ಇದ್ದೋಬ್ಬ ಮಗನಿಗೆ ಪೆಟ್ರೋಲ್ ಹಾಕಿ ಸುಟ್ಟ ದುಷ್ಕರ್ಮಿಗಳು
 
        ಬೀದರ: ಯುವಕನೊಬ್ಬನನ್ನು ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಹೃದಯ ವಿದ್ರಾವಕ ಘಟನೆ ಬೀದರ ಜಿಲ್ಲೆಯ ಕಮಲನಗರ ತಾಲೂಕಿನ ಕೋಟಗ್ಯಾಳ ಗ್ರಾಮದ ವ್ಯಾಪ್ತಿಯ ತೊಗರಿ ಗದ್ದೆಯೊಂದರಲ್ಲಿ ಪತ್ತೆಯಾಗಿದೆ.
ಔರಾದ್ ತಾಲೂಕಿನ ನಾಗಮಾರಪಳ್ಳಿ ಗ್ರಾಮದ ಶಿವಕುಮಾರ್ ಹಾವಪ್ಪ(17) ಬರ್ಬರವಾಗಿ ಹತ್ಯೆಯಾದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ದೇವಣಿ ಪಟ್ಟಣದಲ್ಲಿದ್ದ ಸಹೋದರಿ ಮನೆಯಿಂದ ಸ್ವಗ್ರಾಮ ನಾಗಮಾರಪಳ್ಳಿಗೆ ಹಿಂದುರುಗಿ ಬೈಕ್ ಮೇಲೆ ವಾಪಸ್ಸಾಗುವಾಗ ಕಮಲನಗರ ಸಮಿಪದ ಕೋಟಗ್ಯಾಳ ಬಳಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ತಡರಾತ್ರಿವರೆಗೆ ಮಗ ಮನೆಗೆ ಬರಲಾಗದಕ್ಕೆ ಅನುಮಾನಪಟ್ಟ ಕುಟುಂಬಸ್ಥರು ಶಿವಕುಮಾರ ಹಾವಪ್ಪನ ಹುಡುಕಾಟಕ್ಕೆ ಮುಂದಾಗಿದ್ದು ಬೈಕ್ ಪತ್ತೆಯಾಗಿದೆ. ಈ ವೇಳೆಯಲ್ಲಿ ಪೊಲೀಸರ ಸಹಕಾರ ಪಡೆದು ಹುಡುಕಿದಾಗ ಮೃತದೇಹ ಪತ್ತೆಯಾಗಿದೆ. ನಮಗೆ ಇರೋನು ಒಬ್ಬನೆ ಮಗ ನಮದು ಯಾರೊಂದಿಗೆ ಜಗಳ ಇರಲಿಲ್ಲ ಮಗ ಹಿಂಗೆ ಹೆಣವಾಗಿದ್ದು ನಮಗೆ ತಿಳಿಯುತ್ತಿಲ್ಲ ಎಂದು ಮೃತನ ತಾಯಿ ಅರುಣಾಬಾಯಿ ಆಕ್ರಂದನ ಹೊರ ಹಾಕಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್, ಡಿವೈ ಎಸ್ ಪಿ ಡಾ. ದೇವರಾಜ್ ಬಿ ಅವರು ಭೇಟಿ ನೀಡಿದ್ದು ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 
                       
                       
                       
                       
                      
 
                        

 
                 
                 
                