದ ಬಾಡಿಗಾರ್ಡ್..!

ಧಾರವಾಡ: ನಗರದ ಹೊರವಲಯದಲ್ಲಿರುವ ರಮ್ಯ ರೆಸಿಡೆನ್ಸಿ ಬಳಿಯಲ್ಲಿ ಹತ್ಯೆಯಾದ ಪ್ರೂಟ್ ಇರ್ಫಾನ ಪುತ್ರ ಸೇರಿದಂತೆ ಮೂವರು, ಇಬ್ಬರಿಗೆ ಮಚ್ಚು, ರಾಡ್ ತೋರಿಸಿ ಜೀವ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿದಂತೆ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲವು ತಿಂಗಳುಗಳ ಹಿಂದೆ ಹುಬ್ಬಳ್ಳಿಯ ಅರವಿಂದನಗರದಲ್ಲಿ ಹಾಡುಹಗಲೇ ಹತ್ಯೆಯಾದ ಪ್ರೂಟ್ ಇರ್ಫಾನ್ ಅಲಿಯಾಸ್ ಇರ್ಪಾನ್ ಹಂಚಿನಾಳ ಪುತ್ರನಾದ ಅರಬಾಜ್ ಸಯ್ಯದ ಹಾಗೂ ಆತನ ಜೊತೆಗಿದ್ದ ರಹೀಂ ಹಾಗೂ ಶಾನು ಹಾಗೂ ಅರಬಾಜ್ ಬಾಡಿ ಬಿಲ್ಡರ್ ಎಂಬುವವರು ಇಬ್ಬರಿಗೆ ಧಮಕಿ ಹಾಕಿ ಪಿಸ್ತೂಲ್ ತೋರಿಸಿದ್ದಾರಂತೆ.
ಒಂದು ಕಾಲದಲ್ಲಿ ಪ್ರೂಟ್ ಇರ್ಫಾನ ಜೊತೆಗಿರುತ್ತಿದ್ದ ಮೊಹ್ಮದ ಕುಡಚಿ ಹಾಗೂ ಅಲ್ತಾಫ ಮಾಲಿ ಎಂಬುವವರನ್ನೇ ಕರೆಸಿಕೊಂಡು ಧಮಕಿ ಹಾಕಲಾಗಿದೆ ಎಂದು ಗ್ರಾಮೀಣ ಠಾಣೆಯಲ್ಲಿ ದೂರು ನೀಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಗ್ರಾಮೀಣ ಠಾಣೆಯ ಇನ್ಸಪೆಕ್ಟರ್ ಶ್ರೀಧರ ಸತಾರೆ, ಆರೋಪಿಗಳ ಪತ್ತೆಗಾಗಿ ಜಾಲ ಬೀಸಿದ್ದಾರೆ. ಪೊಲೀಸರಿಗೆ ಹೇಳಿದರೇ ಎರಡೇ ದಿನದಲ್ಲಿ ನಿನ್ನ ಮುಗಿಸುವುದಾಗಿ ಕೂಡಾ ಹೇಳಿದ್ದಾನೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಮೊಹ್ಮದ ಕುಡಚಿ ಎಂಬಾತ ಹತ್ಯೆಯಾದ ಪ್ರೂಟ್ ಇರ್ಫಾನ ಬಳಿಯಲ್ಲಿಯೇ ಇದ್ದ. ಆಗ ಕೆಲವೊಂದಿಷ್ಟು ಆಸ್ತಿಯನ್ನ ಈತನ ಹೆಸರಿಗೆ ಮಾಡಿದ್ದನೆಂಬ ವದಂತಿಗಳಿದ್ದವು. ಇದೀಗ ಅದೇ ವಿಷಯಕ್ಕಾಗಿ ಗಲಾಟೆ ನಡೆದಿರಬಹುದೆಂದು ಹೇಳಲಾಗಿದ್ದು, ಪೊಲೀಸರ ತನಿಖೆಯಿಂದ ಸತ್ಯ ಹೊರಬರಬೇಕಿದೆ.